ಕೋಲಾರ

ಕಾಲುಬಾಯಿ ಜ್ವರ; ಜಾನುವಾರು ಸಂತೆ ನಿಷೇಧ

Published On :


ಕೋಲಾರ: ಕಳೆದ ಎರಡು ತಿಂಗಳಿಂದೀಚೆಗೆ ಕಾಲು ಬಾಯಿ ಜ್ವರದಿಂದ ಜಿಲ್ಲೆಯಲ್ಲಿ ಸುಮಾರು 540ಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿರುವುದರಿಂದ ಪಶು ಸಂಗೋಪನಾ ಇಲಾಖೆಯ ಶಿಪಾರಸ್ಸಿನ ಮೇರೆಗೆ ಕಳೆದ ಸೆಪ್ಟೆಂಬರ್ 20 ರಿಂದ ಜಾರಿಯಲ್ಲಿದ್ದ ಜಾನುವಾರು ಸಂತೆಗಳ ನಿಷೇಧವನ್ನು ರೋಗ ನಿಯಂತ್ರಣಕ್ಕೆ ಬರುವವರೆಗೆ ಮಂದುವರೆಸಿದ್ದಾರೆ.
ಇದರಿಂದ ಅನೇಕ ರೈತರಿಗೆ ಒಂದು ರೀತಿಯಲ್ಲಿ ವರದಾನವಾಗಿದ್ದರೆ, ಇನ್ನು ಕೆಲವು ರೈತರು ಜಾನುವಾರುಗಳ ಮಾರಾಟ ಮತ್ತು ಖರೀದಿಗೆ ಅಡ್ಡಿಯಾಗಿರುವುದರಿಂದ ಧರ್ಮ ಸಂಕಟಕ್ಕೆ ಗುರಿಯಾಗಿದ್ದಾರೆ. ಕೋಲಾರ ಜಿಲ್ಲೆಯ 267 ಹಳ್ಳಿಗಳನ್ನು ರೋಗ ಪೀಡಿತ ಹಳ್ಳಿಗಳೆಂದು ಗುರುತಿಸಲಾಗಿದೆ. ಈ ಹಳ್ಳಿಗಳಲ್ಲಿ 2,652 ಜಾನುವಾರುಗಳು ರೋಗೋದ್ರೇಕಕ್ಕೆ ಒಳಗಾಗಿ ಈ ಪೈಕಿ 540 ಜಾನುವಾರುಗಳು ಮರಣ ಹೊಂದಿರುವುದಾಗಿ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಎನ್. ಶಿವರಾಮ್ ತಿಮ್ಮನ್ನು ಭೇಟಿಯಾಗಿದ್ದ ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಮುಳಬಾಗಲು ಪ್ರಥಮ: ಕಾಲು ಬಾಯಿ ಜ್ವರದಿಂದ ಕೋಲಾರದಲ್ಲಿ ಅತಿ ಹೆಚ್ಚು 208 ಜಾನುವಾರುಗಳು ಸತ್ತಿದ್ದರೆ, ಎರಡನೇ ಸ್ಥಾನವನ್ನು ಮುಳಬಾಗಲು ತಾಲೂಕು ಪಡೆದುಕೊಂಡಿದೆ. ಇಲ್ಲಿ ರೋಗ್ರೋದ್ರೇಕಕ್ಕೆ ಒಳಪಟ್ಟ 856 ಹಸುಗಳ ಪೈಕಿ 147 ಮೃತಪಟ್ಟಿವೆ. ಬಂಗಾರಪೇಟೆ ತಾಲೂಕಿನಲ್ಲಿ ಇಲಾಖೆಯ ಮಾಹಿತಿ ಪ್ರಕಾರ 11 ಜಾನುವಾರುಗಳು ಮಾತ್ರ ಮರಣ ಹೊಂದಿವೆ.
ಪ್ರಕೃತಿ ವಿಕೋಪ ನಿಧಿಯಡಿ: ರೋಗ ಪೀಡಿತ ಜಾನುವಾರುಗಳಿಗೆ ಜಿಲ್ಲಾ ಆಡಳಿತದಿಂದ ಪ್ರಕೃತಿ ವಿಕೋಪ ನಿಧಿಯಡಿಯಲ್ಲಿ ರು. 25 ಲಕ್ಷ ಹಾಗೂ ಜಿಪಂ ಲಿಂಕ್ ಡಕ್ಯೂಮೆಂಟ್ ಅಡಿಯಲ್ಲಿ ರು. 30 ಲಕ್ಷ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ಅ.5 ರಿಂದ ಈವರೆಗೆ 2,90,240 ಜಾನುವಾರುಗಳ ಪೈಕಿ 2,21,747 ಹಸುಗಳಿಗೆ ಲಸಿಕೆ ಹಾಕಲಾಗಿದೆ.
ನಿಖರವಾದ ಮಾಹಿತಿ: ಇನ್ನು 50 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಬೇಕಾಗಿದ್ದು ಇದಕ್ಕಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ. ಸೋಮವಾರ ರಾಜ್ಯ ಪಶು ಸಂಗೋಪನಾ ಇಲಾಖೆಯ ಸಚಿವ ಜಯಚಂದ್ರ ಅವರು ವಿಡಿಯೋ ಕಾನ್ಫರೇನ್ಸ್ ಮುಖೇನ ತಮ್ಮೊಂದಿಗೆ ಮಾತನಾಡಿ, ಕಾಲು ಬಾಯಿ ಜ್ವರದ ಬಗ್ಗೆ ಪ್ರತಿದಿನ ನಿಖರವಾದ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಕಾಲು ಬಾಯಿ ಜ್ವರದಿಂದ  ಸತ್ತಿರುವ ರಾಸುಗಳ ಮಹಜರ್ ನಡೆಸಲು ಸಮಿತಿ ರಚನೆ ಮಾಡುವಂತೆ ತಿಳಿಸಿದ್ದಾರೆ. ಸರ್ಕಾರದಿಂದ ಈ ಸಂಬಂಧ ಅಧಿಕೃತ ಆದೇಶ ಪ್ರಕಟಣೆಯಾದ ಕೂಡಲೇ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗುವುದು. ಈ ಮಧ್ಯೆ ಇಲಾಖೆಯ ಅಧಿಕಾರಿಗಳು ಮತ್ತು ಕೆಎಂಎಫ್ ಸಹಯೋಗದೊಂದಿಗೆ ಜಾನುವಾರುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳು ನೀಡಿರುವ ಸೂಚನೆ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆಂದರು.
