ಕೋಲಾರ

ಸುದ್ದಿ ಸಂಕ್ಷೇಪ

Published On :

'ರಕ್ತದಾನದಿಂದ ಹೊಸ ರಕ್ತ ಚಲನೆಶಕ್ತಿ ವೃದ್ಧಿ'
ಟೇಕಲ್: ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಹಾಗೂ ಹೊಸ ರಕ್ತ ಚಲನೆಯಿಂದ ಚುರುಕುತನ, ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಟೇಕಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ್ ತಿಳಿಸಿದರು.  ಅವರು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ದೇವರಾಜ್ ಅರಸು ಮೆಡಿಕಲ್ ಕಾಲೇಜು ಹಾಗೂ ಗ್ರಾ.ಪಂ. ಟೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. 18 ರಿಂದ 60 ವರ್ಷದೊಳಗಿನ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಇದರಿಂದ ಯಾವುದೇ ಕೆಟ್ಟ ಪರಿಣಾಮಗಳಾವುದಿಲ್ಲ ಎಂದು ತಿಳಿಸಿದರು. ಕೆ.ಜಿ. ಹಳ್ಳಿ ಗ್ರಾ.ಪಂ ಪಿಡಿಒ ಗೋವಿಂದೆಗೌಡ, ಮಂಜುನಾಥ್ ರಕ್ತದಾನದ ಬಗ್ಗೆ ತಿಳಿಸಿದರು. ಟೇಕಲ್ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕ ರಾಜು, ಕ್ಷೇತ್ರ ಆರೋಗ್ಯ ಅಧಿಕಾರಿ ಪ್ರಸನ್ನ, ದಿನೇಶ್, ವೈದ್ಯರಾದ ಮಲ್ಲಿಕಾ ಗಣೇಶ್, ಡಾ.ರೇಖಾ, ಡಾ.ನಿತಿನ್, ಡಾ.ಮಾಲಿನ್‌ಕುಮಾರ್, ವೇಣುಗೋಪಾಲ್ ಮುಂತಾದವರು ಭಾಗವಹಿಸಿದ್ದರು.
ಕಾನೂನು ಅರಿವು ನೆರವು ಕಾರ್ಯಕ್ರಮ
ಚಿಕ್ಕಬಳ್ಳಾಪುರ: 1949, ನ.26 ರಂದು ಭಾರತ ಸಂವಿಧಾನ ರಚನೆ ಪೂರ್ಣಗೊಂಡಿದ್ದರ ನೆನೆಪಿನ ಹಿನ್ನೆಲೆಯಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ವತಿಯಿಂದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಜಿಲ್ಲಾ ಕಾನೂನು ಮತ್ತು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ,ಬಹಳಷ್ಟು ಜನರು ಸಮರ್ಪಕವಾಗಿ ಕಾನೂನಿನ ತಿಳಿವಳಿಕೆಯಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಿಗೆ ಹಮ್ಮಿಕೊಳ್ಳಬೇಕಾಗಿದೆ ಎಂದರು. ಹಿರಿಯ ವಕೀಲ ಎಸ್.ಆರ್. ಸೂರ್ಯನಾರಾಯಣರಾವ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಕೆ.ಎಚ್. ತಮ್ಮಗೌಡ ವಹಿಸಿದ್ದರು. ನ್ಯಾ.ಕೆ. ಅಮರನಾರಾಯಣ, ಅನಿತಾ, ನಳಿನಿಕುಮಾರಿ, ವಕೀಲ ಬಿ.ಆರ್. ನರಸಿಂಹಮೂರ್ತಿ, ಜಿ.ಆರ್. ಹರಿಕುಮಾರ್, ಪಾಪಿರೆಡ್ಡಿ ಇದ್ದರು.
ಗಮನ ಸೆಳೆದ ಸಾಂಸ್ಕೃತಿಕ ಸ್ಪರ್ಧೆ
ಚಿಕ್ಕಬಳ್ಳಾಪುರ: ತಾಲೂಕಿನ ಮಂಚನಬಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳ ಕೋಲಾಟ, ಏಕಪಾತ್ರಭಿನಯ, ಭಾವಗೀತೆಗಳು, ದೇಶಭಕ್ತಿಗೀತೆಗಳ ಗಾಯನ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳು ಎಲ್ಲರ ಗಮನ ಸೆಳೆದವು. ಸ್ಪರ್ಧೆಯಲ್ಲಿ ತಾಲೂಕಿನ 16 ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಕ್ಕಳ ಕೋಲಾಟ, ಏಕಪಾತ್ರಾಭಿನಯ, ಭಾವಗೀತೆಗಳ ಗಾಯನಕ್ಕೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ ಎಂ.ಸಿ. ಅಧ್ಯಕ್ಷ ಸಿ. ರಮೇಶ್ ವಹಿಸಿದ್ದರು. ತಾಪಂ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಪ್ರತಿ ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ತಾಪಂ ಸದಸ್ಯ ವೆಂಕಟನಾರಾಯಣಪ್ಪ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆ ಗುರುತಿಸಲು ಉತ್ತಮ ವೇದಿಕೆಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಬಸವರಾಜು, ಆರ್. ಚೌಡಪ್ಪ, ಲಕ್ಷ್ಮಣ್, ನಾರಾಯಣಸ್ವಾಮಿ, ಶಾಲೆಯ ಮುಖ್ಯೋಪಾಧ್ಯಾಯಿನಿ ರಾಧಮ್ಮ, ಶ್ರೀನಿವಾಸ್, ದೈಹಿಕ ಶಿಕ್ಷಕ ವಿಜಯ್‌ಕುಮಾರ್, ಕಿರಣ್, ಮಂಜುನಾಥ್, ಆರೋಗ್ಯಮ್ಮ ಇದ್ದರು.

