ಮರಳು ಫಿಲ್ಟರ್ ನಡೆಸಿದ್ರೆ ಕ್ರಿಮಿನಲ್ ಕೇಸ್
ಕನ್ನಡಪ್ರಭ ವಾರ್ತೆ, ಕೋಲಾರ, ಅ.7
ರೈತರ ಹೊಲಗಳಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ನಡೆಸುವವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅಧಿಕಾರಿಗಳಿಗೆ ಕಟ್ಟಾದೇಶ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಮರಳು ಮತ್ತು ಜಲ್ಲಿ ಕ್ರಷರ್ ಮಾನಿಟರಿಂಗ್ ಕಮಿಟಿಯ ಸಭೆಯಲ್ಲಿ ಮಾತನಾಡಿದ ಅವರು, ಕೆರೆಗಳಲ್ಲಿ ಮರಳು ಫಿಲ್ಟರ್ ಮಾಡುವುದು ಎಷ್ಟು ತಪ್ಪೋ ಅದೇ ರೀತಿ ಕೃಷಿ ಭೂಮಿಯಲ್ಲಿ ಮರಳು ಫಿಲ್ಟರ್ ಮಾಡುವುದು ಕಾನೂನಿಗೆ ವಿರುದ್ಧವಾಗಿರುವುದರಿಂದ ಇನ್ನು ಮುಂದೆ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯಲು ವಿಚಕ್ಷಣ ದಳ ರಚಿಸಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ಮಾಡಬೇಕೆಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮುನಿಆಂಜಪ್ಪ ಮೊದಲು ಮಾತನಾಡಿ, ಮುಳಬಾಗಲು ತಾಲೂಕಿನಲ್ಲಿ 900 ಕ್ಯೂಬಿಕ್ ಮೀಟರ್ ಹಾಗೂ ಬಂಗಾರಪೇಟೆಯಲ್ಲಿ 402 ಕ್ಯೂಬಿಕ್ ಮೀಟರ್ ಮರಳು ಅಕ್ರಮ ಮರಳು ದಾಸ್ತಾನು ವಶಕ್ಕೆ ಪಡೆಯಲಾಗಿದ್ದು, ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
30 ರುಪಾಯಿ ರಾಜಧನ: ಇದಕ್ಕೆ ಸ್ಪಂದಿಸಿದ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು, ಟೆಂಡರ್ ಕರೆದು ಮರಳು ಹರಾಜು ಹಾಕುವಂತೆ ಸೂಚಿಸಿದರು. ಸ್ಥಳೀಯ ಬಳಕೆಗಾಗಿ ಮರಳು ಬೇಕಾದರೆ ಪ್ರತಿ ಟನ್ಗೆ 30 ರುಪಾಯಿ ರಾಜಧನ ಪಾವತಿಸಿ ಮರಳು ಸಾಗಾಟಕ್ಕೆ ಅವಕಾಶ ನೀಡಿ ಎಂದು ತಿಳಿಸಿದರು. ಕೆರೆಗಳಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಮಾಡಿ ರಾಜಾರೋಷವಾಗಿಯೇ ಬೆಂಗಳೂರು ಮತ್ತಿತರ ಕಡೆಗಳಿಗೆ ಸಾಗಾಣೆ ಮಾಡಲಾಗುತ್ತಿದೆ ಎಂಬ ದೂರುಗಳು ಸಾಕಷ್ಟು ಕೇಳಿ ಬಂದಿವೆ. ಮುಖ್ಯಮಂತ್ರಿಗಳು ಸಹ ಅಕ್ರಮ ಮರಳು ಸಾಗಾಣೆ ತಡೆಯಲು ಆದೇಶಿಸಿದ್ದಾರೆ. ಅಕ್ರಮ ಮರಳು ಸಾಗಾಣೆ ತಡೆಯಲು ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ಮುಳಬಾಗಲು ಸಮೀಪದ ಲ್ಯಾಂಕೋ ಟೋಲ್ಗೇಟ್ ಬಳಿ ಚೆಕ್ಪೋಸ್ಟ್ ತೆರೆಯಲಾಗಿದ್ದರೂ ಲಾರಿಗಳು ಕಳ್ಳ ಮಾರ್ಗದಲ್ಲಿ ಸಾಗುತ್ತಿರುವುದರಿಂದ ರಾಮಸಂದ್ರದ ಗಡಿಯಲ್ಲಿ ಚೆಕ್ಪೋಸ್ಟ್ ತೆರೆದು ಮರಳು ಲಾರಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದರು.
