ಕೋಲಾರ

60 ಕೆಜಿ ಅಕ್ರಮ ಗಾಂಜಾ ವಶ; ಆರೋಪಿ ಪರಾರಿ

Published On :

ಕ.ಪ್ರ.ವಾರ್ತ್ಣೆ ಕೋಲಾರ್ಣ ನ.29
ನಗರದ ಕಾರಂಜಿಕಟ್ಟೆಯ 7ನೇ ಕ್ರಾಸ್ನಲ್ಲಿರುವ ರಾಜಾನಗರದ ಸೈಯದ್ ಎಂಬವರ ಮನೆ ಮೇಲೆ ದಾಳಿ ಮಾಡಿದ ಗಲ್ ಪೇಟೆ ಪೊಲೀಸರು ಸುಮಾರು 4 ಲಕ್ಷ ರು. ಮೌಲ್ಯದ 60 ಕೆಜಿ ಗಾಂಜಾ ಮತ್ತು 10 ಕೆಜಿ ಗುಟ್ಕಾ ತಯಾರಿಕೆಗೆ ಬಳಸುವ ಕಚ್ಚಾವಸ್ತು ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಅಕ್ರಮ ಪತ್ತೆಯಾಗಿದೆ. ಪೊಲೀಸರು ತಮ್ಮ ಮನೆ ಮೇಲೆ ದಾಳಿ ಮಾಡಲು ಬಂದಿರುವುದು ಗೊತ್ತಾದ ಕೂಡಲೇ ಆರೋಪಿ ಸೈಯದ್ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ. ಮನೆಯಲ್ಲಿದ್ದ ಆರೋಪಿಯ ಪತ್ನಿ ವಸಿಹ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಸೈಯದ್ ಮತ್ತು ಪತ್ನಿ ವಸಿಹ ಈ ದಂಧೆ ನಡೆಸುತ್ತಿರಬಹುದೆಂದು ಶಂಕಿಸಿರುವ ಪೊಲೀಸರು ಪ್ರಮುಖ ಆರೋಪಿ ಸೈಯದ್ ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ. ಸೈಯದ್ ಮತ್ತು ವಸಿಹ ಕಳೆದ 1 ತಿಂಗಳ ಹಿಂದೆ ಕಾರಂಜಿಕಟ್ಟೆಯ 7ನೇ ಕ್ರಾಸ್ನಲ್ಲಿರುವ ರಾಜಾನಗರದ ಮನೆಯೊಂದನ್ನು ಬಾಡಿಗೆ ಪಡೆದಿದ್ದರು. ಲಗೇಜ್ ಆಟೋ ಹೊಂದಿರುವ ಇವರು ಟೋಮೇಟೋ ವ್ಯಾಪಾರ ಮಾಡುತ್ತಿರುವುದಾಗಿ ಸುತ್ತಮುತ್ತಲಿನ ಜನರ ಬಳಿ ಹೇಳಿಕೊಂಡಿದ್ದರು.
ಪ್ರತಿ ದಿನ ರಾತ್ರಿ ವೇಳೆ ಸರಕು ಸಾಗಾಣೆ ಆಟೋದಲ್ಲಿ ಓಡಾಡುತ್ತಿದ್ದ ಇವರ ಬಗ್ಗೆ ಸುತ್ತಮುತ್ತಲ ಜನ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಶುಕ್ರವಾರ ಪೊಲೀಸರು ದಾಳಿ ಮಾಡಿದಾಗ ಸೈಯದ್ ಮನೆಯಲ್ಲಿ ಗಾಂಜಾ ಮತ್ತು ಗುಟ್ಕಾ ಪತ್ತೆಯಾಗಿದೆ. ಪೊಲೀಸರ ವಶದಲ್ಲಿ ಇರುವ ಸೈಯದ್ ಪತ್ನಿ ವಸಿಹ ಗಂಡನ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದರಿಂದ ಪೊಲೀಸರಿಗೆ ಸತ್ಯ ತಿಳಿಯಲು ಕೊಂಚ ಮಟ್ಟಿಗೆ ಅಡ್ಡಿಯಾಗಿದೆ. ತನ್ನ ತಂಡ ಬೆಂಗಳೂರಿಗೆ ಹೋಗಿರುವುದಾಗಿ ವಸಿಹ ಹೇಳಿದರೆ, ಸುತ್ತಮುತ್ತಲ ಜನ ಪೊಲೀಸರನ್ನು ನೋಡಿ ಓಡಿ ಹೋಗಿದ್ದಾನೆಂದು ತಿಳಿಸಿದ್ದಾರೆ.
ದಾಳಿಯ ನೇತೃತ್ವವನ್ನು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಗಲ್ಪೇಟೆ ಸಬ್ಇನ್ಸ್ಪೆಕ್ಟರ್ ರವಿಪ್ರಕಾಶ್, ಲಿಯಾಖಾತ್ ವಹಿಸಿದ್ದರು. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಎಂ.ಐ. ಜಮೀಲ್, ಡಿವೈಎಸ್ಪಿ ಅಶೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ನಗರದಲ್ಲಿ ಗಾಂಜಾ ಪತ್ತೆ ಇದೇನು ಹೊಸದೇನಲ್ಲ. ಹಿಂದೆಯೂ ರಹಮತ್ ನಗರದಲ್ಲಿ ಪತ್ತೆ ಆಗಿತ್ತು. ಅಕ್ರಮವಾಗಿ ಗಾಂಜಾ ಮತ್ತು ಗುಟ್ಕಾ ಕಚ್ಚಾ ಪದಾರ್ಥಗಳನ್ನು ಮಾರಾಟ ಮಾಡುವ ದಂಧೆಕೋರರಿಗೆ ಪಟ್ಟಭದ್ರ ಹಿತಾಸಕ್ತಿಗಳ ಬೆಂಬಲ ಇರುವುದರಿಂದಲೇ ಸೂಕ್ಷ್ಮ ಪ್ರದೇಶಗಳನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆಂಬುದು ಸಾರ್ವಜನಿಕರ ಆರೋಪವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.