ಚಿನ್ನದ ನಾಡಲ್ಲಿ ವನ್ಯ ಜೀವಿಗಳಿಗಿಲ್ಲ ಬೆಲೆ
ಕೆಜಿಎಫ್: ಕೆಜಿಎಫ್ ಹೊರವಲಯದ ಕೃಷ್ಣಾವರಂ, ಡಿ.ಕೆ. ಹಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದಿರುವ ನೀಲಗಿರಿ ತೋಪಿನ ಪ್ರದೇಶದಲ್ಲಿ ಅಳುವಿನ ಅಂಚಿನಲ್ಲಿರುವ ಕೃಷ್ಣಮೃಗಗಳು ನೂರಾರು ಸಂಖ್ಯೆಯಲ್ಲಿ ಬೀಡುಬಿಟ್ಟಿವೆ.
ಇವುಗಳ ಜೊತೆಗೆ ಇತರೆ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಆದರೆ ಕಳೆದ 9 ವರ್ಷಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಕೃಷ್ಣಮೃಗ ಹಾಗೂ ಜಿಂಕೆಗಳ ಸಂಖ್ಯೆ ಇಳಿಮುಖವಾಗಿರುವುದು ವಿಷಾದದ ಸಂಗತಿ.
ರಕ್ಷಣೆ ಮತ್ತು ನೀರಿನ ಸಮಸ್ಯೆ: ಕೆಜಿಎಫ್ ಸಮೀಪದ ಕೃಷ್ಣಾವರಂ, ಡಿ.ಕೆ. ಹಳ್ಳಿ ಸಮೀಪದಲ್ಲಿ ಸೈನೆಡ್ ದಿಬ್ಬಗಳು ಹಾಗೂ ನೀಲಗಿರಿ ಮರಗಳು ವ್ಯಾಪಕವಾಗಿದ್ದು ಇಲ್ಲಿ ಕೃಷ್ಣಮೃಗಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಈ ಪ್ರದೇಶದಲ್ಲಿ ಯಾವುದೇ ಕೆರೆಗಳು, ನೀರಿನ ಕುಂಟೆಗಳು ಇಲ್ಲವಾಗಿದೆ. ಜಿಂಕೆಗಳಿಗೆ ಈ ಪ್ರದೇಶದಲ್ಲಿ ಹನಿ ನೀರು ಸಿಗುವುದು ಅಸಾಧ್ಯವಾಗಿದೆ. ಈ ಕಾರಣ ಜಿಂಕೆಗಳು ಕುಡಿಯುವ ನೀರಿಗಾಗಿ ಈ ಪ್ರದೇಶದಿಂದ ಹೊರ ವಲಯದ ಉರಿಗಾಂಪೇಟೆ, ಕೆನಡೀಸ್, ಬೆಮೆಲ್ನಗರ ಪ್ರದೇಶಗಳಿಗೆ ನೀರಿಗಾಗಿ ಬರುವ ಜಿಂಕೆಗಳನ್ನು ಬೀದಿ ನಾಯಿಗಳ ದಂಡು ಭೇಟೆಯಾಡಿ ಸಾಯಿಸುತ್ತಿದೆ. ಅದೇ ರೀತಿ ಈ ಪ್ರದೇಶದಲ್ಲಿ ರಾಜ್ಯ ಹೆದ್ದಾರಿಗಳಿರುವ ಕಾರಣ ಜಿಂಕೆಗಳು ಕೆಲವೊಮ್ಮೆ ವಾಹನಗಳ ಡಿಕ್ಕಿಯಿಂದ ಮೃತಪಟ್ಟಿರುವ ನಿದರ್ಶನಗಳೂ ಇವೆ. ಮತ್ತೊಂದೆಡೆ ರಾತ್ರಿ ವೇಳೆ ಅಕ್ರಮ ಭೇಟೆಗಾರರ ಭೇಟೆಯಿಂದ ಸುಮಾರು ಜಿಂಕೆಗಳು ಬಲಿಯಾಗಿರುವುದಾಗಿ ಎಲ್ಲೆಡೆ ಕೇಳಿಬರುತ್ತಿದೆ.