ಅಕ್ರಮ ತಡೆಗಟ್ಟಬೇಕು: ಕೋಲಾರ, ಬಂಗಾರಪೇಟೆಯಲ್ಲಿ ಮರಳು ಫಿಲ್ಟರ್ ದಂಧೆ ಹೆಚ್ಚಾಗಿರುವ ಬಗ್ಗೆ ದೂರುಗಳಿವೆ. ಜಿಲ್ಲಾ ಮಟ್ಟದ ವಿಚಕ್ಷಣ ದಳದವರು ಇನ್ನು ಮುಂದೆ ಯಾವುದೇ ದೂರು ಬಂದರೂ ತಕ್ಷಣ ಸ್ಥಳಕ್ಕೆ ಹೋಗಿ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ತಾಕೀತು ಮಾಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂಪತ್ಕೃಷ್ಣ ಸಭೆಗೆ ತಡವಾಗಿ ಆಗಮಿಸಿದ್ದನ್ನು ಗಮನಿದ ಜಿಲ್ಲಾಧಿಕಾರಿಗಳು ನಿಮಗೆ ಕಷ್ಟ ತಪ್ಪಿಸಲು ಈ ಸಭೆ ಕರೆಯಲಾಗಿದೆ. ಸಮಯ ಪ್ರಜ್ಞೆ ಇಲ್ಲದೆ ತಡವಾಗಿ ಬಂದರೆ ಹೇಗೆ.ಎಂದು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಶೇ. 50ರಷ್ಟು ಅಕ್ರಮ ಮರಳು ಗಣಿಗಾರಿಕೆ ನಿಂತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದಾಗ ಈ ಕಟ್ಟುಕತೆಯನ್ನು ನಾನು ನಂಬಲ್ಲ, ನನ್ನ ಬಳಿ ಇರುವ ಮಾಹಿತಿ ಪ್ರಕಾರ ಶೇ.20ರಷ್ಟು ಮಾತ್ರ ನಿಂತಿದೆ. ಬಾಕಿ ಶೇ. 80ರಷ್ಟು ಭಾಗ ಇನ್ನೂ ಅಕ್ರಮವಾಗಿ ಸಾಗಾಣೆ ಆಗುತ್ತಿದ್ದು ಇದನ್ನು ತಡೆಯಬೇಕೆಂದು ತಿಳಿಸಿದರು.
ಅಕ್ರಮವಾಗಿ ಸಾಗಾಣೆ ಮಾಡುವ ಮರಳನ್ನು ಜಪ್ತಿ ಮಾಡಿ ಲ್ಯಾಂಕೋ ಚೆಕ್ಪೋಸ್ಟ್ ಬಳಿಯ ಕಲ್ಲು ಬಂಡೆಯ ಜಾಗದಲ್ಲಿ ಹಾಗೂ ರಾಮಸಂದ್ರದಲ್ಲಿ ಸ್ಥಳ ಗುರುತಿಸಿ ಮರಳನ್ನು ಶೇಖರಣೆ ಮಾಡಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಿ, ಯಾವುದೇ ಕಾರಣಕ್ಕೂ ಸಣ್ಣ ಮೊತ್ತದ ದಂಡ ವಿಧಿಸಬೇಡಿ, ಕಾನೂನು ಪ್ರಕಾರ ಕ್ರಮ ಜರುಗಿಸಿ. ಒಂದು ವೇಳೆ ಕೇಸು ಬೇಡವೆಂದಲ್ಲಿ ಪ್ರತಿ ಲಾರಿಗೆ 1 ಲಕ್ಷ ದಂಡ ವಿಧಿಸಿ ಆಗ ಲಾರಿ ಮಾಲೀಕರು ದಾರಿಗೆ ಬರುತ್ತಾರೆಂದು ತಿಳಿಸಿದರು.
ಸಾರ್ವಜನಿಕರು ಮತ್ತು ರೈತರಲ್ಲಿ ಜಾಗೃತಿ ಮೂಡಿಸಲು 10 ಸಾವಿರ ಕರಪತ್ರ ಮುದ್ರಿಸಿ ಹಳ್ಳಿಗಳಲ್ಲಿ ವಿತರಿಸುವಂತೆ ಲೋಕೋಪಯೋಗಿ ಅಧಿಕಾರಿಗೆ ಸೂಚಿಸಿದರು.
