ಜಾತಿ ಪ್ರಮಾಣ ಪತ್ರ: ಡಿಸಿ ಸೂಚನೆ
ಕ.ಪ್ರ.ವಾರ್ತೆ ಕೋಲಾರ ನ. 28
ಇನ್ನು ಮುಂದೆ ಜಾತಿ ಪ್ರಮಾಣ ಪತ್ರಗಳನ್ನು ಬೇಕಾಬಿಟ್ಟಿಯಾಗಿ ನೀಡುವಂತಿಲ್ಲ, ಕಾನೂನು ಪಾಲನೆ ಮಾಡದೆ ಜಾತಿ ಪ್ರಮಾಣ ಪತ್ರಗಳನ್ನು ನೀಡಿದಲ್ಲಿ ಅದಕ್ಕೆ ತಹಸೀಲ್ದಾರ್ಗಳು ಹೊಣೆ ಆಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ, ಜಾತಿ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸುವವರ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡದಿದ್ದರೆ ಇಕ್ಕಟ್ಟಿಗೆ ಸಿಲುಕಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.
ಯಾರಾದರೂ ನನಗೆ ಬುಡ್ಗ ಜಂಗಮ ಜಾತಿಯ ಪ್ರಮಾಣ ಪತ್ರ ನೀಡಿ ಎಂದು ಅರ್ಜಿ ಸಲ್ಲಿಸಿದರೆ ಕಣ್ಣು ಮುಚ್ಚಿ ಪ್ರಮಾಣ ಪತ್ರ ಸಲ್ಲಿಸಬಾರದು, ಒಂದು ವೇಳೆ ನಾನೇ ನಿಮ್ಮ ಬಳಿ ಬಂದು ಎಸ್ಸಿ ಜಾತಿ ಪ್ರಮಾಣ ಪತ್ರ ನೀಡುವಂತೆ ಕೇಳಿದ್ರೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇನ್ನು ಮುಂದೆ ಯಾರಾದರೂ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಅರ್ಜಿದಾರರ ಊರಿಗೆ ಹೋಗಿ ಪರಿಶೀಲನೆ ಮಾಡಿ, ಭಾಷೆ, ಕಸುಬು, ಸಾಂಸ್ಕೃತಿಕ ಹಿನ್ನಲೆ, ವೇಷ ಭೂಷಣ, ಆಹಾರ ಪದ್ಧತಿ, ವಂಶವೃಕ್ಷದ ಬಗ್ಗೆ ಸಮಗ್ರವಾಗಿ ಸಮೀಕ್ಷೆ ನಡೆಸಿ ಅರ್ಜಿಯಲ್ಲಿ ಕೋರಿರುವ ಜಾತಿಗೆ ಸೇರಿದ್ದರೆ ತಡ ಮಾಡದೆ ಜಾತಿ ಪ್ರಮಾಣ ಪತ್ರ ನೀಡಿ.
ಒಂದು ವೇಳೆ ಸಮೀಕ್ಷೆ ಕಾಲದಲ್ಲಿ ನಿಮಗೆ ಅನುಮಾನಗಳು ಇದ್ದಲ್ಲಿ ಅಥವಾ ಅರ್ಜಿದಾರ ನೀಡಿರುವ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡು ಬಂದಲ್ಲಿ ಮಾತ್ರ ಅರ್ಜಿಯನ್ನು ನಿರಾಕರಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ನಾಡ ಕಚೇರಿಗೆ ಹೋಗಿ: ಇನ್ನು ಮುಂದೆ ಜಿಲ್ಲೆಯ ಪ್ರತಿಯೊಂದು ತಾಲೂಕಿನ ತಹಸೀಲ್ದಾರ್ಗಳು ಕಡ್ಡಾಯವಾಗಿ ನಾಡ ಕಚೇರಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಬೇಕು. ಉಪ ತಹಸೀಲ್ದಾರ್ಗಳು ಕಡ್ಡಾಯವಾಗಿ ಪ್ರತಿ ತಿಂಗಳು 5 ರಂದು ನಾಡ ಕಚೇರಿಗೆ ಸಂಬಂಧಿಸಿದ ದಿನಚರಿಯನ್ನು ಕಳುಹಿಸಬೇಕು, ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು ಮತ್ತು ನಾಡ ಕಚೇರಿ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಕಡ್ಡಾಯವಾಗಿ ಪ್ರತಿದಿನ ನಾಡ ಕಚೇರಿಗೆ ಹೋಗಿ ಹಾಜರಾತಿ ಪುಸಕ್ತದಲ್ಲಿ ಸಹಿ ಮಾಡಿ ನಂತರ ಕ್ಷೇತ್ರ ಪ್ರವಾಸ ಕಾರ್ಯಕ್ಕೆ ಹೋಗಬೇಕೆಂದು ಸೂಚಿಸಿದರು.
