ಕೋಲಾರ

ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿ: ಮುನಿಸ್ವಾಮಿ ನಾಯ್ಡು

Published On :

ಕ.ಪ್ರ.ವಾರ್ತೆ   ಕೋಲಾರ   ನ. 26
ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಬ್ಬರ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯಗಳು ಇರಬೇಕೆಂಬ ಉದ್ದೇಶದಿಂದ ನಿರ್ಮಲ ಭಾರತ ಯೋಜನೆ ಅನುಷ್ಠಾನಕ್ಕೆ ತಂದಿರುವುದರಿಂದ ಜನತೆ ಉತ್ತಮ ಪರಿಸರ ಮತ್ತು ಆರೋಗ್ಯಕ್ಕಾಗಿ ಶೌಚಾಲಯ ಕಟ್ಟಿಸಬೇಕೆಂದು ಜಿಪಂ ನಿರ್ಮಲ ಭಾರತ ಅಭಿಯಾನದ ಸಮಾಲೋಚಕ ಮುನಿಸ್ವಾಮಿ ನಾಯ್ಡು ಕರೆ ನೀಡಿದರು.
ಕೋಲಾರ ತಾಲೂಕಿನ ದೊಡ್ಡಹಸಾಳ ಗ್ರಾಪಂನಿಂದ ಹಮ್ಮಿಕೊಂಡಿದ್ದ ಶೌಚಾಲಯ ನಿರ್ಮಿಸಿ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ಶೌಚಾಲಯ ರಹಿತ ಕುಟುಂಬ ಸದಸ್ಯರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಗಮನ ಹರಿಸಬೇಕೆಂದರು.
ಜಿಲ್ಲೆಯ ಎಲ್ಲಾ ಶೌಚಾಲಯ ರಹಿತ ಕುಟುಂಬಗಳಿಗೂ ಶೌಚಾಲಯಗಳನ್ನು ಹಂತ ಹಂತವಾಗಿ ನಿರ್ಮಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಫಲಾನುಭವಿಗಳು ಸರ್ಕಾರ ನೀಡುವ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿರ್ಮಲ ಭಾರತ ಅಭಿಯಾನದಿಂದ ಪ್ರತಿ ಶೌಚಾಲಯಕ್ಕೆ 4,700 ರು., ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ 4,500 ರು. ಸೇರಿ 9200 ರು. ಆರ್ಥಿಕ ನೆರವು ನೀಡುತ್ತದೆ. ಶೌಚಾಲಯ ರಹಿತ ಕುಟುಂಬ ಈ ಯೋಜನೆಯನ್ನು ನಿರ್ಲಕ್ಷ್ಯಿಸದೆ ಕಾಮಗಾರಿ ಕೈಗೊಂಡು ಕುಟುಂಬದ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದರು. ತಾಪಂ ನಿರ್ಮಲ ಭಾರತ ಅಭಿಯಾನ ಸಂಯೋಜಕ ಜಿ.ಶ್ರೀನಿವಾಸ್ ಮಾತನಾಡಿ ಗ್ರಾಮ ಸಭೆ, ವಿದ್ಯಾರ್ಥಿಗಳ ಜಾಥಾ ಕಾರ್ಯಕ್ರಮಗಳಿಂದ ಶೌಚಾಲಯದ ಮಹತ್ವ ಮತ್ತು ನಿರ್ಮಾಣದತ್ತ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಸ್ವಚ್ಛತ್ತಾ ಉತ್ಸವ ಸಹಕಾರಿಯಾಗಿದೆ ಎಂದರು.
ದೊಡ್ಡಹಸಾಳ ಗ್ರಾಪಂ ವ್ಯಾಪ್ತಿಯಲ್ಲಿ 1,501 ಕುಟುಂಬಗಳಿದ್ದು, 511 ಶೌಚಾಲಯ ಹೊಂದಿವೆ, ಈ ಸಾಲಿನಲ್ಲಿ 133 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿ. ಸತೀಶ್ ಕುಮಾರ್ ತಿಳಿಸಿದರು. ಬಿ. ಮಂಜುಳಾ, ಸದಸ್ಯರಾದ ಚನ್ನಕೇಶವ, ಗೋವಿಂದಪ್ಪ, ವೆಂಕಟಲಕ್ಷ್ಮಮ್ಮ, ಮುಖ್ಯೋಪಾಧ್ಯಾಯ ಮಂಜುನಾಥ್, ಶಿಕ್ಷಕರಾದ ಕೆ.ಆರ್. ಲಲಿತಕುಮಾರಿ, ಕೆ. ವರಲಕ್ಷ್ಮಮ್ಮ, ಕೆ. ಮಂಜುಳಾ, ಶಾಲಾ ಮಕ್ಕಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.