ಕೋಲಾರ

ಇದ್ದಕ್ಕಿದಂತೆ ಎಚ್ಚೆತ್ತ ಕೇಂದ್ರ ಸಚಿವ!

Published On :

ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಎಚ್ಚೆತ್ತುಕೊಂಡಿದ್ದಾರೆ.
ಇದುವರೆಗೂ ಕ್ಷೇತ್ರದಲ್ಲಿ ಕಾರ್ಯಕ್ರಮ ಉದ್ಘಾಟನೆಗೆ ಮಾತ್ರ ಸೀಮಿತವಾಗಿದ್ದವರು ಇದೀಗ ಇದ್ದಕ್ಕಿದಂತೆ ಜನ ಸಾಮಾನ್ಯರ ಸಮಸ್ಯೆಗಳನ್ನು ಖುದ್ದು ಆಲಿಸುವ ಕೆಲಸವನ್ನು ಶುರುವಿಟ್ಟುಕೊಂಡಿದ್ದಾರೆ.
ಕ್ಷೇತ್ರದ ಪ್ರಣಾಳಿಕೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ ಅವರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪ್ರಣಾಳಿಕೆಯನ್ನೇ ಬಿಡುಗಡೆ ಮಾಡಿ ಗಮನ ಸೆಳೆದಿದ್ದರು. ಶಾಶ್ವತ ನೀರಾವರಿ ಸೌಲಭ್ಯ, ಕೈಗಾರಿಕೆಗಳ ಸ್ಥಾಪನೆ, ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ ಅನುದಾನ, ಜತೆಗೆ ವಿಶೇಷ ಯೋಜನೆಗಳು, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಭರವಸೆಗಳ ಹೊಳೆಯನ್ನೇ ಜೋರಾಗಿ ಹರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಹ ಸಾಧಿಸಿದರು. ಇದರಿಂದ ಪುಳಕಿತರಾಗಿ ಪ್ರಾರಂಭದಲ್ಲಿ ಪ್ರಚಾರ ಕಾರ್ಯಕ್ರಮ ಕೈಗೊಂಡು ಜನರನ್ನು ಸೇರುವ ಕೆಲಸಕ್ಕೆ ಕೈ ಹಾಕಿದ ಅವರು,ಗೆಲುವಿನ ನಂತರವೂ ಸಹ ಹೊಸ ಹೊಸ ಭರವಸೆ ಹೇಳಿಕೊಂಡು ಬಂದರು.
ಸಮಸ್ಯೆಯ ಡಬ್ಬಾ: ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರದ ಪ್ರಾರಂಭದ ದಿನಗಳಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ವಿಶೇಷ ಕಾರ್ಯಕ್ರಮವನ್ನು ವೀರಪ್ಪ ಮೊಯ್ಲಿ ಪ್ರಾರಂಭಿಸಿದ್ದು ಕ್ಷೇತ್ರದ ಪ್ರಮುಖ ಕಡೆಗಳೆಲ್ಲಾ ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಅರ್ಜಿಗಳನ್ನು ತಲುಪಿಸುವ ಸಲುವಾಗಿ ಅಹವಾಲು ಬಾಕ್ಸುಗಳನ್ನು ಹಾಕಿಸಿದ್ದರು.ಇದರ ಜತೆಗೆ ಸಾರ್ವಜನಿಕರ ಸಮಸ್ಯೆಗಳ ಅರ್ಜಿಗಳನ್ನು ಖುದ್ದಾಗಿ ಪಡೆದುಕೊಂಡು ತಮ್ಮ ಬಳಿಗೆ ಸೇರಿಸಲು ಪಕ್ಷದಿಂದ ಹೋಬಳಿವಾರು,ಆಯಾ ಪ್ರದೇಶ ವ್ಯಾಪ್ತಿಯಲ್ಲಿ ಪಕ್ಷದಿಂದ ತಲಾ ಒಬ್ಬರನ್ನು,ಅದಕ್ಕೆ ಮೇಲ್ವಿಚಾರಕರನ್ನು ನೇಮಕ ಮಾಡಿದ್ದರು.