ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು: ರಾಜೇಶ್ವರಿ ಅಭಿಮತ
ಕ.ಪ್ರ.ವಾರ್ತೆ ಕೋಲಾರ ನ.30
ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಕಲ್ಪಿಸಲು ಸರ್ಕಾರ ಯೋಜನೆಗಳನ್ನು ಜಾರಿಗೆ ತರಬೇಕು. ಅದೇ ರೀತಿ ರೈತರು ಕೃಷಿ ಇಲಾಖೆಗಳಿಂದ ದೊರೆಯುವ ಎಲ್ಲಾ ಸೌಕರ್ಯಗಳನ್ನು ಸದುಪಯೋಗ ಮಾಡಿಕೊಂಡು ಗುಣಮಟ್ಟದ ಉತ್ಪನ್ನಗಳನ್ನು ಬೆಳೆದಲ್ಲಿ ಉತ್ತಮವಾದ ಬೆಲೆ ಸಿಗುತ್ತದೆ ಎಂದು ಕೋಲಾರ ಎಪಿಎಂಸಿ ಅಧ್ಯಕ್ಷೆ ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿ ನಿರ್ದೇಶಕಿ ಕೆ.ಆರ್. ರಾಜೇಶ್ವರಿ ತಿಳಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾರುಕಟ್ಟೆ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರ ಅಭಿವೃದ್ಧಿ, ಸಂವೃದ್ಧಿ ಆಗುವುದರಿಂದ ಕೇವಲ ರೈತರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ವರಮಾನ ಹೆಚ್ಚುತ್ತದೆ ಎಂದರು.
ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿಲ್ಲಿಸುವ ಜತೆಗೆ ರೈತನ ಬೆಳೆದ ಬೆಳೆಗೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ನೀಡುವಲ್ಲಿ ಆಡಳಿತ ಮಂಡಳಿ ಶ್ರಮಿಸುತ್ತಿದೆ ಎಂದು ಹೇಳಿದರು. 2013-14ನೇ ಸಾಲಿಗೆ ಸಮಿತಿಯ ನಿಧಿಯಿಂದ 113 ಲಕ್ಷಗಳ ಅಂದಾಜಿನಲ್ಲಿ ಆಡಳಿತ ಕಚೇರಿಯ ಮೊದಲನೇ ಅಂತಸ್ತಿನಲ್ಲಿ ಸಭಾಂಗಣ, ಶ್ರಮಿಕರಿಗೆ ವಿಶ್ರಾಂತಿ ಭವನ, ಜಾನುವಾರ ಶೆಡ್, ಶೌಚಾಲಯ, ತನಿಖಾಠಾಣೆ ನಿರ್ಮಾಣ ಮಾಡುವ ಅಂದಾಜು ಪಟ್ಟೆಗೆ ಅನುಮೋದನೆ ಪಡೆಯಲಾಗಿದೆ ಎಂದರು.
ಸಮಿತಿಯಿಂದ ಪರವಾನಗಿ ಪಡದು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಮಾಲರಿಗೆ ಜನಶ್ರೀ ವಿಮಾ ಯೋಜನೆಯಡಿ ಸಮಿತಿಯ ನಿಧಿಯಿಂದ ವಾರ್ಷಿಕ ವಿಮಾ ಯೋಜನೆಯಡಿ ಸೇರಲು ಹಮಾಲರ 9 ರಿಂದ 12ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ, ವಿಮಾದಾರರು, ಅಪಘಾತದಿಂದ ಮಣತರಾದಲ್ಲಿ ಅಥವಾ ಪೂರ್ತಿ ಅಂಗವಿಕಲತೆ ಉಂಟಾದಲ್ಲಿ 75ಸಾವಿರ ಮತ್ತು ಸಹಜ ಮರಣ ಹೊಂದಿದಲ್ಲಿ 30 ಸಾವಿರ ವಿಮೆ ಲಭ್ಯವಾಗುತ್ತದೆ ಎಂದು ತಿಳಿಸಿದರು.