ರೈತ ಆತ್ಮಹತ್ಯೆ; ಇಂದು ಪ್ರತಿಭಟನೆ
ಚಿಕ್ಕಬಳ್ಳಾಪುರ: ಸರ್ಕಾರದ ನಿರ್ಲಕ್ಷ್ಯದಿಂದ ಬೆಳಗಾವಿಯಲ್ಲಿ ರೈತ ವಿಠಲ ಅರಭಾವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ 28 ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಿರುವ ರೈತರು ಶಿಡ್ಲಘಟ್ಟ ವೃತ್ತದಲ್ಲಿ ಧರಣಿ ಕೂರಲಿದ್ದಾರೆ. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ತಾಲೂಕು ಅಧ್ಯಕ್ಷ ಕೇಶವ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಧರ್ಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್.ಹೆಚ್.7 ತಡೆ: ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿನ ಬಾಕಿ ಹಣ ನೀಡಲು ಮತ್ತು ಬೆಂಬಲ ಬೆಲೆ ನೀಡಲು ವಿಳಂಬ ಮಾಡುತ್ತಿರುವುದರಿಂದ ಬೇಸತ್ತು ಬೆಳಗಾವಿಯಲ್ಲಿ ರೈತ ವಿಠಲ ಅರಭಾವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ರೈತ ಮುಖಂಡರು ಎನ್.ಹೆಚ್.7 ತಡೆ ನಡೆಸಿ ಪ್ರತಿಭಟಿಸಿದರು.
ರೈತಪರ ಆಡಳಿತ ನಡೆಸುತ್ತೇವೆ ಎಂದು ಹೇಳಿ ಅಧಿಕಾರ ಪಡೆಯುವ ಪಕ್ಷಗಳು ರೈತರ ಹಿತಮರೆಯುತ್ತಿದ್ದು ದೇಶದ ಬೆನ್ನೆಲುಬಾಗಿರುವ ರೈತರು ಬೆಳೆ ನಷ್ಟ, ಅಸಮರ್ಪಕ ಬೆಲೆ, ಮಾರುಕಟ್ಟೆ ಸಮಸ್ಯೆ, ಸಾಲದ ಬಾಧೆ ಸೇರಿದಂತೆ ನಾನಾ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೂ ಸರ್ಕಾರಗಳು ರೈತಪರ ದಿಟ್ಟ ಕ್ರಮಗಳನ್ನು ಕೈಗೊಳ್ಳಲು ಮುಂದಾಗದಿರುವುದು ದುರಾದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಮೃತಪಟ್ಟ ರೈತನ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ನೀಡಬೇಕು. ಜತೆಗೆ ಕಬ್ಬಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡುವುದರ ಜತೆಗೆ ಬಾಕಿ ಹಣ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕೊಡಿಸಬೇಕು. ಅಲ್ಲದೇ ಬೆಲೆ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಮತ್ತಿತರರು ವಹಿಸಿದ್ದರು.
ಗುಂಪು ಘರ್ಷಣೆ
ಶಿಡ್ಲಘಟ್ಟ: ನಿವೇಶನವೊಂದರ ಖರೀದಿಗೆ ಸಂಬಂಧಿಸಿದಂತೆ ಮುಗಿಲಡಪಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳು ಲಕ್ಷ್ಮಮ್ಮ ಮತ್ತು ನಾರಾಯಣಸ್ವಾಮಿ. ಗ್ರಾಮದ ನಂಜಪ್ಪ, ಮೋಹನ್, ಹರೀಶ್, ವೆಂಕಟೇಶಪ್ಪ, ನಾಗಪ್ಪ, ದ್ಯಾವಮ್ಮ ಸೇರಿಕೊಂಡು ನನ್ನ ಹಾಗೂ ನನ್ನ ಪತಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ. ಮುಗಿಲಡಿಪಿಯಲ್ಲಿರುವ ತಮ್ಮ ನಿವೇಶನವನ್ನು ಗ್ರಾಮದ ಮಂಜುನಾಥ್ ಮಾರಾಟ ಮಾಡಬೇಕೆಂದು ಒತ್ತಾಯಿಸಿದ್ದು ಇದಕ್ಕೆ ಸುತಾರಾಂ ಒಪ್ಪದ ಕಾರಣ ಗಲಾಟೆ ಮಾಡಿದ್ದು ಗ್ರಾಮದ ಹಿರಿಯರು ಮರುದಿನ ಬೆಳಗ್ಗೆ ಪಂಚಾಯಿತಿ ನಡೆಸುವ ಮುಂಚೆಯೇ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಲಕ್ಷ್ಮಮ್ಮ ಆರೋಪಿಸಿದ್ದಾರೆ.  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಕ್ಫ್ ಆಸ್ತಿ ರಕ್ಷಣೆಗೆ ಶಾಸನ ರೂಪಿಸಲಾಗಿದೆ
ಶಿಡ್ಲಘಟ್ಟ: ಕೇಂದ್ರದ ಯುಪಿಎ ಸರಕಾರ ದೇಶಾದ್ಯಂತ ವಕ್ಫ್ ಸಂಸ್ಥೆಗಳಿಗೆ ಸೇರಿದ ಸ್ಥಿರ ಮತ್ತು ಚರ ಆಸ್ತಿಗಳನ್ನು ಸಂರಕ್ಷಣೆ ಮಾಡಲು ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿದ್ದು ಇದರಿಂದ ವಕ್ಫ್ ಸಂಸ್ಥೆಗಳ ಆಸ್ತಿ ಅಕ್ರಮವಾಗಿ ಒತ್ತುವರಿ ಮಾಡಿರುವ ವ್ಯಕ್ತಿಗಳಿಗೆ ಜೈಲು ಶಿಕ್ಷೆ ಖಾತ್ರಿ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎಸ್. ರಫೀಉಲ್ಲಾ ಹೇಳಿದರು.
ಪಟ್ಟಣದ ಮೀಲಾದ್ ಬಾಗ್ ಈದ್ಗಾ ಮೈದಾನ ಪರಿಶೀಲಿಸಿದ ನಂತರ ಮಾತನಾಡಿ, ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಗಳಲ್ಲಿ ಮುಸ್ಲಿಂ ಸಮಾಜದ ಪೂರ್ವರು ಬಿಟ್ಟುಹೋಗಿರುವ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಕೇಂದ್ರದ ಯುಪಿಎ ಸರ್ಕಾರ ವಕ್ಫ್ ಮಂಡಳಿಗಳಿಗೆ ಸೇರಿದ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಶಾಸನ ರೂಪಿಸಿದೆ ಎಂದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ವಕ್ಫ್ ಸಂಸ್ಥೆಗಳಿಗೆ ಸೇರಿದ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಮೊದಲ ಆದ್ಯತೆ ನೀಡಲಾಗಿದ್ದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಚಿಂತಾಮಣಿ ತಾಲೂಕಿನ ಹಝರತ್ ಅಮ್ಮಾಜಾನ್ ಬಾವಾಜಾನ್ ಫಕೀಯಾ ಷಾವಲೀ ದರ್ಗಾದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದೆಂದರು.
ಮೊಹ್ಮದ್ ಜಿಲಾನಿ, ಜಾಮೀಯಾ ಮಸೀದಿಯ ಕಾರ್ಯದರ್ಶಿ ಬಿ. ಅಬ್ದುಲ್ ಸಲಾಂ, ಅಮೀರ್ ಜಾನ್, ಬುಡೇನ್ ಸಾಬ್, ಎಂ.ಎ. ಅಬ್ದುಲ್ ವಹಾಬ್, ಮೈದೀನ್ ಸಾಬ್ ಇದ್ದರು.

