ಕೋಲಾರ

ನಾನು ಮಾಡಿದ ತಪ್ಪಾದರೂ ಏನು?

Published On :

ಪಾ.ಶ್ರೀ.ಅನಂತರಾಮ್
ಕೋಲಾರ: ಒಂದು ವೇಳೆ ಅಪ್ಪಿ-ತಪ್ಪಿ ಯಾರಿಗಾದರೂ ಎಚ್ಐವಿ ಅಥವಾ ಏಡ್ಸ್ ಇದೆ ಎಂದು ಗೊತ್ತಾದಲ್ಲಿ ಕೊರಗಿ ಕುಗ್ಗುವ ಬದಲು ಆತ್ಮಸ್ಥೈರ್ಯದಿಂದ ಜೀವನ ಸಾಗಿಸಲು ಯತ್ನಿಸಿದರೆ ಜವರಾಯನೂ ಹೆದರಿ ಓಡಿ ಹೋಗುತ್ತಾನೆ...
ರೋಗವಿಲ್ಲದ ಏಡ್ಸ್ ಆದರೂ ಸರಿ. ಕಾಲ ಕಾಲಕ್ಕೆ ವೈದ್ಯರ ಸಲಹೆ, ಔಷದೋಪಚಾರ, ಯೋಗ-ಧ್ಯಾನ, ಸಂಗೀತ, ಪ್ರವಚನಗಳ ಮೂಲಕ ಲವಲವಿಕೆಯಿಂದ ಜೀವನ ನಡೆಸಿದಲ್ಲಿ ಹೆಚ್ಚು ಕಾಲ ಬದುಕಬಹುದು.
ನನಗೂ ಎಲ್ಲರಂತೆ ಚೆನ್ನಾಗಿ ಓದಬೇಕೆಂಬ ಆಸೆ ಇತ್ತು. ಆದರೆ, ನಮ್ಮಪ್ಪ ಫಸ್ಟ್ ಪಿಯುಸಿ ಓದುತ್ತಿದ್ದಾಗಲೇ ಲಾರಿ ಡ್ರೈವರ್ರೊಂದಿಗೆ ಮದುವೆ ಮಾಡಿದರು. ಎರಡು ವರ್ಷದೊಳಗೆ ತಾಯಿಯೂ ಆದೆ. ನಾಲ್ಕು ವರ್ಷಗಳವರೆಗೆ ಎಲ್ಲವೂ ಸುಸೂತ್ರವಾಗಿಯೇ ಸಾಗಿತ್ತು. ಆದರೆ, ಎರಡನೇ ಸಾರಿ ಗರ್ಭಿಣಿಯಾದಾಗ ನನಗೆ ಎಚ್ಐವಿ ಸೋಂಕಿದೆ ಎಂಬುದು ಪತ್ತೆಯಾಯಿತು. ಗಂಡನೂ ಇದ್ದಕ್ಕಿದಂತೆ ಜ್ವರ, ವಾಂತಿ, ತಲೆ ನೋವಿನಿಂದ ಬಳಲಾರಂಭಿಸಿದರು. ಚಿಕಿತ್ಸೆ ಪಡೆದು ಬರುತ್ತೇನೆಂದು ಹೇಳಿ ಊರಿಗೆ ಹೋದವರು ಆತ್ಮಹತ್ಯೆಗೆ ಶರಣಾದರು. ಆಗಲೇ ಗೊತ್ತಾಗಿದ್ದು ಅವರಿಗೆ ಏಡ್ಸ್ ಇತ್ತು ಎಂದು.
ಗಂಡನ ಸ್ನೇಹಿತರು ನನ್ನಿಂದಲೇ ಅವನಿಗೂ ಏಡ್ಸ್ ತಗುಲಿತ್ತು ಎಂದು ಆರೋಪಿಸಿದರು. ಸತ್ಯ ಗೊತ್ತಿದ್ದ ಕೆಲವರಿದ್ದ ಕಾರಣ ನಾನು ಬದುಕಿಕೊಂಡೆ. ಆದರೆ, ಸಾಯುವ ತನಕನೂ ನಾನು ಗಂಡನಿಂದ ಸೋಂಕಿತಳಾಗಬೇಕಾಯಿತು. ನನ್ನದಲ್ಲದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಬೇಕಾಗಿದೆ. ಇಂಥ ಪರಿಸ್ಥಿತಿ ಮಾತ್ರ ಯಾವುದೇ ಹೆಣ್ಣಿಗೂ ಬರಬಾರದು.
