ಕೋಲಾರ

ಜಿಲ್ಲೆಯಲ್ಲಿ 758 ಏಡ್ಸ್ ರೋಗಿಗಳ ಸಾವು

Published On :

ಕ.ಪ್ರ.ವಾರ್ತೆ   ಕೋಲಾರ   ನ.30
ಜಿಲ್ಲೆಯಲ್ಲಿ ಈವರೆವಿಗು 758 ಏಡ್ಸ್ ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ಕೋಲಾರ ನಗರದ ಜಿಲ್ಲಾ ಆಸ್ಪತ್ರೆ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಆಗಸ್ಟ್ 2002ರಲ್ಲಿ ಪ್ರಪ್ರಥಮ ಐಸಿಟಿಸಿ ಕೇಂದ್ರ ಸ್ಥಾಪನೆಯಾಗಿದ್ದು ಪ್ರಸ್ತುತ 14 ಐಸಿಟಿಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಯ 45 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 2 ಮೊಬೈಲ್ ಐಸಿಟಿಸಿ ಅಲ್ಲದೇ 5 ನರ್ಸಿಂಗ್ ಹೋಂಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೇಂದ್ರಗಳ ಚಟುವಟಿಕೆಗಳು ನಡೆಯುತ್ತಿವೆ.
ಈ ಐಸಿಟಿಸಿ ಕೇಂದ್ರಗಳಲ್ಲಿ 2002 ರಿಂದ 2013 ಅಕ್ಟೋಬರ್ ವರೆಗೂ 5,839 ಎಚ್ಐವಿ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು 374 ಗರ್ಭಿಣಿ ಸ್ತ್ರೀಯರು ಎಚ್ಐವಿ ಸೋಂಕಿತರಾಗಿದ್ದಾರೆ.
ಜಿಲ್ಲೆಯಲ್ಲಿ ಸಾಮಾನ್ಯ ಜನರ ಎಚ್ಐವಿ ಪಾಸಿಟಿವಿಟಿ ಶೇ.1.4 ಹಾಗೂ ಗರ್ಭಿಣಿ ಸ್ತ್ರೀಯರ ಎಚ್ಐವಿ ಪಾಸಿಟಿವಿಟಿ ಶೇ.0.1ರಷ್ಟಿದೆ. ಜಿಲ್ಲೆಯಲ್ಲಿ 2013ರ ಜನವರಿಯಿಂದ 2013ರ ಅಕ್ಟೋಬರ್ ವರೆಗೆ 31,690 ಸಾಮಾನ್ಯ ಜನರನ್ನು ಎಚ್ಐವಿ ಪರೀಕ್ಷೆಗೆ ಒಳಪಡಿಸಿದ್ದು ಇದರಲ್ಲಿ 470 ಎಚ್ಐವಿ ಸೋಂಕಿತರು ಪತ್ತೆಯಾಗಿದ್ದಾರೆ. 20,044 ಗರ್ಭಿಣಿ ಸ್ತ್ರೀಯರ ಪೈಕಿ 24 ಮಂದಿ ಪತ್ತೆಯಾಗಿದ್ದಾರೆ.
5,422 ಮಂದಿ ಸೋಂಕಿತರು: ಎಚ್ಐವಿ ಸೋಂಕಿಗೆ ಒಳಪಟ್ಟಿರುವ ಗರ್ಭಿಣಿಯರಿಗೆ ಯಶಸ್ವಿನಿ ಯೋಜನೆಯಡಿ ರಾಜ್ಯ ಸರ್ಕಾರದ ವತಿಯಿಂದ ಉಚಿತ ನೋಂದಣಿ ಮಾಡಿ ಆರೋಗ್ಯ ಸೇವೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 2006ರಲ್ಲಿ ಎ.ಆರ್.ಟಿ ಚಿಕಿತ್ಸಾ ಕೇಂದ್ರ ಪ್ರಾರಂಭವಾಗಿದ್ದು ಈವರೆಗೆ 5,422 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2,745 ಪುರುಷರು, 2,456 ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. 217 ಮಕ್ಕಳು ಹಾಗೂ 4 ನಿರ್ಲಿಂಗಿಗಳು ಸಹ ಇಲ್ಲಿ ಇದ್ದಾರೆ. ಪ್ರಸ್ತುತ 1738 ಪ್ರಕರಣಗಳು ಎಆರ್ಟಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಕೋಲಾರ ತಾಲೂಕಿನಲ್ಲಿ 576 (ಪು), 492(ಮ),21 ಗಂಡು ಮಕ್ಕಳು, 18 ಹೆಣ್ಣು ಮಕ್ಕಳು ಸೇರಿ 1,107 ಮಂದಿ ಎಆರ್ಟಿ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದಾರೆ.