2014-15ನೇ ಸಾಲಿನಲ್ಲಿ ಸಮಿತಿಯ ನಿಧಿಯಿಂದ ಸುಮಾರು 150 ಲಕ್ಷಗಳು ಅಭಿವೃದ್ಧಿ ಕಾಮಗಾರಿಗಳಿಗಾಗಿ ಲಭ್ಯವಾಗಬಹುದಾಗಿದ್ದು, ಇದರಿಂದ ಪ್ರಾಂಗಣದಲ್ಲಿ ಉಳಿಕೆ ಇರುವ ರಸ್ತೆಗಳನ್ನು ಸಿಮೆಂಟ್ ರಸ್ತೆಗಳಾಗಿ ಪರಿವರ್ತಿಸಲು ಹಾಗೂ ಪ್ರಾಂಗಣದಲ್ಲಿನ ಬೀದಿ ದೀಪಗಳಿಗೆ ಭೂಗತ್ ಕೇಬಲ್ ಅಳವಡಸಿ ವಿದ್ಯುತ್ ಉಳಿತಾಯವಾಗುವಂತಹ ಎಲ್ಇಡಿ ಬಲ್ಪ್ಗಳನ್ನು ಅಳವಡಿಸಲಾಗುವುದು ಎಂದು ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ವಿ.ನಾಚೇಗೌಡ,ಜಿಲ್ಲೆಯ ರೈತರು ಶ್ರಮಿಕರು ಮತ್ತು ಸಣ್ಣಪ್ರಮಾಣದ ರೈತರಾಗಿರುವುದರಿಂದ ರೈತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರುವಂತಹ ಸಂದರ್ಭದಲ್ಲಿ ಅವನಿಗೆ ಸಿಗಬೇಕಾದ ಎಲ್ಲಾ ರೀತಿಯ ಸವಲತ್ತುಗಳನ್ನು ಸಿಗುವಂತಹ ಕೆಲಸವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಡಬೇಕಾಗಿದು ಎಂದು ತಿಳಿಸಿದರು. ರೈತನ ಬೆಂಬಲಕ್ಕೆ ಎಪಿಎಂಸಿಗಳು ನಿಂತಾಗ ಮಾತ್ರ ವ್ಯವಸ್ಥಾಯ ಉಳಿಯುತ್ತದೆ. ವ್ಯವಸಾಯ ಉಳಿದರೆ ಮಾರುಕಟ್ಟೆಗಳು ಉಳಿಯುತ್ತದೆ ಎಂದ ಅವರು, ರೈತನಲ್ಲಿ ಆತ್ಮಸ್ಥೈರ್ಯವನ್ನು ತುಂಬಿದಾಗ ಮಾತ್ರ ರೈತ ಮತ್ತಷ್ಟು ಬೆಳೆಗಳನ್ನು ಬೆಳೆಯಲು ಉತ್ತೇಜನ ಸಿಗಲಿದೆ ಎಂದು ಹೇಳಿದರು. ಜಿಲ್ಲೆಯ ರೈತರು ಪ್ರತಿ ದಿನ ಚಿಂತನೆ ಮಾಡಬೇಕಾದ ಪರಿಸ್ಥಿತಿ ಇದೆ. ಆದರೆ ದೃತಿಗೆಡೆದ ಬಹುವಾರ್ಷಿಕ ಬೆಳೆಗಳಾದ ಟೋಮೇಟೋ, ದೊಡ್ಡ ಮೆಣಸಿನಕಾಯಿಗಳನ್ನು ಬೆಳೆದು ಲಾಭ ಮತ್ತು ನಷ್ಟವನ್ನು ಅನುಭವಿಸುವ ಪ್ರವೃತ್ತಿಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್, ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಚ್. ಅಮರ ನಂಜುಂಡೇಶ್ವರ್, ಡಾ.ಜಿ.ಎಸ್. ಅರವಿಂದ ಕುಮಾರ್, ಡಾ.ಮಂಜುನಾಥ್ ರೆಡ್ಡಿ, ಡಾ. ದೊಡ್ಡ ಬಸಪ್ಪ, ರಾಜ್ಯ ಕೃಷಿ ಮಾರಾಟ ಮಂಡಳಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಸಿ.ಸ್ವಾಮಿ, ಎಪಿಎಂಸಿ ಸದಸ್ಯರಾದ ಟಿ.ವಿ. ಕೃಷ್ಣಪ್ಪ, ಕೆ. ರಮೇಶ್, ನಾರಾಯಣಸ್ವಾಮಿ, ಬಣಕನಹಳ್ಳಿ ನಟರಾಜ್, ರಾಜಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