ಇವರಿಗೆ ವಿಶೇಷ ತರಬೇತಿಯನ್ನೂ ಸಹ ನೀಡಲಾಗಿತ್ತು.ಇದಕ್ಕೆ ಅದ್ದೂರಿ ಪ್ರಚಾರದಿಂದ ಮೊದ ಮೊದಲು ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು.ಆದರೆ,ಇದೀಗ ಇದು ತಣ್ಣಗಾಗಿದೆ. ಗಲ್ಲಿ ಗಲ್ಲಿಯಲ್ಲಿ ಹಾಕಿದ್ದ ಅಹವಾಲು ಸ್ವೀಕಾರ ಡಬ್ಬಾಗಳು ತುಕ್ಕು ಹಿಡಿದಿವೆ.ಕೆಲವನ್ನು ಕಿತ್ತುಕೊಂಡು ಹೋಗಲಾಗಿದೆ.ಅಪ್ರಯೋಜನಕಾರಿ ಹಿನ್ನೆಲೆಯಲ್ಲಿ ಕೋಪಗೊಂಡ ಅನೇಕರು ಉಳಿದ ಬಹಳಷ್ಟು ಬಾಕ್ಸುಗಳಲ್ಲಿ ಕಸ ತುಂಬಿದ್ದಾರೆ.ಇದರಿಂದ ಸಾರ್ವಜನಿಕರು ಯಾರೂ ಅರ್ಜಿಗಳನ್ನು ಹಾಕುತ್ತಿಲ್ಲ. ಖುದ್ದು ಸ್ವೀಕಾರವೂ ಸಹ ನಡೆಯುತ್ತಿಲ್ಲ. ಇನ್ನೂ ಕುಂದು ಕೊರತೆ ನಿವಾರಣೆಗಾಗಿ ನೇಮಕವಾಗಿದ್ದ ಬಹುತೇಕ ಸಂಪರ್ಕ ವ್ಯಕ್ತಿಗಳೇ ಈಗ ನಮ್ಮ ಸಮಸ್ಯೆಗಳನ್ನೇ ಕೇಳುವವರಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಅಹವಾಲಿಗೆ ಅತೃಪ್ತಿ: ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸೋಮವಾರ ಬಾಗೇಪಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟು ಹೋಬಳಿವಾರು ಜನರಿಂದ ಖುದ್ದು ಅಹವಾಲು ಸ್ವೀಕರಿಸಿದ್ದು ಬಹಳಷ್ಟು ಕಡೆ ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರ ಸಚಿವರು ಭರವಸೆ ನೀಡುತ್ತಾರೆ. ಆದರೆ, ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗುವುದಿಲ್ಲ ಎಂಬ ಟೀಕೆಗಳು ಕೇಳಿ ಬಂದಿವೆ.ಚುನಾವಣೆಯ ಸಂದರ್ಭದಲ್ಲಿ ಪ್ರತಿ ತಿಂಗಳು ಹೋಬಳಿವಾರು ಖುದ್ದು ಅಹವಾಲು ಸಭೆಯನ್ನು ನಡೆಸುತ್ತೇನೆ. ಗೆದ್ದ ಮೇಲೆ ರಾಜಧಾನಿಗೆ ಮಾತ್ರ ಸೀಮಿತವಾಗದೇ ಹೋಬಳಿಗೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಕೇಳುತ್ತೇನೆ ಎಂದಿದ್ದರು.ಆದರೆ,ಗೆದ್ದ ಮೇಲೆ ನಮ್ಮ ಹೋಬಳಿಗಳಿಗೆ ಬರಲೇ ಇಲ್ಲ. ಕೇವಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸಿ ಹಾಗೆಯೇ ತರಾತುರಿಯಲ್ಲಿ ವಾಪಸ್ಸಾಗುತ್ತಾರೆ.
