ರಕ್ಷಣೆ ನೀಡದ ವಾರ್ಡನ್: ತಾಪಂ ತರಾಟೆ
ಕ.ಪ್ರ. ವಾರ್ತೆ ಮಾಲೂರು ಅ. 7
ಹಾಸ್ಟೆಲ್ನಲ್ಲಿರುವ ಕೇವಲ 5 ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡದೆ, ಸ್ನಾನಕ್ಕೆ ನೀರಿನ ಸೌಲಭ್ಯ ಒದಗಿಸದೆ ನಿರ್ಲಕ್ಷ್ಯ ತೋರುತ್ತಿದ್ದ ಇಲ್ಲಿನ ಬಿಸಿಎಂನ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ವಾರ್ಡನ್ ಅವರನ್ನು ತಾಲೂಕು ಪಂಚಾಯ್ತಿ ಅಧ್ಯಕ್ಷ ಪುಟ್ಟಸ್ವಾಮಿ ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ಸೋಮವಾರ ನಡೆದ ಹಾಸ್ಟೆಲ್ಗಳ ಕುಂದುಕೊರತೆ ಸಭೆಯಲ್ಲಿ ನಡೆದಿದೆ.
54 ವಿದ್ಯಾರ್ಥಿನಿಯರು ದಾಖಲಾಗಿದ್ದರೂ ಕೇವಲ 5 ವಿದ್ಯಾರ್ಥಿನಿಯರು ಮಾತ್ರ ಇದ್ದು,ಅವರಿಗೂ ಸ್ನಾನ ಮಾಡಲು ವ್ಯವಸ್ಥೆ ಮಾಡಕೊಡದ ಬಗ್ಗೆ ವಾರ್ಡನ್ ನಾಗರತ್ನ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಅಧ್ಯಕ್ಷ ಪುಟ್ಟಸ್ವಾಮಿ, ತಿಂಗಳಲ್ಲಿ ಹಲವು ರಾತ್ರಿಗಳು ಕೇವಲ 5 ಹುಡುಗಿಯರು ಮಾತ್ರ ಹಾಸ್ಟೆಲ್ನಲ್ಲಿ ಮಲಗಬೇಕಾಗಿರುವುದು ಖಂಡಿಸಿದರು.
ಕಾವಲುಗಾರ ರಜೆ ಹಾಗೂ ಅಡುಗೆ ಮಾಡುವವರು ಹಾಸ್ಟೆಲ್ನಲ್ಲಿ ರಾತ್ರಿ ಉಳಿದುಕೊಳ್ಳಲು ಅಸಹಕಾರ ತೋರುತ್ತಿದ್ದಾರೆ ಎಂಬ ವಾರ್ಡನ್ ನಾಗರತ್ನ ಮಾತನ್ನು ಒಪ್ಪದ ಅಧ್ಯಕ್ಷ ಪುಟ್ಟಸ್ವಾಮಿ ಹಾಗೂ ಇಒ ಭದ್ರಿನಾಥ್ ಅವರು ಬೇರೆಯವರು ಇರದಿದ್ದರೆ ನೀವೇ ಹಾಸ್ಟೆಲ್ನಲ್ಲಿ ಮಲಗಿ ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು.
ಸ್ನಾನಕ್ಕೆ ನೀರು ನೀಡದ ನಿಮ್ಮಂತಹವರು ಹೆಣ್ಣಾಗಿ ತಮ್ಮ ಮಕ್ಕಳಂತೆ ಇರುವ ಹಾಸ್ಟೆಲ್ನ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ತೋರದಿರುವುದು ಆಶ್ಚರ್ಯವಾಗುತ್ತದೆ ಎಂದರು. ಹಾಸ್ಟೆಲ್ ನಡೆಸಲು ನಿಮಗೆ ಅಧಿಕಾರಿಗಳಿಂದ ಅಥವಾ ಸಂಘ-ಸಂಸ್ಥೆಗಳಿಂದ ತೊಂದರೆ ಇದ್ದಲಿ ಧೈರ್ಯವಾಗಿ ತಿಳಿಸಬೇಕೆಂದ ಇಒ ಬದ್ರಿನಾಥ್, ಅಂತಹ ವ್ಯಕ್ತಿಗಳ ಬಗ್ಗೆ ಪ್ರತ್ಯೇಕವಾಗಿ ನನ್ನನ್ನು ಸಂಧಿಸಿ ತಿಳಿಸಬಹುದು. ಅವಶ್ಯವಿದ್ದಲ್ಲಿ ಜಿಲ್ಲಾಧಿಕಾರಿ ಮೂಲಕ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಕಳೆದ 4 ವರ್ಷಗಳಿಂದ ಸರ್ಕಾರದಿಂದ ವಿತರಣೆಯಾಗದ ತಟ್ಟೆ-ಲೋಟ-ಹಾಸಿಗೆಗಳ ವಿತರಣೆಯನ್ನು ಪುನಃ ಪ್ರಾರಂಭಿಸುವಂತೆ ಇಲಾಖೆಯನ್ನು ಕೋರಲಾಗುವುದು ಎಂದ ಅಧ್ಯಕ್ಷ ಪುಟ್ಟಸಾಮಿ, ವಾರ್ಡನ್ಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಕಾನೂನು ಮೂಲಕ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಮಾಸ್ತಿ-ಶಿವಾರ ಪಟ್ಟಣ ಹಾಸ್ಟೆಲ್ಗಳಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ಪಟ್ಟಣದ ಬಾಲಕಿಯರ ಹಾಸ್ಟೆಲ್ನಲ್ಲಿನ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಿಸಿಕೊಡಬೇಕೆಂಬ ವಾರ್ಡನ್ ರೂಪಾ ಅವರ ಮನವಿಗೆ ಸ್ಪಂದಿಸಿದ ಇಒ, ಈ ಬಗ್ಗೆ ವರದಿ ತಯಾರಿಸಿ ನೀಡುವ ಜತೆಯಲ್ಲಿ ಬಾಕಿ ಇರುವ ವಾರ್ಡನ್ಗಳ ಬಿಲ್ಗಳನ್ನು ಬೇಗನೆ ಚುಕ್ತಾ ಮಾಡಿ ಎಂದು ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿರಿಗೆ ಆದೇಶಿಸಿದರು.
ಬಯೋವುಟ್ರಿಕ್ ವ್ಯವಸ್ಥೆಯನ್ನು ಪದೇ ಪದೇ ಹಾಳಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಇಒ ಬದ್ರಿನಾಥ್, ಟ್ಯಾಂಪರ್ ಫೋಫ್ ಅಳವಡಿಸಿ ಬಯೋವುಟ್ರಿಕ್ನ್ನು ಪ್ರತಿ ಹಾಸ್ಟೆಲ್ನಲ್ಲಿ ಅಳವಡಿಸಲಾಗುವುದು ಎಂದರು.
ಅ.8ರಂದು ಪಟ್ಟಣಕ್ಕೆ ಆಗಮಿಸಲಿರುವ ಉಪ ಲೋಕಾಯುಕ್ತರು ಪ್ರಮುಖವಾಗಿ ಹಾಸ್ಟೆಲ್ಗಳಿಗೆ ಭೇಟಿ ನೀಡಲಿದ್ದು, ವಾರ್ಡನ್ಗಳು ದಾಖಲೆ ಹಾಸ್ಟೆಲ್ನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಗೋಪಾಲ್ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

