ದಿಬ್ಬೂರಿನಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ
ಚಿಕ್ಕಬಳ್ಳಾಪುರ: ಜನರ ಅಹವಾಲುಗಳನ್ನು ಆಲಿಸಿ ಬಗೆಹರಿಸುವುದಕ್ಕಾಗಿಯೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿರುವುದು. ಇದನ್ನರಿತು ಇಬ್ಬರೂ ಜನರ ಸಮಸ್ಯೆಗಳನ್ನು ದೂರ ಮಾಡಬೇಕೆಂದು ಶಾಸಕ ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತದ ವತಿಯಿಂದ ದಿಬ್ಬೂರು ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ 4 ವರ್ಷದಿಂದ ದಿಬ್ಬೂರಿನಲ್ಲಿ ಒಂದೇ ಒಂದು ಜನಸ್ಪಂದನಾ ಸಭೆ ನಡೆದಿಲ್ಲ ಎಂದರೆ ಇದಕ್ಕೆ ಯಾರನ್ನು ಹೊಣೆ ಮಾಡಬೇಕು. ಇನ್ನು ಮುಂದೆ ಇದು ಪುನರಾವರ್ತನೆ ಆಗಬಾರದು. ಜನಸ್ಪಂದನಾ ಸಭೆ ಹೆಚ್ಚಿಗೆ ನಡೆಯಬೇಕು. ಆಗ ಮಾತ್ರ ಜನರ ಕಷ್ಟಗಳು ಹೆಚ್ಚು ತಿಳಿಯುತ್ತದೆ, ಅದರ ನಿಜವಾದ ದರ್ಶನವಾಗುತ್ತದೆ ಎಂದರು.
ಜನರು ಜಾಗೃತರಾಗಬೇಕು. ಆಗ ಸರ್ಕಾರ ಅನುಷ್ಠಾನಕ್ಕೆ ತರುವ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಬಯಲು ಶೌಚಾಲಯದಿಂದ ಹಲವು ರೋಗಗಳು ಹರಡುತ್ತವೆ. ಆದ ಕಾರಣ ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಲೇಬೇಕು. ನಿರ್ಮಲ ಭಾರತ ಅಭಿಯಾನ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಬೇಕೆಂದರು.
ಕೃಷಿ ಇಲಾಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ರೈತಸಂಪರ್ಕ ಕೇಂದ್ರದ ಸೂಚನಾ ಫಲಕಗಳಲ್ಲಿ ಸರ್ಕಾರದ ಯೋಜನೆಗಳ ಮಾಹಿತಿ ಲಗತ್ತಿಸಿ ಹಾಗೂ ಭಿತ್ತಿಪತ್ರಗಳನ್ನು ಹಂಚಬೇಕು. ರೈತರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಬೇಕೆಂದರು.
ದೊಡ್ಡಬಳ್ಳಾಪುರ ಸಮೀಪ 100 ಮೆಗಾವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ಕೆಟ್ಟಿರುವ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ಏರುಪೇರಾಗಿದೆ ಎಂದು ಬೆಸ್ಕಾಂ ಅಧಿಕಾರಿ ತಿಳಿಸಿದಾಗ ಕಿಡಿಕಾರಿದ ಗ್ರಾಮಸ್ಥರು, ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಒಂದು ತಿಂಗಳಿಂದ ಇದೇ ಸಮಸ್ಯೆಯಿದೆ. ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬೆಳೆಗಳು ಒಣಗುತ್ತಿವೆ. ರೈತರ ಕಷ್ಟ ಹೇಳತೀರದಾಗಿದೆ ಎಂದು ಆರೋಪಿಸಿದರು. ಇದಕ್ಕೆ ತಕ್ಷಣ ಕೆಪಿಟಿಸಿಎಲ್ ಎಂಡಿರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕ ಸುಧಾಕರ್, ಸಮಸ್ಯೆಗಳನ್ನು ವಿವರಿಸಿ ತಕ್ಷಣ ಸೂಕ್ತ ಪರಿಹಾರ ಸೂಚಿಸುವಂತೆ ಕೋರಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ಕಾರದ ವಿವಿಧ ಯೋಜನೆ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಸಂಧ್ಯಾಸುರಕ್ಷೆ ಬಾಂಡ್ ಹಾಗೂ ಪಶುಸಂಗೋಪನೆ ಇಲಾಖೆಯಿಂದ ಮೇವು ಬೀಜ ವಿತರಣೆ ಮಾಡಲಾಯಿತು. ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲಾಯಿತು. ಜನಸ್ಪಂದನಾ ಸಭೆಗೆ ಗೈರು ಹಾಜರಾದ ಆರ್ಟಿಒ, ಗಣಿ ಮತ್ತು ಭೂ ವಿಜ್ಞಾನ, ಎಸ್ಸಿ ಎಸ್ಟಿ ಕಾರ್ಪೋರೇಷನ್ ಅಧಿಕಾರಿಗಳಿಗೆ ನೋಟಿಸ್ ನೀಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ನಟೇಶ್, ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ನಿರ್ವಹಣಾಧಿಕಾರಿ ಗಣೇಶ್ ಸಾಕ್ರೆ, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ನರಸಿಂಹಮೂರ್ತಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