ಯಾವುದೇ ಹಳ್ಳಿಯಲ್ಲಿ ಕಾಲು ಬಾಯಿ ಜ್ವರದಿಂದ ಜಾನುವಾರುಗಳು ಸತ್ತಲ್ಲಿ ಹಸುಗಳ ಮಾಲೀಕರು ತಕ್ಷಣ ಇಲಾಖೆಗೆ ಗಮನಕ್ಕೆ ತರಬೇಕು. ಮಹಜರ್ ನಡೆಸಲು ಬರುವ ತಜ್ಞರನ್ನು ಸತ್ತ ಹಸುಗಳ ಜೊತೆ ನಿಲ್ಲಿಸಿ ಭಾವಚಿತ್ರ ತೆಗೆಸಬೇಕು, ಫೋಟೋದಲ್ಲಿ ಕಡ್‌ಡಯವಾಗಿ ಜಾನುವಾರುಗಳ ವಾರಸುದಾರರು ಸಹಿತ ಇರಬೇಕೆಂದು ಸೂಚಿಸಲಾಗಿದೆ ಎಂದು ನುಡಿದರು.
ನಮ್ಮ ಇಲಾಖೆಯಲ್ಲಿ 60 ಮಂದಿ ಪಶು ವೈದ್ಯ ಸಹಾಯಕರು ಇರಬೇಕಾಗಿತ್ತು. ಕೇವಲ 12 ಮಂದಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ರೋಗಪೀಡಿತ ಎಲ್ಲಾ 267 ಹಳ್ಳಿಗಳಿಗೆ ಸಕಾಲಕ್ಕೆ ಹೋಗಲು ಆಗುತ್ತಿಲ್ಲ. ಆದರೂ ಇರುವ ವ್ಯವಸ್ಥೆಯಲ್ಲೇ ರೋಗ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.
ಕಾಲು ಬಾಯಿ ಜ್ವರದಿಂದ ಸತ್ತಿರುವ ಜಾನುವಾರುಗಳ ವಾರಸುದಾರರಿಗೆ ಪರಿಹಾರ ನೀಡಬೇಕೆಂಬ ಜನತೆಯ ಒತ್ತಾಸೆಯನ್ನು ಸರ್ಕಾರಕ್ಕೆ ತಿಳಿಸಲಾಗಿದೆ. ಸರ್ಕಾರ ಹಣ ನೀಡಿದಲ್ಲಿ ಪರಿಹಾರ ನೀಡಲಾಗುತ್ತದೆ, ಈಗ ಸತ್ತಿರುವ ಜಾನುವಾರುಗಳ ಮಾಹಿತಿ ಸಂಗ್ರಹಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ನಮ್ಮ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇರುವುದರಿಂದ ಕೆಎಂಎಫ್ ಸಹಯೋಗದಲ್ಲಿ ರೋಗ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಯುತ್ತಿದ್ದು, ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೈತರಿಗೆ ಅರಿವು ಮೂಡಿಸಲು ಕರ ಪತ್ರ ಮುದ್ರಿಸಿ ಎಲ್ಲಾ ಹಳ್ಳಿಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದು ಉಪ ನಿರ್ದೇಶಕರು ವಿವರಿಸಿದರು.
ತಾವು ಕಳೆದ 30 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕಾಲು ಬಾಯಿ ಜ್ವರದಿಂದ ಜಾನುವಾರುಗಳು ಸತ್ತಿರುವ ಪ್ರಕರಣಗಳು ಅಪರೂಪ. ಜಿಲ್ಲೆ ಮತ್ತು ಇತರ ಕಡೆ ರಾಸುಗಳು ದೊಡ್ಡ ಪ್ರಮಾಣದಲ್ಲಿ ಸತ್ತಿರುವುದು ಇದೇ ಮೊದಲೆಂದ ಅವರು, ಜಾನುವಾರು ಕೊಟ್ಟಿಗೆಗಳನ್ನು ಮತ್ತು ಸುತ್ತ ಮುತ್ತ ಪ್ರದೇಶಗಳನ್ನು ವೈರಾಣುಗಳಿಂದ ಕೊಲ್ಲಲು ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಲು ವಿತರಣೆ ಮಾಡಲಾಗಿದೆ. ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು. ಒಂದು ವೇಳೆ ರೈತರು ಖಾಸಗಿಯಾಗಿ ಔಷಧಿ ಖರೀದಿ ಮಾಡಿದರೂ ಕೇವಲ ರು. 15 ಖರ್ಚು ಆಗುತ್ತದೆ. ಈ ಹಣವನ್ನು ಭರಿಸುವ ಶಕ್ತಿ ರೈತರಿಗೆ ಇಲ್ಲದಿದ್ದರೆ ಇಲಾಖೆಯೇ ಹಣ ಪಾವತಿಸಲು ಸಿದ್ಧವಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.