ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಪ್ರಪಂಚದ ಅರಿವು
ಕ.ಪ್ರ.ವಾರ್ತೆ ಕೋಲಾರ ಅ. 5
ಜಿಲ್ಲಾ ಆಡಳಿತದ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಶನಿವಾರ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸುಮಾರು ಒಂದು ಗಂಟೆ ಕಾಲ ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡಿ ಗಮನ ಸೆಳೆದರು.
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಸ್ತಕ ಸಾಲಿನ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಪ್ರಪಂಚದ ಅರಿವು ಅಗುತ್ತದೆ, ಯುಪಿಎಸ್ಸಿ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುವ ಆತ್ಮಸ್ಥೈರ್ಯ ಸಿಗುತ್ತದೆ ಎಂದರು.
ಯಶಸ್ಸು: ಯಾರು ಯುಪಿಎಸ್ಸಿ ಪರೀಕ್ಷೆಗೆ ಗುಣಾತ್ಮಕವಾಗಿ, ಪ್ರಾಮಾಣಿಕವಾಗಿ ಸಿದ್ಧತೆ ನಡೆಸುತ್ತಾರೋ ಅಂತಹ ವಿದ್ಯಾರ್ಥಿಗಳು ಸುಲಭವಾಗಿ ಯಶಸ್ಸು ಸಂಪಾದಿಸುತ್ತಾರೆ, ಒಂದು ವೇಳೆ ಸಂದರ್ಶನದಲ್ಲಿ ಸೋತರೂ ಕೆಪಿಎಸ್ಸಿಯಲ್ಲಿ ಉತ್ತೀರ್ಣರಾಗಿ ಉದ್ಯೋಗ ಸಂಪಾದಿಸುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಹೇಳಿದರು.
ಗುರಿ ಮುಟ್ಟಲು ಸುಲಭ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಆತ್ಮಸ್ಥೈರ್ಯ ಅತಿ ಮುಖ್ಯ, ನಂಬಿಕೆ ಇರಬೇಕು, ಕಲಿಕೆಗಾಗಿ ಉತ್ತಮ ಮಾರ್ಗದರ್ಶಕರನ್ನು ಹೊಂದುವುದರಿಂದ ಗುರಿ ಮುಟ್ಟಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗೆ 24 ಗಂಟೆ ಓದಬೇಕೆಂದು ಕೆಲವರು ಹೇಳುತ್ತಾರೆ. ಅದು ತಪ್ಪು, ಕನಿಷ್ಠ 8 ರಿಂದ 12 ಗಂಟೆ ಶ್ರದ್ಧೆಯಿಂದ, ಏಕಾಗ್ರತೆಯಿಂದ ಓದಿದರೆ ಸಾಕು, ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದನ್ನು ಹವ್ಯಾಸ ಮಾಡಿಕೊಂಡವರು ದಿನಕ್ಕೆ 4 ಗಂಟೆಗಳ ಕಾಲ ಓದಿದರೂ ಸಾಕೆಂದರು.
ಪುನರ್ ಮನನ: ಪ್ರತಿನಿತ್ಯ ಓದುವ ವಿಷಯಗಳನ್ನು ಪುನರ್ ಮನನ ಮಾಡಿಕೊಳ್ಳುವುದು ತೀರಾ ಅಗತ್ಯ. ಓದಿರುವುದನ್ನು ಬರೆಯುತ್ತಾ ಹೋದರೆ ವಿಷಯಗಳು ಮರೆತು ಹೋಗುವುದಿಲ್ಲ. ಕ್ವಾಲಿಟಿ, ಕ್ವಾಂಟಿಟಿ ಹಾಗೂ ಪ್ರೆಝೆಂಟೇಷನ್( ಗುಣಮಟ್ಟ, ಪ್ರಮಾಣ, ವಿಷಯ ಮಂಡನೆ)ಗೆ ಹೆಚ್ಚಿನ ಆಧ್ಯತೆ ನೀಡಬೇಕು, ನಿಮ್ಮ ಅಪ್ಪ-ಅಮ್ಮಂದಿರ ನೆಮ್ಮದಿ ಚನ್ನಾಗಿದ್ದರೆ, ನಿಮ್ಮ ನೆಮ್ಮದಿಯೂ ಚನ್ನಾಗಿರುತ್ತದೆ, ಮನಸ್ಸಿಟ್ಟು ಓದಿ, ಶೇ.50 ಅಂಕ ಪಡೆದರೆ ಯುಪಿಎಸ್ಸಿ ಆಗಬಹುದು, ಶೇ.55 ಅಂಕ ಪಡೆದಲ್ಲಿ ತುದಿಗೇರಿ(ಟಾಪ್)ಉನ್ನತ ಹುದ್ದೆ ಪಡೆಯಲು ಅವಕಾಶ ಸಿಗುತ್ತದೆ ಎಂದರು.
