ಕೋಲಾರ

ಬೇಡಿಕೆಗಳಿಗೆ ಆಗ್ರಹಿಸಿ ರೈತರ ಪ್ರತಿಭಟನೆ

Published On :

ಬಾಗೇಪಲ್ಲಿ: ರೈತರು ಬೆಳೆದಿರುವ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸುವುದರ ಜತೆಗೆ ಪ್ರತಿ ತಾಲೂಕು ಕೇಂದ್ರದಲ್ಲಿ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕೆನ್ನುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಸಮಿತಿಯ ಕಾರ್ಯದರ್ಶಿ ಪಿ. ಮಂಜುನಾಥರೆಡ್ಡಿ ಮಾತನಾಡಿ, ರೈತರ ಅಭಿವೃದ್ಧಿ  ವಿಚಾರದಲ್ಲಿ ಕಾಳಜಿ ವಹಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳಿಂದ ರೈತರು ಬೀದಿಪಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ರೈತರು ಬೆಳೆದಿರುವ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆಯನ್ನು ನೀಡುವಂತೆ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಹೋರಾಟವನ್ನು ನಡೆಸಿಕೊಂಡು ಬಂದ ಹಿನ್ನೆಲೆಯಲ್ಲಿ ಬೆಲೆ ನಿರ್ಧಾರ ಆಯೋಗವನ್ನು ರಚನೆ ಮಾಡುವುದಾಗಿ ಭರವಸೆ ನೀಡಿದ್ದು ಇನ್ನೂ ಈಡೇರಿಲ್ಲ ಎಂದರು.
ತಾಲ್ಲೂಕಿನ ಬಹುತೇಕ ರೈತರು ಮೆಕ್ಕೆಜೋಳವನ್ನು ಸುಮಾರು 16 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ.
 ಸುಮಾರು 3ಲಕ್ಷ 60ಸಾವಿರ ಕ್ವಿಂಟಲ್ ಮೆಕ್ಕೆ ಜೋಳ ಉತ್ಪಾದನೆಯಾಗುವ ನಿರೀಕ್ಷೆ ಇದೆಯಾದರೂ ಮಕ್ಕೆ ಜೋಳ ಕಟಾವಿಗೆ ಬರುವ ಮುಂಚೆ ಮಾರುಕಟ್ಟೆಯಲ್ಲಿ 1600-1700 ಇದ್ದ ಮಕ್ಕೆಜೋಳದ ಬೆಲೆ 1000-1050ಕ್ಕೆ ದಿಢೀರ್ ಕುಸಿದಿದೆ.
ಕಟಾವು ಆಗಿ ಫಸಲು ಮಾರುಕಟ್ಟೆಗೆ ಬರುವ ಸಮಯಕ್ಕೆ ಇನ್ನೂ ಜೋಳದ ಬೆಲೆ ಕುಸಿಯುವ ಸಂಭವವಿರುವುದರಿಂದ ರೈತರು ದಿವಾಳಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಸತತವಾಗಿ ಬರಗಾಲಕ್ಕೆ ತುತ್ತಾಗಿರುವುದರಿಂದ ರೈತರು ಬೆಳೆದಿರುವ ಬೆಳೆಗಳಿಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ ಎಂದರು.
ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದಿದ್ದರೆ ಬೆಳೆ ಕಟಾವಿಗೆ ಮುಂಚಿತವಾಗಿಯೇ ತಾಲ್ಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ರೈತರ ರಕ್ಷಣೆಗೆ ನಿಲ್ಲುತ್ತಿತ್ತು. ಆದರೆ ಇದುವರೆಗೂ ರಾಜ್ಯ ಸರ್ಕಾರವಾಗಲೀ, ಜಿಲ್ಲಾಡಳಿತವಾಗಲೀ ರೈತರ ರಕ್ಷಣೆಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ಪಾದನಾ ವೆಚ್ಚ ಹೆಚ್ಚು, ಆದರೆ ಬೆಳೆ ಬೆಲೆ ಕಡಿಮೆ. ಇದರಿಂದ ಅಪಾರ ನಷ್ಟವನ್ನು ರೈತರು ಅನುಭವಿಸಬೇಕಾಗಿದೆ. ಆದರೆ, ರೈತರ ಗೋಳನ್ನು ಕೇಳಿಸಿಕೊಳ್ಳದ ಕಿವುಡು ಸರ್ಕಾರದ ವಿರುದ್ಧ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾದಂತಹ ಪರಿಸ್ಥಿತಿ ಬಂದಿದೆ ಎಂದ ಅವರು, ಕಾಲುಬಾಯಿ ಜ್ವರಕ್ಕೆ ಜಾನುವಾರುಗಳು ಸಾವನ್ನಪ್ಪಿದ್ವೆದು ಸರ್ಕಾರ ಒಂದು ಹಸುವಿಗೆ ತಲಾ 25 ಸಾವಿರ ರು.ಗಳ ಪರಿಹಾರವನ್ನು ಘೋಷಣೆ ಮಾಡಿರುವುದು ಸಾಲದು. ಒಂದು ಸೀಮೆ ಹಸುವಿಗೆ 50 ಸಾವಿರ ರು.ಗಳ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರು ತಹಸೀಲ್ದಾರ್ ಮತ್ತು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯ ಅಧ್ಯಕ್ಷ ಎಚ್.ವಿ. ರಾಮಲಿಂಗಪ್ಪ,ಪದಾದಿಕಾರಿಗಳಾದ ಕಾ. ಚನ್ನರಾಯಪ್ಪ, ನಾಗಿರೆಡ್ಡಿ, ವೆಂಕಟರಮಣ, ನರಸಿಂಹರೆಡ್ಡಿ, ಚಂದ್ರಶೇಖರರೆಡ್ಡಿ, ಕೃಷ್ಣಾರೆಡ್ಡಿ ಮುಖಂಡರಾದ ಗೋವರ್ಧನಾಚಾರಿ, ದೇವಕುಂಟೆ ಗಂಗಪ್ಪ, ಮೆಕಾನಿಕ್ ಬಾಬು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.