ಸುರಕ್ಷತಾ ವಲಯದಲ್ಲಿ ಕ್ರಷರ್ಗಳಿಗೆ ಅನುಮತಿ: ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಜಲ್ಲಿ ಕ್ರಷರ್ಳನ್ನು ಸುರಕ್ಷತಾ ವಲಯಕ್ಕೆ ಸ್ಥಳಾಂತರಿಸಬೇಕಿದೆ. ಜಿಲ್ಲೆಯಲ್ಲಿ 83 ಕ್ರಷರ್ಗಳ ಪೈಕಿ 52 ಕ್ರಷರ್ಗಳು ಕಾರ್ಯನಿರ್ವಹಿಸುತ್ತಿದ್ದು ಈ ಪೈಕಿ 18 ಕ್ರಷರ್ಗಳನ್ನು ಮಾತ್ರ ಅಧಿಕೃತಗೊಳಿಸಿ ಪ್ರಮಾಣ ಪತ್ರ ನೀಡಲಾಗಿದೆ ಎಂದು ಗಣಿ ಮತ್ತು ಭೂಮಿ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ತಿಳಿಸಿದರು. ಜಿಲ್ಲೆಯಲ್ಲಿ 13 ಮಾತ್ರ ಕಡೆ ಸುರಕ್ಷತಾ ವಲಯಗಳನ್ನು ಗುರುತಿಸಲಾಗಿದ್ದು, ದೇವರಾಯಸಮುದ್ರ , ಮಾಕರಹಳ್ಳಿ ಮತ್ತು ಬೆಟ್ಟಹೊಸಪುರದ ಸುರಕ್ಷತಾ ವಲಯಗಳನ್ನು ಮರು ಗುರುತಿಸಲು ಸೂಚಿಸಲಾಗಿದೆ. 10 ಸುರಕ್ಷತಾ ವಲಯಗಳು ಕಾನೂನು ಬದ್ದವಾಗಿದ್ದು, 29 ಜಲ್ಲಿ ಕ್ರಷರ್ಗಳನ್ನು ಸ್ಥಳಾಂತರಿಸಲು ಸಿ ಫಾರಂ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಸುರಕ್ಷತಾ ವಲಯದ ವ್ಯಾಪ್ತಿಯಲ್ಲಿ ಕಲ್ಲು ಪುಡಿ ಘಟಕ ಪರವಾನಿಗೆ ಕೋರಿ ಸುಮಾರು 43 ಅರ್ಜಿಗಳಿಗೆ ಸಂಬಂಧಿಸಿದಂತೆ ಡಿಡಿ ಪಾವತಿಸಿಲ್ಲ, ಅರ್ಜಿ ಅಪೂರ್ಣವಾಗಿದೆ ಅವರಿಗೆ ನೋಟಿಸ್ ನೀಡುವುದು, ಕ್ರಷರ್ ಇದ್ದರೆ ಕ್ರಮ ಬದ್ದವಾಗಿ ಅರ್ಜಿ ಪಡೆದು ಸುರಕ್ಷತಾ ವಲಯಕ್ಕೆ ಸ್ಥಳಾಂತರ ಮಾಡಲಾಗುವುದು. ಇನ್ನು ಸಿ ಫಾರಂ ಪಡೆದಿರುವ 27 ಮಂದಿಯಲ್ಲಿ ನಾಲ್ಕು ಕ್ರಷರ್ಗಳು ಮಾತ್ರ ಕ್ರಮಬದ್ಧವಾಗಿದೆ. ಹೊರಗಿನವರು ಸಿ ಫಾರಂ ಬಳಸಿಕೊಂಡಿರುವುದನ್ನು ಕಾನೂನು ಪ್ರಕಾರ ರದ್ದುಪಡಿಸಿ ಎಂದು ಸೂಚನೆ ನೀಡಿದರು.
ಅ.31 ರಂದು ಮತ್ತೊಮ್ಮೆ ಮರಳು ಮತ್ತು ಕ್ರಷರ್ ಮಾನಿಟರ್ ಕಮಿಟಿಯ ಸಭೆ ಕರೆಯುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪಟ್, ಉಪ ವಿಭಾಗಾಧಿಕಾರಿ ಮಂಜುನಾಥ್, ಜಿ.ಪಂ. ಉಪಕಾರ್ಯದರ್ಶಿ ಬದನೂರು, ಜಿಲ್ಲಾ ಪರಿಸರ ಅಧಿಕಾರಿ ಮರಿಮಾದಯ್ಯ, ಶ್ರೀನಿವಾಸಪುರ ತಹಸೀಲ್ದಾರ್ ಜಯಾ, ಬಂಗಾರಪೇಟೆ ತಹಸೀಲ್ದಾರ್ ಉಷಾ, ವಲಯ ಅರಣ್ಯಾಧಿಕಾರಿ ರಾಮಕೃಷ್ಣ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

