ಪಲ್ಸ್ ಪೊಲೀಯೋ ಮಾದರಿ ರಾಸುಗಳಿಗೂ ಜ್ವರ ಲಸಿಕೆ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ನ. 26
ಪಲ್ಸ್ ಪೊಲೀಯೋ ಲಸಿಕೆ ಹಾಕಿಸುವ ಅಭಿಯಾನದ ಮಾದರಿಯಲ್ಲಿ ರಾಸುಗಳಿಗೆ ಕಾಲು ಬಾಯಿ ಜ್ವರ ಲಸಿಕೆ ಹಾಕಿಸುವ ಬೃಹತ್ ಕಾರ್ಯಕ್ರಮವನ್ನು ಪ್ರತಿವರ್ಷ ಕೈಗೊಂಡು ರಾಸುಗಳ ಸಾವಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ಧಗಂಗಪ್ಪ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳಿಗೆ ಅವೈಜ್ಞಾನಿಕವಾಗಿ ಪರಿಹಾರವನ್ನು ಘೋಷಿಸಿದೆ. ಆದರೆ, ಆರ್ಥಿಕ ನೆರವು ಮತ್ತು ಪರಿಹಾರ ನೀಡುವುದರ ಅರ್ಥದ ವ್ಯತ್ಯಾಸವನ್ನು ತಿಳಿಯದೇ ತಲಾ ಒಂದು ಹಸುವಿಗೆ ಕೇವಲ 25 ಸಾವಿರ ರು. ಗಳ ಪರಿಹಾರವನ್ನು ನೀಡಲು ಮುಂದಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಒಂದು ರಾಸುವಿನ ಬೆಲೆಯೇ 60 ಸಾವಿರ ರು.ಗಳಿಂದ 70 ಸಾವಿರ ವರೆಗೂ ಇದ್ದು ಇದರಿಂದ ರೈತರಿಗೆ ಕಾಲುಬಾಯಿ ಜ್ವರದಿಂದ ತಮ್ಮ ಹಸು ಮೃತಪಟ್ಟ ಹಿನ್ನೆಲೆಯಲ್ಲಿ ಮತ್ತೆ ಹೊಸ ಹಸುವನ್ನು ಖರೀದಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಅಸಮರ್ಪಕ ಲೆಕ್ಕ: ಮೃತಪಟ್ಟಿರುವ ರಾಸುಗಳ ಸಂಖ್ಯೆ ಬಗ್ಗೆ ಅಧಿಕಾರಿಗಳು ನೀಡಿರುವ ಲೆಕ್ಕಾಚಾರ ಅವೈಜ್ಞಾನಿಕವಾಗಿದ್ದು ಶಿಡ್ಲಘಟ್ಟ ತಾಲೂಕೊಂದರಲ್ಲಿಯೇ 300 ಕ್ಕೂ ಹೆಚ್ಚು ರಾಸುಗಳು ಸೇರಿ ಜಿಲ್ಲೆಯಲ್ಲಿ 2 ಸಾವಿರ ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ. ಅಧಿಕಾರಿಗಳು ಹಳ್ಳಿಗಳಲ್ಲಿ ಕಾಲುಬಾಯಿಗೆ ರಾಸುಗಳು ಮೃತಪಟ್ಟಾಗ ಖುದ್ದಾಗಿ ಹೋಗಿ ಮಾಹಿತಿಯನ್ನು ಸಂಗ್ರಹಿಸಿಲ್ಲ.
ಅಲ್ಲದೇ ಪಂಚನಾಮೆ ಮಾಡದೇ ಹೋದರೂ ಬೇರೆ ಬೇರೆ ಕಾರಣಗಳಿಂದ ರಾಸುಗಳು ಮೃತಪಟ್ಟಿವೆ ಎಂಬ ಹೇಳಿಕೆಯನ್ನು ಕೊಟ್ಟು ಕೈ ತೊಳೆದುಕೊಂಡಿದ್ದರಷ್ಟೇ. ಇನ್ನೂ ಆಗಸ್ಟ್ 1 ರಿಂದ ಅಕ್ಟೋಬರ್ 1 ರವರೆಗೆ ಮೃತಪಟ್ಟಿರುವ ರಾಸುಗಳಿಗೆ ಪರಿಹಾರವನ್ನು ನೀಡಲಾಗುವುದು ಎಂದೇಳಿರುವ ಜಿಲ್ಲಾಡಳಿತಕ್ಕೆ ಜುಲೈನಿಂದ ಹಿಡಿದು ಇಲ್ಲಿವರೆಗೂ ಮೃತಪಟ್ಟಿರುವ ರಾಸುಗಳಿಗೆ ಪರಿಹಾರ ನೀಡಬೇಕೆನ್ನುವುದು ತಿಳಿದಿಲ್ಲವೇ ಎಂದರು.
ಈಗಾಗಲೇ ಕೇಂದ್ರ ಕೃಷಿ ಸಚಿವರು ಕಾಲುಬಾಯಿ ಜ್ವರದಿಂದ ಮೃತಪಟ್ಟಿರುವ ರಾಸುಗಳಿಗೆ ಪರಿಹಾರವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದು ರಾಜ್ಯ ಸರ್ಕಾರ 25 ಸಾವಿರ ಮತ್ತು ಕೇಂದ್ರದ 25 ಸಾವಿರ ರು.ಪರಿಹಾರ ಸೇರಿದಂತೆ ತಲಾ ಒಟ್ಟು 50 ಸಾವಿರ ರು. ಪರಿಹಾರವನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿದರು.
ಕಾಲುಬಾಯಿ ಜ್ವರದಿಂದ ಮೃತ ರಾಸುಗಳ ಅಂಕಿ ಅಂಶಗಳಲ್ಲಿ ಗೊಂದಲ, ಸೂಕ್ತ ಪರಿಹಾರ, ಬೃಹತ್ ಲಸಿಕೆ ಹಾಕಿಸುವ ಕಾರ್ಯಕ್ರಮ ಸೇರಿದಂತೆ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಡಿ.3 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚನ್ನರಾಯಪ್ಪ, ಸಂಚಾಲಕ ಬಿ.ಎನ್. ಮುನಿಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

