ಮತ್ತೊಂದು ಸರಗಳವು; ಬೆಚ್ಚಿದ ಜನ
ಕೋಲಾರ: ಕಳೆದ ಒಂದು ವಾರದಿಂದೀಚೆಗೆ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದು ಜನತೆಯನ್ನು ಬೆಚ್ಚುಬೀಳುವಂತೆ ಮಾಡಿರುವುದಲ್ಲದೆ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಹರ ಸಾಹಸ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ನಗರದಲ್ಲಿ ಮಂಗಳವಾರ ರಾತ್ರಿ ಸುಮಾರು 7.45ರ ಸಮಯದಲ್ಲಿ ನಗರಕುಂಟೆ ಸಮೀಪ ಮಹಿಳೆಯ ಕೊರಳಿನಿಂದ ಸುಮಾರು 60 ಗ್ರಾಂ ತೂಕದ ಚಿನ್ನದ ಸರವನ್ನು ದೋಚಿರುವ ಪ್ರಕರಣ ನಡೆದಿದೆ.
ಕುವೆಂಪು ನಗರದ ನಿವಾಸಿಯಾದ ಸುಶೀಲಮ್ಮ ಅವರು ಮನೆಗೆ ನಗರಕುಂಟೆ ಮಾರ್ಗವಾಗಿ ಹೋಗುತ್ತಿದ್ದಾಗ ಪಲ್ಸರ್ ಮೋಟಾರ್ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸರ ಕದ್ದು ಶರವೇಗದಲ್ಲಿ ಪರಾರಿಯಾಗಿದ್ದಾರೆ.
ಈ ಘಟನೆ ನಡೆದ ಐದತ್ತು ನಿಮಿಷದಲ್ಲೇ ಗೌರಿಪೇಟೆಯ 5ನೇ ಕ್ರಾಸ್ ಬಳಿ ತಮ್ಮ ಮನೆಯ ಮುಂದೆ ಮಗುವನ್ನು ಆಡಿಸುತ್ತಿದ್ದ ನೀತು ಎಂಬ ಮಹಿಳೆಯ ಕೊರಳಿನಿಂದ ಚಿನ್ನದ ಸರ ಕದ್ದಿಯಲು ವಿಫಲ ಯತ್ನ ನಡೆಸಿರುವ ಕಳ್ಳರು ಬೈಕ್ನಿಂದ ಕಳೆಗೆ ಬಿದ್ದು ತಕ್ಷಣ ಜನರ ಕೈಗೆ ಸಿಗದೆ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ನಾಗರಕುಂಟೆ ಸಮೀಪದ ಸುಶೀಲಮ್ಮ ಎಂಬುವರ ಕೊರಳಿನಿಂದ ಸರ ದೋಚಿರುವವರೇ ಗೌರಿಪೇಟೆಯಲ್ಲೂ ಸರಗಳ್ಳತನಕ್ಕೆ ಪ್ರಯತ್ನಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಎರಡೂ ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿದೆ. ಇತ್ತೀಚೆಗೆ ನಗರದ ಪಿಸಿ ಬಡಾವಣೆಯಲ್ಲಿ ಚಿನ್ಮಯ ಶಾಲೆಯ ಸಂಗೀತ ಶಿಕ್ಷಕಿ ಭಾವನಿ ಅವರ ಸರ ಕದ್ದಿರುವ ದುಷ್ಕರ್ಮಿಗಳು ಸಹ ಇವರೇ ಆಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ಶನಿವಾರ ರಾತ್ರಿ ನಗರದ ಮಹಿಳಾ ಸಮಾಜ ಕಾಲೇಜಿನ ಬಳಿಯ ಚೌಡೇಶ್ವರಿ ಏಜೆನ್ಸಿಸ್ನಲ್ಲಿ ಗೋದಾಮಿನ ಬಾಗಿಲು ಮುರಿದು 3 ಲಕ್ಷ ರು. ದೋಚಿರುವುದು ಸೇರಿದಂತೆ ಮೂರು ಪ್ರಕರಣಗಳು ನಡೆದಿರುವುದರಿಂದ ಪೊಲೀಸರಿಗೆ ಕಳ್ಳರನ್ನು ಹಿಡಿಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಗೃಹಿಣಿ ಕೊಲೆ; ಪ್ರಕರಣ ದಾಖಲು
ಚಿಂತಾಮಣಿ: ಗೃಹಣಿಯೊಬ್ಬರನ್ನು ಹೊಡೆದು ನೇಣು ಬಿಗಿದು ಆತ್ಮಹತ್ಯೆ ಎಂದು ಪ್ರಕರಣ ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದ ಗಂಡನ ಸಮೇತ 5 ಮಂದಿ ವಿರುದ್ಧ ಕೊಲೆ ಪ್ರಕರಣವನ್ನು ಬಟ್ಲಹಳ್ಳಿ ಠಾಣೆ ಸಬ್ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ದಾಖಲಿಸಿದ್ದಾರೆ. ತಾಲೂಕಿನ ಬಟ್ಲಹಳ್ಳಿ ಗ್ರಾಮದ ದಲಿತರ ಕಾಲೋನಿಯಲ್ಲಿ ಪದ್ಮಾವತಿ ಎಂಬವರನ್ನು ಗಂಡ ಕೋನಪ್ಪ, ಬಾವ ನಾರಾಯಣಸ್ವಾಮಿ, ಹೆಂಡತಿ, ಅತ್ತೆ ಮತ್ತೊಬ್ಬ ಸೇರಿ ಹೊಡೆದು ಕೊಂದು ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿರುಚಲು ಪ್ರಯತ್ನಿಸಿದ 5 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಎಲ್ಲ ಆರೋಪಿಗಳು ತಲೆಮರಿಸಿಕೊಂಡಿದ್ದು,ಪೊಲೀಸರು ಆರೋಪಿಗಳ ಶೋಧ ಕಾರ್ಯ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