ರೈತ ಆತ್ಮಹತ್ಯೆ: ಹುಲ್ಕೂರು ಹರಿಕುಮಾರ್ ಖಂಡನೆ
ಕೆಜಿಎಫ್: ಬೆಳಗಾವಿಯಲ್ಲಿ ರೈತ ವಿಠಲ್‌ಅರಬಾವಿ ಎಂಬುವರು ಅಧಿವೇಶನ ನಡೆಯುತ್ತಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ಕರ್ನಾಟಕ ರಾಜ್ಯ ತಲೆತಗ್ಗಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿಠಲ್‌ಅರಬಾವಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರವನ್ನು ಘೋಷಿಸಬೇಕು ಮತ್ತು ಅವರ ಮಕ್ಕಳ ವಿದ್ಯಾಭ್ಯಾಸ ಕೊಡಿಸುವ ಹೊಣೆಹೊರಬೇಕು ಎಂದು ಸರ್ಕಾರವನ್ನು ಈ ಮೂಲಕ ಒತ್ತಾಯಿಸಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ರೈತರ ಬೇಡಿಕೆಗಳ ಈಡೇರಿಕೆಗೆ ಮತ್ತು ಅವರ ಕೂಗಿಗೆ ಓಗೊಟ್ಟು ಸಮಸ್ಯೆಗೆ ಮುಂದಾಗಬೇಕು ಹಾಗೂ ಶಾಶ್ವತ ನೀರಾವರಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು, ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸದಿದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸಲಾಗುತ್ತದೆ ಎಂದು ಈ ಮೂಲಕ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.