ಸಮಯಕ್ಕೆ ಹೆಚ್ಚಿನ ಮಹತ್ವ: ಪರೀಕ್ಷೆಯಲ್ಲಿ ಪ್ರತಿ ಪ್ರಶ್ನೆಗೆ ಉತ್ತರ ಬರೆಯಲು ಇಂತಿಷ್ಟು ಸಮಯ ಬೇಕಾಗುತ್ತದೆ, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಬರವಣಿಗೆಯೂ ಅಷ್ಟೇ ಮುಖ್ಯ, ಉತ್ತರ ಪತ್ರಿಕೆಯ ಮೌಲ್ಯ ಮಾಪನ ಮಾಡುವವರು ಸುಂದವಾದ, ಸ್ವಚ್ಛವಾದ ಹಾಗೂ ನಿಖರವಾದ ಬರವಣಿಗೆಯನ್ನು ಇಷ್ಟಪಡುವುದರಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕರ ರೀತಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಬೋಧನೆ ಮಾಡಿದರಲ್ಲದೆ, ಅದೃಷ್ಟದಿಂದ ಕೇವಲ ಶೇ.2 ರಷ್ಟು ಮಂದಿಗೆ ಮಾತ್ರ ಪ್ರಯೋಜನವಾಗುತ್ತದೆ, ಇನ್ನುಳಿದ ಶೇ.98ರಷ್ಟು ಕಠಿಣ ಪರಿಶ್ರಮದಿಂದ ಮಾತ್ರ ಗುರಿ ಸಾಧಿಸಲು ಸಾಧ್ಯವಾಗುವುದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಹಾಗೂ ಇಷ್ಟಪಟ್ಟು ಓದುವುದರಿಂದ ಉತ್ತಮ ಸ್ಥಾನ ಅಲಂಕರಿಸಬಹುದೆಂದು ನುಡಿದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುವವರು ಸಂದರ್ಶನದಲ್ಲಿ ಎಡುವುದು ಉಂಟು. ಇದಕ್ಕಾಗಿ ಕೌಶಲ್ಯತೆಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು, ಸಂದರ್ಶನವೆಂದರೆ ಒಂದು ರೀತಿಯಲ್ಲಿ ನಮ್ಮನ್ನು ನಾವು ಮಾರಿಕೊಳ್ಳುವುದೆಂದರ್ಥ. ನಮ್ಮ ಓದು, ಬರಹ, ಹವ್ಯಾಸ,ಆಸಕ್ತಿ, ಶ್ರದ್ಧೆ, ವಿನಯ ಮುಂತಾದ ಮಾನದಂಡಗಳನ್ನು ಆಧರಿಸಿ ಸಂದರ್ಶಕರು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಚಾಕಚಕ್ಯತೆಯಿಂದ ಉತ್ತರ ನೀಡುವ ಕಲೆಗಾರಿಕೆ, ಜ್ಞಾನ ವೃದ್ಧಿಸಿಕೊಂಡರೆ ಹೆಚ್ಚಿನ ಅಂಕ ಪಡೆಯುವುದರೊಂದಿಗೆ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗುವುದರಿಂದ ವಿದ್ಯಾರ್ಥಿಗಳು ಗುರಿ ಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಯುರ್ವೇದ ಪಂಡಿತರು ಮತ್ತು ಲೇಖಕಿ ಡಾ. ವಸುಂಧರ ಭೋಪತಿ, ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಇದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ವಿ. ನಂದವಾಡಿಗಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರವೀಂದ್ರ ನಿರೂಪಿಸಿ, ಹೇಮಮಾಲಿನಿ ಸ್ವಾಗತಿಸಿದರು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