ಅಹವಾಲು ಸಭೆಗಳ ಸಾಲು ,ಾಕಳೆದ ಎರಡ್ಮೂರು ವರ್ಷಗಳಲ್ಲಿ ಎಷ್ಟು ಅಹವಾಲು ಸ್ವೀಕಾರ ಸಭೆಗಳು ನಡೆದಿವೆ ಎನ್ನುವುದನ್ನು ಲೆಕ್ಕ ಹಾಕಿದರೆ ಗೊತ್ತಾಗುತ್ತದೆ ಎಂದು ಲೇವಡಿ ಮಾಡಿರುವ ಜನರು,ಇಷ್ಟು ದಿನ ಸುಮ್ಮನಿದ್ದ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೆ ನೀರಾವರಿ ರಾಜಕೀಯ: ಚುನಾವಣೆಗಳು ಸಮೀಪಿಸುತ್ತಿದ್ದಂತೆ ಬಯಲು ಸೀಮೆ ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸುವ ಮಂತ್ರದ ಜಪ ಹೆಚ್ಚಾಗುತ್ತದೆ.ಅಂತರ್ಜಲ ಮಟ್ಟ ಕುಸಿದಿರುವ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಲೇಬೇಕಾಗಿದೆ.ಇಲ್ಲದಿದ್ದಲ್ಲಿ ಉಳಿಗಾಲವಿಲ್ಲ. ಇದಕ್ಕೆ ಉಗ್ರ ಹೋರಾಟ ನಡೆಸಬೇಕೆಂದು ಅಧಿಕಾರ ಪಡೆಯಲಾಗುತ್ತದೆ. ಆ ನಂತರ ಬೆಳವಣಿಗೆ ಕೇವಲ ಮಾತಿಗೆ ಹೊರತೇ ಕಾರ್ಯ ರೂಪದಲ್ಲಾಗುವುದಿಲ್ಲ.
ಈಗಲೇ ನಾನು ಹೇಳುವುದಿಲ್ಲ. ಇನ್ನೂ ನಾಲ್ಕೈದು ತಿಂಗಳೇ ಬಾಕಿ ನೀರಾವರಿ ಸೌಲಭ್ಯ ಪಡೆಯುವುದಕ್ಕೆ ಎಂದು ಪ್ರಾರಂಭದಲ್ಲಿ ಹೇಳುತ್ತ ಬಂದು ಪರಮಶಿವಯ್ಯ ವರದಿ ಬಗ್ಗೆ ಚಕಾರ ಎತ್ತದೆ, ಎತ್ತಿನಹೊಳೆ ಯೋಜನೆ ಬಳಸಿಕೊಂಡ ಮೊಯ್ಲಿ, ಇದೀಗ ಪರಮಶಿವಯ್ಯ ವರದಿಗೆ ಪ್ರಥಮ ಆದ್ಯತೆ ಎನ್ನುತ್ತಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಇದೀಗ ವಿರೋಧ ಪಕ್ಷದಲ್ಲಿದ್ದು,  ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕೆಂದು ಉಲ್ಟಾ ತಿರುಗಿದ್ದಾರೆ.  
ಜತೆಗೆ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ  ಸೇರ್ಪಡೆಯಾಗಿದ್ದು, ಎತ್ತಿನಹೊಳೆ ಯೋಜನೆಗೆ ಆದ್ಯತೆ ಕಡಿಮೆ ಮಾಡಿ ಕೇವಲ ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ನಮ್ಮ ಒತ್ತಾಯ ಎನ್ನುತ್ತಿದ್ದಾರೆ. ಒಟ್ಟಾರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಮಶಿವಯ್ಯ ವರದಿ ಜಪ ಹೆಚ್ಚಿನ ಶಕ್ತಿ ಪಡೆದುಕೊಳ್ಳುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.