ಡಿಸಿಸಿ ಬ್ಯಾಂಕಿನ ಮತ್ತೊಂದು ಸ್ಥಾನ ಕೈಗೆ
ಕನ್ನಡಪ್ರಭ ವಾರ್ತೆ, ಕೋಲಾರ,ನ.27
ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಸಾಮಾನ್ಯ ಎ ವರ್ಗಕ್ಕೆ ಸೇರಿದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಗೊರಮಿಲ್ಲಹಳ್ಳಿಯ ಜಿ.ವಿ.ಶ್ರೀರಾಮರೆಡ್ಡಿ ಜಯಗಳಿಸಿದ್ದಾರೆ.ಶ್ರೀರಾಮರೆಡ್ಡಿ 7 ಮತಗಳನ್ನು ಪಡೆದರೆ, ಎದುರಾಳಿ ಜೆಡಿಎಸ್ ಬೆಂಬಲಿತ ಆರೂರು ಮಂಜುನಾಥ್ ಕೇವಲ 3 ಮತಗಳನ್ನು ಪಡೆದುಕೊಂಡರು.
ನ.15ರಂದು ಶುಕ್ರವಾರ ಡಿಸಿಸಿ ಬ್ಯಾಂಕಿನ ಒಟ್ಟು 15 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿತ್ತು ಈ ಪೈಕಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ ಉಳಿದ 11 ಸ್ಥಾನಗಳಿಗೆ ಮತದಾನ ನಡೆದಿತ್ತು.
ಸಾಮಾನ್ಯ ಎ ವರ್ಗಕ್ಕೆ ಸೇರಿದ ಚಿಕ್ಕಬಳ್ಳಾಪುರ ಮತ ಕ್ಷೇತ್ರಕ್ಕೆ ಮತದಾನ ನಡೆದಿತ್ತಾದರೂ ಮತ ಎಣಿಕೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಮತ ಎಣಿಕೆ ಆಗಿರಲಿಲ್ಲ. ಈ ಕ್ಷೇತ್ರದಲ್ಲಿ ಒಟ್ಟು 12 ಮತದಾರರು ಇದ್ದು ಮಂಡಿಕಮ್ ಮತ್ತು ಆವಲಗುರ್ಕಿ ವಿಎಸ್ಎಸ್ಎನ್ ಸೊಸೈಟಿಯು ಸಾಲ ವಸೂಲಾತಿಯಲ್ಲಿ ಶೇಕಡ 50 ರಷ್ಟು ಗುರಿ ಸಾಧಿಸದಿರುವುದರಿಂದ ಮತ ಹಾಕಲು ಈ ಸೂಸೈಟಿಗೆ ಅವಕಾಶ ನೀಡಬಾರದೆಂದು ನ್ಯಾಯಾಲಯದಲ್ಲಿ ತಕರಾರರು ಅರ್ಜಿ ಸಲ್ಲಿಸಿದ್ದರು.
ಚುನಾವಣೆ ಘೋಷಣೆಗೆ ಮುಂಚೆಯೇ ಮತದಾರರ ಪಟ್ಟಿಯ ಬಗ್ಗೆ ಅರ್ಜಿದಾರರು ದೂರು ಸಲ್ಲಿಸದ ಕಾರಣ ಹಳೆಯ ಮತದಾರರ ಪಟ್ಟಿಯ ಅನ್ವಯ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ದೂರುದಾರರು ಹೈಕೋರ್ಟಿಗೆ ಮೊರೆ ಹೋಗಿ ನ.15ರ ಚುನಾವಣಾ ಫಲಿತಾಂಶಕ್ಕೆ ತಡೆ ತಂದಿದ್ದರು.
ಕೋರ್ಟ್ ಸೂಚನೆಯಂತೆ ಮತ ಎಣಿಕೆ: ಹೈಕೋರ್ಟ್ ಸೂಚನೆಯಂತೆ ಚುನಾವಣಾಧಿಕಾರಿಗಳು ವಿವಾದಕ್ಕೆ ಒಳಗಾಗಿರುವ ಆವಲಗುರ್ಕಿ ಮತ್ತು ಮಂಡಿಕಲ್ಲಿನ ಸೂಸೈಟಿಯ ಅಧ್ಯಕ್ಷರು ಮತ ಚಲಾಯಿಸಲು ಪ್ರತ್ಯೇಕ ಮತಪಟ್ಟಿಗೆ ವ್ಯವಸ್ಥೆ ಮಾಡಿ ಕೋರ್ಟಿನ ಆಧೀನಕ್ಕೆ ಒಪ್ಪಿಸಿದ್ದರಲ್ಲದೆ, ಉಳಿದ 10 ಮತ ಚೀಟಿಗಳು ಇದ್ದ ಮತ್ತೊಂದು ಮತಪಟ್ಟಿಗೆಗೆ ಮೋಹರು ಹಾಕಿ ಕೋರ್ಟಿನ ವಶಕ್ಕೆ ನೀಡಿದ್ದರು.
ಮತ ಎಣಿಕೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ಹೈಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ಸಾಲ ವಸೂಲಾತಿಯಲ್ಲಿ ವಿಫಲವಾಗಿರುವ ಅವಲಗುರ್ಕಿ ಮತ್ತು ಮಂಡಿಕಲ್ ಎರಡು ಮತಗಳನ್ನು ಹೊರತುಪಡಿಸಿ ಉಳಿದ 10 ಮತಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದ್ದರಿಂದ ಚುನಾವಣಾಧಿಕಾರಿಗಳು ಬುಧವಾರ ಡಿಸಿಸಿ ಬ್ಯಾಂಕಿನಲ್ಲಿ ಮತ ಏಣಿಕೆ ಕಾರ್ಯ ಕೈಗೊಂಡರು. ಕೋರ್ಟಿನ ಆದೇಶದ ಬಗ್ಗೆ ಅಭ್ಯರ್ಥಿಗಳಿಗೆ ಮತವರಿಕೆ ಮಾಡಿದ ನಂತರ ಮತಪಟ್ಟಿಗೆಯನ್ನು ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆದು ಮತ ಏಣಿಕೆ ನಡೆಸಿದಾಗ ಕಾಂಗ್ರೆಸ್ನ ಜಿ.ವಿ. ಶ್ರೀರಾಮರೆಡ್ಡಿ 7 ಮತಗಳನ್ನು ಪಡೆದರೆ ಜೆಡಿಎಸ್ನ ಮಂಜುನಾಥ್ ಕೇವಲ ಮೂರು ಮತಗಳಿಗೆ ತೃಪ್ತಿಪಟ್ಟುಕೊಂಡರು.
ಈ ಫಲಿತಾಂಶದಿಂದಾಗಿ ಕಾಂಗ್ರೆಸ್ಸ್ದಸ್ಯರ ಬಲ ಐದಕ್ಕೆ ಏರಿದಂತಾಗಿದೆ. ಜೆಡಿಎಸ್ 7, ಬಿಜೆಪಿ 3 ಸ್ಥಾನಗಳನ್ನು ಹೊಂದಿದ್ದರೂ ಜೆಡಿಎಸ್ ಬೆಂಬಲಿತ ನಿರ್ದೇಶಕರೊಬ್ಬರು ದಳದ ಮುಖಂಡರ ರಾಜಕಾರಣದಿಂದ ಬೇಸತ್ತು ಪಕ್ಷ ಬಿಡಲು ಮುಂದಾಗಿರುವುದರಿಂದ ಜೆಡಿಎಸ್ ಸಂಖ್ಯೆ 6ಕ್ಕೆ ಇಳಿಯುವ ಸಾಧ್ಯತೆಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