ನಾಡ ಕಚೇರಿಯಲ್ಲಿ ಸಕಾಲ ಕಾಯಿದೆಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ, ಕೋಲಾರ ತಾಲೂಕಿನಲ್ಲಿ 4,700 ಅರ್ಜಿಗಳ ಪೈಕಿ 711 ರದ್ದಾಗಿದೆ, ಮುಳಬಾಗಿಲಿನಲ್ಲಿ 2,900 ಅರ್ಜಿಗಳಲ್ಲಿ 360 ಹಾಗೂ ಮಾಲೂರಿನಲ್ಲಿ 2,500ರಲ್ಲಿ 150 ರದ್ದು ಆಗಿದೆ. ಬೇಕಾಗಿಯೇ ಅರ್ಜಿಗಳನ್ನು ರದ್ದು ಮಾಡಬೇಡಿ, ಒಂದು ವೇಳೆ ಅರ್ಜಿ ರದ್ದು ಮಾಡಲು ನಿಖರ ಕಾರಣಗಳು ಇದ್ದಲ್ಲಿ ಅರ್ಜಿದಾರನಿಗೆ ಮನವರಿಕೆ ಮಾಡಿಕೊಡಿ, ಇನ್ನು ಮುಂದೆ ಕೋರ್ಟ್ ಕೇಸುಗಳನ್ನು ನೀವೇ ತೆಗೆದುಕೊಂಡು ಇತ್ಯರ್ಥ ಮಾಡಲು ಅವಕಾಶ ಕಲ್ಪಿಸಲಾಗಿರುವುದರಿಂದ ಅಧಿಕಾರಿಗಳು ಜಾಗ್ರತೆಯಿಂದ ಕೆಲಸ ಮಾಡಬೇಕೆಂದು ಆದೇಶಿಸಿದರು.
ಸಕಾಲ ಕೇಂದ್ರ, ನಾಡ ಕಚೇರಿ ಮತ್ತಿತರ ಕಡೆ ಕೌಶಲ್ಯ ಅರಿಯದ ಅನರ್ಹರನ್ನು ಕಂಪ್ಯೂಟರ್ ಅಪರೇಟರ್ಗಳನ್ನಾಗಿ ತೆಗೆದುಕೊಂಡಿದ್ದು ಇವರನ್ನು ವಜಾ ಮಾಡಿ ದಕ್ಷರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿದ್ದರೂ ಆದೇಶ ಪಾಲಿಸಿಲ್ಲ ಎಂದು ಬಂಗಾರಪೇಟೆ ತಹಸೀಲ್ದಾರ್ ಉಷಾರಾಣಿ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡುತ್ತಿರುವ ಕಂಪ್ಯೂಟರ್ ಅಪರೇಟರ್ಗಳಿಗೆ ಸಕಾಲಕ್ಕೆ ಸಂಬಳ ನೀಡದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರಲ್ಲದೆ, ಕಂಪ್ಯೂಟರ್ ಅಪರೇಟರ್ಗಳಿಗೆ ನೀಡುತ್ತಿರುವ ಸಂಬಳದಲ್ಲೂ ಕಡಿತಗೊಳಿಸುತ್ತಿರುವುದರಿಂದ ಇನ್ನು ಮುಂದೆ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಸಂಬಳ ಜಮಾ ಆಗುವಂತೆ ಕ್ರಮ ಜರುಗಿಸಿ ಎಂದರು.
ಸಭೆಯಲ್ಲಿ ಪಡಿತರ ಬೇಟಿ, ವೃದ್ಧಾಪ್ಯ ಮತ್ತು ವಿಧವಾ ವೇತನ ಪಡೆಯುತ್ತಿರುವ ಫಲಾನುಭವಿಗಳ ಮತ್ತು ಹೊಸದಾಗಿ ಅರ್ಜಿ ಸಲ್ಲಿಸಿರುವವರ ಪುನರ್ ಪರಿಶೀಲನೆ, ಬೆಳೆ ವಿಮೆ, ರಾಷ್ಟ್ರೀಯ ಕುಟುಂಬ ಯೋಜನೆ,ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ದೇವಾಲಯ ಮತ್ತು ಆಸ್ತಿಗಳ ಬಗ್ಗೆ ಸಮೀಕ್ಷೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿದರು.
ಸಭೆಯಲ್ಲಿ ಕೋಲಾರ ಉಪವಿಭಾಗಾಧಿಕಾರಿ ಮಂಜುನಾಥ್, ಕೋಲಾರ ತಹಸೀಲ್ದಾರ್ ನಾಗರಾಜ್, ಮಾಲೂರಿನ ಡಾ. ಸುಧಾ, ಮುಳಬಾಗಿಲು ರಾಮಮೂರ್ತಿ ಹಾಗೂ ಶ್ರೀನಿವಾಸಪುರ ತಹಸೀಲ್ದಾರ್ ಜಯ, ಕೋಲಾರ ಆರ್.ಐ. ನಾಗರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ, ಜಿಲ್ಲಾ ಬಿಸಿಎಂ ಅಧಿಕಾರಿ ಗಂಗಣ್ಣನವರ್, ಆಹಾರ ಇಲಾಖೆಯ ಉಪ ನಿರ್ದೇಶಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