ತಂದೆ-ತಾಯಿಯೊಂದಿಗಿದ್ದರೂ ನಾನು ಒಂಟಿ. ಅಸಹಾಯಕ ತಾಯಿ ಮಾತ್ರ ನನ್ನನ್ನು ಅರ್ಥ ಮಾಡಿಕೊಂಡಿದ್ದಾಳೆ. ಅತ್ತೆ ಮಾವನಿಗಂತೂ ನನ್ನ ಬಗ್ಗೆ ಅನುಕಂಪವೇ ಇಲ್ಲ. ಮಕ್ಕಳು ಬೆಂಗಳೂರಿನ ಮೈರಾಡ ಸಖ್ಯಾ ಸಂಸ್ಥೆಯ ಸಹಾಯದಿಂದ 9 ಮತ್ತು 7ನೇ ತರಗತಿಯಲ್ಲಿ ಓದುತ್ತಿದ್ದಾರೆ. ಸೋಂಕಿಲ್ಲದ ಈ ಮೊಮ್ಮಕ್ಕಳ ಮೇಲೂ ಅವರ ಅಜ್ಜ, ಅಜ್ಜಿಗೆ ಅನುಕಂಪವಿಲ್ಲ. ಆಸ್ತಿಯಲ್ಲಿಯೂ ಪಾಲು ನೀಡುತ್ತಿಲ್ಲ.
ಮೈರಾಡ ಸಂಸ್ಥೆ ಬಳಿ ನನ್ನ ಸಮಸ್ಯೆ ಹೇಳಿ ಕೊಂಡಾಗ ಸಂಸ್ಥೆಯ ಸಿಒ ರುದ್ರೇಶ್ ಹೆಚ್ಚಾಗಿ ಓದಿಕೊಂಡಿರದ ನನಗೂ ಕೆಲಸ ನೀಡಿದ್ದಾರೆ. ಇಲ್ಲಿಯೇ ಲೈಂಗಿಕ ಕಾರ್ಯಕರ್ತೆಯರಿಗೆ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ.
ನಿತ್ಯವೂ ಔಷಧಿ ತೆಗೆದುಕೊಳ್ಳುವಷ್ಟು ಆರೋಗ್ಯ ಇನ್ನೂ ಕೆಟ್ಟಿಲ್ಲ. ಯೋಗ-ಧ್ಯಾನದಿಂದ ಮಾನಿಸಿಕ ಸ್ಥೈರ್ಯ ಹೆಚ್ಚಿದೆ. ನನ್ನಿಬ್ಬರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ ಒಬ್ಬಳನ್ನು ವೈದ್ಯೆ ಹಾಗೂ ಮತ್ತೊಬ್ಬಳನ್ನು ಎಂಜನಿಯರ್ ಮಾಡಬೇಕೆಂಬ ಆಸೆ ಇದೆ. ಇದಕ್ಕೆಂದೇ ನನ್ನ ಸಂಪಾದನೆಯಲ್ಲಿ ಉಳಿತಾಯ ಮಾಡುತ್ತಿದ್ದೇನೆ. ಮಕ್ಕಳ ಹೆಸರಿನಲ್ಲಿ ವಿಮೆ ಮಾಡಿಸಿದ್ದೇನೆ. ಆದರೆ, ನಾನೆಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ ಎನ್ನುತ್ತಾರೆ ಕೋಲಾರದ ವೇದಮ್ಮ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.