ಕೋಲಾರ

ಅನಂತಮೂರ್ತಿ ವಿರುದ್ಧ ಬ್ರಾಹ್ಮಣ ಸಮುದಾಯದ ಪ್ರತಿಭಟನೆ

Published On :

ಚಿಕ್ಕಬಳ್ಳಾಪುರ: ಬ್ರಾಹ್ಮಣರು ಮಾಂಸವನ್ನು ಸೇವಿಸುತ್ತಿದ್ದರೆಂಬ ಹೇಳಿಕೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿಯವರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾ ಬ್ರಾಹ್ಮಣ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು.    
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಶಿಡ್ಲಘಟ್ಟ ವೃತ್ತದಲ್ಲಿ ಯು.ಆರ್. ಅನಂತಮೂರ್ತಿರವರ ಪ್ರತಿಕೃತಿಯನ್ನು ದಹಿಸಿ ಧಿಕ್ಕಾರಗಳನ್ನು ಕೂಗಿದರು. ಒಂದು ಸಮುದಾಯಕ್ಕೆ ನೋವಾಗುತ್ತದೆ ಎನ್ನುವುದನ್ನು ಅರಿತಿದ್ದರೂ ಕೇವಲ ಪುಕ್ಕಟೆ ಪ್ರಚಾರ ಪಡೆಯಬೇಕೆಂಬ ದುರುದ್ದೇಶದಿಂದ ಬುದ್ಧಿಜೀವಿ ಎನಿಸಿಕೊಂಡ ಅನಂತಮೂರ್ತಿರವರು ಅಸಂಬಂದ್ಧ ಹೇಳಿಕೆಯನ್ನು ನೀಡಿರುವುದು ಅವರ ಘನತೆಗೆ ತಕ್ಕದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಬ್ರಾಹ್ಮಣ ಸಮುದಾಯದ ಮುಖಂಡ ಶೇಷಭಟ್, ಪ್ರಸ್ತುತ ದಿನಗಳಲ್ಲಿ ಬ್ರಾಹ್ಮಣರು ಮಾಂಸಾಹಾರವನ್ನು ಸೇವಿಸುತ್ತಿದ್ದರು ಎಂಬ ಹೇಳಿಕೆಯನ್ನು ನೀಡುವ ಅಗತ್ಯವೇನಿತ್ತು. ಅದು ಸಮಾಜದಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ತಿಳಿಸುವಾಗ ಜವಾಬ್ದಾರಿಯಿಂದ ಮಾತನಾಡುವುದು ಬೇಡವೇ ಎಂದು ಪ್ರಶ್ನಿಸಿದರು. ಅನಂತಮೂರ್ತಿಯವರು ಸಮಾಜದಲ್ಲಿ ಒಡಕನ್ನುಂಟು ಮಾಡುವ ಹೇಳಿಕೆಗಳನ್ನು ಆಗಾಗ ಕೊಡುವ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. ಕೇವಲ ಒಂದು ವರ್ಗದವರನ್ನು ಓಲೈಸಿಕೊಳ್ಳುವ ಸಲುವಾಗಿ ಇನ್ನೊಂದು ಸಮುದಾಯದವರಿಗೆ ನೋವನ್ನುಂಟು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ಆನಂತಮೂರ್ತಿರವರು ಕ್ಷಮೆಯನ್ನಾಚಿಸಬೇಕು. ಮುಂದೆ ಇಂತಹ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯವನ್ನು ಕ್ಷಮೆಯಾಚಿಸದಿದ್ದರೆ ಸರ್ಕಾರ ಕೂಡಲೇ ಅನಂತಮೂರ್ತಿಯವರಿಗೆ ನೀಡಿರುವ ಜ್ಞಾನಪೀಠ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡರಾದ ನಾಗರಾಜ್ ರಾವ್, ನರಸಿಂಹಮೂರ್ತಿ, ವೇಣುಗೋಪಾಲ್, ನಾಗರಾಜ್, ರಮೇಶ್, ಶ್ರೀಕಾಂತ್ ಭಟ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.