ಕೆಜಿಎಫ್ ಪ್ರದೇಶದಲ್ಲಿ ಕಳೆದ 5-6 ವರ್ಷಗಳಿಂದ ಸ್ಥಳೀಯರು ಹಲವಾರು ಜಿಂಕೆಗಳನ್ನು ಭೇಟೆಯಾಡಲಾಗಿದೆ. ಆದರೆ ಈವರೆಗೆ ಸ್ಥಳೀಯ ಪೊಲೀಸರಾಗಲೀ, ಅರಣ್ಯ ಇಲಾಖೆ ಅಧಿಕಾರಿಗಳಾಗಲೀ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಈ ಕುರಿತು ಪ್ರಾಣಿದಯಾ ಸಂಘದ ಅಧ್ಯಕ್ಷ ಅನಿಮಲ್ ಮುರಳಿ ಹಲವಾರು ಭಾರಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಅದೇ ರೀತಿ ನಗರದ ಕೆಲ ಪ್ರಾಣಿ ಪ್ರಿಯರು, ವೈದ್ಯರು ಮತ್ತು ಪ್ರಾಣಿದಯಾ ಸಂಘದ ಸದಸ್ಯರು ಬ್ಲಾಕ್ಬಗ್ ಫೌಂಡೇಶನ್ ಅಡಿಯಲ್ಲಿ ಈ ಪ್ರದೇಶದ ಜಿಂಕೆಗಳಿಗೆ ರಕ್ಷಣೆಗೆ ಹಲವು ಯೋಜನೆಗಳನ್ನು ರೂಪಿಸಿದರೂ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ನೆರವು ಹಾಗೂ ಪ್ರೋತ್ಸಾಹ ದೊರೆತಿಲ್ಲ. ಈ ಪ್ರದೇಶದಲ್ಲಿ ಜಿಂಕೆಗಳಿಗೆ ನೀರಿನ ಸೌಲಭ್ಯ, ಅರಣ್ಯ ಸಿಬ್ಬಂದಿ ಕಣ್ಗಾವಲು ಮಾಡಲು ಹಲವು ಭಾರಿ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗೆ ಮನವಿ ಹಾಗೂ ಹಲವು ಪ್ರತಿಭಟನೆಗಳನ್ನು ನಡೆಸಿದರೂ ಜಿಂಕೆಗಳ ರಕ್ಷಣೆಗೆ ಕ್ಷೇತ್ರದ ಜನಪ್ರತಿನಿಧಿಗಳು ಗಮನ ಹರಿಸದೇ ಇರುವುದು ಶೋಚನೀಯ ಸಂಗತಿ.
ಕೆಜಿಎಫ್ ನಗರದ ವಿಶಾಲವಾದ ಗಣಿಗಾರಿಕೆ ಪ್ರದೇಶದಲ್ಲಿ 2001ರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳ ಆಶ್ವಾಸನೆ ಮಾತ್ರ ನೀಡಿದೆ. ಈವರೆಗೆ ನೀಡಿದ ಆಶ್ವಾಸನೆಗಳಲ್ಲಿ ರಾಜ್ಯ ಸರ್ಕಾರ ಗೋಲ್ಡನ್ ಸಫಾರಿ ಯೋಜನೆಯಡಿ ಕೆಜಿಎಫ್ ನಗರದ ಗಣಿಗಾರಿಕೆ ಪ್ರದೇಶದ ಸೈನೆಡ್ ದಿಬ್ಬಗಲಲ್ಲಿ ಮಾದರಿ ಪ್ರವಾಸೋದ್ಯಮ ಯೋಜನೆಯಡಿ ಅಭಿವೃದ್ಧಿ ಪಡಿಸುವುದರಿಂದ ಈ ಜಿಂಕೆ ಪ್ರದೇಶದಲ್ಲಿ ಸೂಕ್ತ ಸೌಕರ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಜಿಂಕೆಗಳ ರಕ್ಷಣೆಯಾಗಲಿದೆ. ಈವರೆಗೆ ನಿರಂತವಾಗಿ ಬೀದಿ ನಾಯಿಗಳ ಹಾವಳಿಯಿಂದ ಮತ್ತು ರಸ್ತೆ ಅಪಘಾತಗಳಿಂದ ನೂರಾರು ಜಿಂಕೆಗಳು ಸಾವನ್ನಪ್ಪುವುದನ್ನು ತಪ್ಪಿಸಿದಂತಾಗುತ್ತದೆ ಎಂಬುದು ಕೆಜಿಎಫ್ ಕ್ಷೇತ್ರದ ಸಾರ್ವಜನಿಕರ, ಪ್ರಾಣಿ ಪ್ರಿಯರ ಆಸೆಯಾಗಿದೆ.
ಆರ್. ರಜನೀಕಾಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

