ಶಾಸಕ ಶಿವಶಂಕರರೆಡ್ಡಿಗೆ ಆಯ್ಕೆ ಜವಾಬ್ದಾರಿ
ಕ.ಪ್ರ.ವಾರ್ತೆ ಕೋಲಾರ ನ. 28
ನ.30 ರಂದು ನಡೆಯಲಿರುವ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸಮ್ಮತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಜವಾಬ್ದಾರಿಯನ್ನು ಪಕ್ಷದ ಶಾಸಕರು ವಿಧಾನಸಭೆ ಉಪಾಧ್ಯಕ್ಷರೂ ಆಗಿರುವ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿಗೆ ವಹಿಸಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ವಿಧಾನಸಭೆ ಉಪಾಧ್ಯಕ್ಷರ ಕಚೇರಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಭೆ ಸೇರಿ ನ.30 ರಂದು ನಡೆಯುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಐವರು ಡಿಸಿಸಿ ಬ್ಯಾಂಕಿಗೆ ಆಯ್ಕೆಯಾಗಿದ್ದಾರೆ, ಅಪೆಕ್ಸ್ ಬ್ಯಾಂಕ್, ಸಹಕಾರ ಸಂಘಗಳ ಉಪ ಪ್ರಬಂಧಕ ಹಾಗೂ ಸರ್ಕಾರಿ ಪ್ರತಿನಿಧಿ ಸೇರಿದಂತೆ ಮೂವರು ಅಧಿಕಾರಿಗಳು ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ 8 ಜನರ ಬೆಂಬಲವಿದ್ದು ಗೆಲುವಿಗೆ ಬೇಕಾದ ಇನ್ನೆರಡು ಸದಸ್ಯರನ್ನು ಒಗ್ಗೂಡಿಸಲು ಯಾರನ್ನು ಮನವೊಲಿಸಬೇಕೆಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ನಿಂದ 7 ಮಂದಿ ಆಯ್ಕೆಯಾಗಿದ್ದರೂ ಒಬ್ಬ ಸದಸ್ಯ ಪಕ್ಷದ ಮುಖಂಡರ ಮೇಲಿನ ಕೋಪ ಹಾಗೂ ಕಾಂಗ್ರೆಸ್ ನೀಡಿದ ಬೆಂಬಲದಿಂದ ಗೆದ್ದಿರುವುದರಿಂದ ಯಾವ ನಿರ್ಧಾರ ಕೈಗೊಳ್ಳುತ್ತಾರೆಂಬುದು ಜಿಜ್ಞಾಸೆ ಮೂಡಿಸಿದೆ. ಅಧಿಕಾರವನ್ನು ವಿಧಾನಸಭೆ ಉಪಾಧ್ಯಕ್ಷ ಶಿವಶಂಕರರೆಡ್ಡಿ ಮತ್ತು ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಅವರಿಗೆ ನೀಡಲಾಗಿದೆ.
ಜೆಡಿಎಸ್ಗೂ 4 ಮಂದಿ ಸದಸ್ಯರ ಕೊರತೆ ಇದ್ದು ಬಿಜೆಪಿಯ ಮೂವರು ಸದಸ್ಯರ ಬೆಂಬಲಕ್ಕೆ ಜೆಡಿಎಸ್ ಮುಖಂಡರು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ, ಬಿಜೆಪಿ ಮುಖಂಡರು ಹಾಗೂ ಡಿಸಿಸಿ ಬ್ಯಾಂಕಿನ ನಿರ್ದೇಶಕರು ನಿಮ್ಮ ಬಳಿ 7 ಸದಸ್ಯರ ಬೆಂಬಲ ಇರುವುದನ್ನು ಖಾತರಿ ಪಡಿಸಿದಲ್ಲಿ ಮಾತ್ರ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಹೇಳಿರುವುದು ಜೆಡಿಎಸ್ ಮುಖಂಡರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಜೆಡಿಎಸ್ನಿಂದ ಹಿರಿಯ ವಕೀಲ ಕೆ.ವಿ. ಶಂಕರಪ್ಪ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಹನುಮೇಗೌಡರನ್ನು ಕಣಕ್ಕೆ ಇಳಿಸಲು ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ಶಾಸಕ ಮಂಜುನಾಥಗೌಡ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಇತರರು ನಿರ್ಧರಿಸಿದ್ದು ಕಾಂಗ್ರೆಸ್ ಮುಖಂಡರ ಕಾರ್ಯತಂತ್ರ ಗಮನಿಸಿ ನ.30ರಂದು ಬೆಳಿಗ್ಗೆ ಅಭ್ಯರ್ಥಿಗಳ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ. ಡಿಸಿಸಿ ಬ್ಯಾಂಕಿನ ಚುನಾವಣೆಯ ಜವಾಬ್ದಾರಿಗೆ ನಿಯೋಜಿತರಾಗಿರುವ ಶಿವಶಂಕರರೆಡ್ಡಿ ನ.30ರಂದು ಕೋಲಾರದಲ್ಲಿ ಕಾಂಗ್ರೆಸ್ನಿಂದ ಗೆದ್ದಿರುವ ನಿರ್ದೇಶಕರು ಮತ್ತು ಮುಖಂಡರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದ್ದಾರೆಂದು ಮೂಲಗಳು ಖಚಿತಪಡಿಸಿವೆ.
ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