ಬಂಗಾರಪೇಟೆ ತಾಲೂಕಿನಲ್ಲಿ 503(ಪು), 466(ಮ), ಮಕ್ಕಳಲ್ಲಿ 33(ಗ), 25(ಹೆ) ಹಾಗೂ 4 ಮಂದಿ ನಿರ್ಲಿಂಗಿಗಳು ಸೇರಿ 1031, ಮಾಲೂರು-323(ಪು), 345(ಮ), ಮಕ್ಕಳಲ್ಲಿ 14(ಗ), 16(ಹೆ) ಸೇರಿ 698, ಮುಳಬಾಗಿಲು- 408(ಪು), 367(ಮ) ಮಕ್ಕಳಲ್ಲಿ 20(ಗ), 22(ಹೆ) ಸೇರಿ 817, ಶ್ರೀನಿವಾಸಪುರ-298(ಪು), 267(ಮ), ಮಕ್ಕಳಲ್ಲಿ 7 (ಗ), 11(ಹೆ) ಸೇರಿ 583, ಇತರೆ ಜಿಲ್ಲೆಗಳು ಹಾಗೂ ಹೊರ ರಾಜ್ಯದ ಪ್ರಕರಣಗಳು-637 (ಪು), 519(ಮ), ಮಕ್ಕಳಲ್ಲಿ 18 (ಗ),12(ಹೆ) ಸೇರಿ 1186 ಸೋಂಕಿತರಿದ್ದಾರೆ.
ಡೋಂಗಿ ವೈದ್ಯರ ಹಾವಳಿ: ಎಚ್ಐವಿ ಸೋಂಕಿತರು ಕಾಲ ಕಾಲಕ್ಕೆ ಎಆರ್ಟಿ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಿಲ್ಲವಾದದ್ದರಿಂದ ಸಮಾಲೋಚಕರು ಅಲೆದಾಡುವಂತಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎನ್. ರಾಜಕುಮಾರ್ ತಿಳಿಸಿದ್ದಾರೆ.
1,132 ಮಂದಿ ರೋಗಿಗಳು ಪ್ರತಿ 6 ತಿಂಗಳಿಗೆ ಒಮ್ಮೆ ಎಆರ್ಟಿ ಕೇಂದ್ರಗಳಿಗೆ ಬಂದು ಸಿಡಿ 4 ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಜೊತೆಗೆ 51 ಮಂದಿ ನಿರಂತರ ಚಿಕಿತ್ಸೆ ಪಡೆಯದಿರುವುದರಿಂದ ರೋಗ ಗುಣಪಡಿಸುವುದು ಕಷ್ಟವಾಗುತ್ತಿದೆ. ಇದವರಿಂದ ಬೇರೆಯವರಿಗೂ ರೋಗ ಹರಡುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲವರು ತಮಗೆ ಇರುವ ರೋಗದ ಬಗ್ಗೆ ಜನತೆಗೆ ತಿಳಿದರೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಬಹುದೆಂಬ ಭಯದಿಂದ ಚಿಕಿತ್ಸೆಗೆ ಬರುತ್ತಿಲ್ಲ, ಎಆರ್ಟಿ ಕೇಂದ್ರದ ಸಮಾಲೋಚಕರು ಜಿಲ್ಲೆಯನ್ನು ಜಾಲಾಡುತ್ತಿದ್ದರೂ ರೋಗಿಗಳು ಕಣ್ಣಿಗೆ ಬೀಳುತ್ತಿಲ್ಲವೆಂದು ತಿಳಿಸಿದ್ದಾರೆ.
ಎಚ್ಐವಿ ಸೋಂಕಿತರು ಸಕಾಲಕ್ಕೆ ಚಿಕಿತ್ಸೆ ಪಡೆದಲ್ಲಿ ಜೀವನ ಮಟ್ಟದಲ್ಲಿ ಸುಧಾರಣೆ ಕಾಣಬಹುದು. ಅನೇಕರು ಡೋಂಗಿ ವೈದ್ಯರಿಂದ ಮೋಸಕ್ಕೆ ಈಡಾಗಿ ಅವರು ನೀಡುವ ಔಷಧಿಯ ಅಡ್ಡಪಡಿಣಾಮದಿಂದಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ.
ಇಂದಿನ ಕಾರ್ಯಕ್ರಮ: ಈ ಬಾರಿ ವಿಶ್ವ ಏಡ್ಸ್ ದಿನಾಚರಣೆ-2013ನ್ನು ಹೊಸ ಸೋಂಕು, ಕಳಂಕ ಮತ್ತು ತಾರತಮ್ಯ ಹಾಗೂ ಏಡ್ಸ್ ಸಂಬಂಧಿತ ಮರಣಗಳನ್ನು ಸೊನ್ನೆಗೆ ತನ್ನಿ ಎಂಬ ಘೋಷಣೆಯಡಿ ಆಚರಿಸಲಾಗುತ್ತಿದೆ.
ಡಿ.1 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಕೋಲಾರ ನಗರದ ಪ್ರವಾಸಿ ಮಂದಿರದ ಬಳಿ ಏಡ್ಸ್ ಕುರಿತ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಿ.ಕೆ. ರವಿ ಚಾಲನೆ ನೀಡಲಿದ್ದಾರೆ. ಬೆ.11.30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.