ಕೋಲಾರ

ಫಲಾನುಭವಿಗಳಿಗೆ ವರದಾನ ನರೇಗಾ

Published On :

ಕೋಲಾರ: ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಮೀನುಗಳಲ್ಲಿ ಕಾಮಗಾರಿ ಕೈಗೊಳ್ಳುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿರುವುದು ವೈಯಕ್ತಿಕ ಫಲಾನುಭವಿಗಳಿಗೆ ವರದಾನವಾಗಿದೆ.
ನರೇಗಾ ಯೋಜನೆ 2006ರ ಫೆಬ್ರವರಿ 2 ರಿಂದ ದೇಶದಾದ್ಯಂತ ಜಾರಿಯಲ್ಲಿದೆ. ಯೋಜನೆ ಕೋಲಾರ ಜಿಲ್ಲೆಯಲ್ಲಿ ಜಾರಿಗೆ ಬಂದಿದ್ದು ಪ್ರಾರಂಭದ ವರ್ಷದಲ್ಲಿ ಅನುದಾನ ಖರ್ಚು ಆಗಿದ್ದು ಕಡಿಮೆ. ಎರಡನೇ ವರ್ಷದಲ್ಲಿ ಜಾಬ್ ಕಾರ್ಡುದಾರರ ಸಂಖ್ಯೆಯ ಜೊತೆಗೆ ಮಧ್ಯವರ್ತಿಗಳ ಕಾಟದಿಂದಾಗಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗಿತ್ತು.
ಬೋಗಸ್ ಜಾಬ್ ಕಾರ್ಡು: ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ ಕೆಲವರು ಬೋಗಸ್ ಜಾಬ್ ಕಾರ್ಡುಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ತಪ್ಪು ಲೆಕ್ಕ ನೀಡಿ ವಂಚಿಸಿದ್ದರು. ಇದಕ್ಕೆ ಗ್ರಾಪಂ ಅಧಿಕಾರಿಗಳ ಬೆಂಬಲ ಹಾಗೂ ರಾಜಕಾರಣಿಗಳ ಕುಮ್ಮಕ್ಕು ಇದ್ದುದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೂ ಹಣ ಸಿಗದಂತಾಗಿದೆ. 2009 ರಿಂದ 2012ರವರೆವಿಗೂ ಆಗಿರುವ ಲೋಪ ದೋಷಗಳನ್ನು ಗಮನಿಸಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಿರಿಯ ಐಎಎಸ್ ಅಧಿಕಾರಿ ವಿಜಯಭಾಸ್ಕರ್ ಅವರು ನಿರ್ದೇಶಕರಾಗಿ ನೇಮಕಗೊಂಡ ನಂತರ ಕೋಲಾರ ಸೇರಿದಂತೆ ಸಾಧನೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳಿಗೆ ಕಾಯಕಲ್ಪ ನೀಡಲು ಮುತುವರ್ಜಿ ವಹಿಸಿದೆ.
ಕಳಪೆ ಸಾಧನೆ: ನರೇಗಾ ಯೋಜನೆಯಲ್ಲಿ ಆಗಿರುವ ಲೋಪ ದೋಷ ಹಾಗೂ ಕಳಪೆ ಸಾಧನೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಪ್ರಸ್ತುತ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಕೈಗೊಳ್ಳುವ ಕೆಲಸಗಳನ್ನು ವೈಯಕ್ತಿಕ ಫಲಾನುಭವಿಗಳಿಗೆ ವಹಿಸುವುದಕ್ಕೆ ನಿರ್ಧರಿಸಿರುವುದರಿಂದ ಮುಂದಿನ ದಿನಗಳಲ್ಲಿ ಗುರಿ ಸಾಧನೆ ಮಾಡುವ ಆಶಾ ಭಾವನೆ ಮೂಡಿದೆ.
20 ಸಾವಿರ ಫಲಾನುಭವಿಗಳ ಗುರಿ: 2013-14ನೇ ಸಾಲಿನ ರಾಜ್ಯ ಆಯವ್ಯಯ ಭಾಷಣದಲ್ಲಿ ಆರ್ಥಿಕ ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 75 ಸಾವಿರ ಫಲಾನುಭವಿಗಳಿಗೆ ತಮ್ಮ ಸ್ವಂತ ಹೊಗಳಲ್ಲಿ ನರೇಗಾ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ನೀರಾವರಿ ಸೌಲಭ್ಯ: ಈ ಯೋಜನೆ 2013ರ ಆಗಸ್ಟ್ 6ರಂದೇ ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಆದರೆ, ಹಳೆ ಬಿಲ್ಲುಗಳ ಬಾಕಿ,ಯೋಜನೆಯ ಬಗ್ಗೆ ಇರುವ ಅಪನಂಬಿಕೆ ಹಾಗೂ ಅರಿವಿನ ಕೊರತೆಯಿಂದ ಜಿಲ್ಲೆಗೆ ನಿಗದಿಪಡಿಸಿರುವ ಗುರಿ ಸಾಧನೆ ಆಗಿಲ್ಲ. ರಾಜ್ಯ ಸರ್ಕಾರ ವೈಯಕ್ತಿಕ ಫಲಾನುಭವಿಗಳಿಗೆ ತಮ್ಮ ಜಮೀನುಗಳಲ್ಲಿ ನೀರಾವರಿ ಸೌಲಭ್ಯ, ತೋಟಗಾರಿಕೆ, ಗಿಡಗಳನ್ನು ನೆಡುವುದು, ನೆಡು ತೋಪು ಬೆಳೆಸುವುದು, ಬದು ನಿರ್ಮಾಣ, ಕೃಷಿ ಹೊಂಡ, ಭೂ ಅಭಿವೃದ್ಧಿ ಇತ್ಯಾದಿ ಕಾಮಗಾರಿಗಳನ್ನು ನರೇಗಾ ಯೋಜನೆಯ ಮಾರ್ಗಸೂಚಿಯಂತೆ ಹಾಗೂ ಇಲಾಖೆಗಳ ಕಾರ್ಯಕ್ರಮಗಳನ್ವಯ ಒಗ್ಗೂಡಿಸುವಿಕೆಯ ಮೂಲಕ ಕೆಲಸ ನಿರ್ವಹಿಸಲು ಅನುಮತಿಸಿರುವುದರಿಂದ ಯೋಜನೆ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಕೋಲಾರ ಜಿಲ್ಲೆಗೆ ವರದಾನವಾಗಿದ್ದು ಗ್ರಾಪಂ ಜನಪ್ರತಿನಿಧಿಗಳು ವಾರ್ಡುಸಭೆಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಾಮಗಾರಿ ವಹಿಸಿದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಾಯವಾಗುತ್ತದೆ.
ಕೋಲಾರ ಜಿಲ್ಲೆಗೆ 20 ಸಾವಿರ ವೈಯಕ್ತಿಕ ಫಲಾನುಭವಿಗಳ ಗುರಿ ನೀಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗಿಲ್ಲ. ಇದನ್ನು ಅರಿತ ಸರ್ಕಾರ ವೈಯಕ್ತಿಕ ಫಲಾನುಭವಿಗಳ ಮೇಳ ಆಯೋಜಿಸಿ ಅಲ್ಲಿ ಯೋಜನೆಯ ಬಗ್ಗೆ ಅರಿವು ಮಾಡಿಸುವ ಮೂಲಕ ಗುರಿ ಸಾಧನೆಗೆ ಮುಂದಾಗಿದೆ.
ಬಡವರಿಗೆ ವರದಾನ: ಕೋಲಾರ ಜಿಲ್ಲೆಯಲ್ಲಿ ಹೆಚ್ಚು ಪರಿಶಿಷ್ಟ ಜಾತಿ, ಪ.ಪಂಗಡಕ್ಕೆ ಸೇರಿದವರು ಇರುವುದರಿಂದ ಈ ವರ್ಗವನ್ನು ಗುರಿಯಾಗಿಟ್ಟುಕೊಂಡು ಕಾಮಗಾರಿ ವಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ, ಭೂ ಸುಧಾರಣೆ, ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳಿಗೆ,ಸಣ್ಣ ಮತ್ತು ಅತಿ ಸಣ್ಣ ರೈತರು, ಅನುಸೂಚಿ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ನರೇಗಾ ಯೋಜನೆಯಡಿ ಕೆಲಸ ನೀಡುವ ಮೂಲಕ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ಸರ್ಕಾರ ಗಮನ ಹರಿಸಿರುವುದರಿಂದ ಗ್ರಾಪಂಗಳ ಸದಸ್ಯರು ಹಾಗೂ ಪಿಡಿಒಗಳು ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ 100 ದಿನಗಳ ಕೆಲಸಕ್ಕೆ ಪ್ರತಿದಿನ 174 ರು. ಕೂಲಿ ಸಿಗುತ್ತದೆಯಲ್ಲದೆ, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 11 ಸಾವಿರ, ಕೋಳಿ ಸಾಕಾಣೆಗೆ 40 ಸಾವಿರ, ಒಕ್ಕನೆ ಕಣ ನಿರ್ಮಾಣಕ್ಕೆ 31 ಸಾವಿರ, ಮೇಕೆ ಕೊಟ್ಟಿಗೆಗೆ 30 ಸಾವಿರ ಹಾಗೂ ಜಾನುವಾರು ಕೊಟ್ಟಿಗೆಗೆ 35 ಸಾವಿರ ರು. ಸಿಗುವುದರಿಂದ ಗ್ರಾಮೀಣ ಪ್ರದೇಶದ ಜನತೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ನರೇಗಾ ಭದ್ರ ಬುನಾದಿ ಆಗುವುದರಲ್ಲಿ ಅನುಮಾನವಿಲ್ಲ.
ಜಾಬ್ ಕಾರ್ಡು ಹೊಂದಿದ ಕುಟುಂಬಗಳು ಉದ್ಯೋಗದ ಬೇಡಿಕೆ ಸಲ್ಲಿಸಿದ 15 ದಿನಗಳ ಒಳಗೆ ಕೆಲಸ ಕೊಡಲೇಬೇಕು, ಇಲ್ಲದಿದ್ದರೆ ನಿಯಮದ ಪ್ರಕಾರ ನಿರುದ್ಯೋಗ ಭತ್ಯೆಯನ್ನು ಪಡೆಯುವ ಅವಕಾಶವಿದೆ. ಆದರೆ ಕೆಲಸ ಹಂಚಿಕೆ ಮಾಡಿ,ಕೆಲಸಕ್ಕೆ ಹಾಜರಾಗದಿದ್ದಲ್ಲಿ ಅಂತಹವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದಿಲ್ಲ.
ಸಮಸ್ಯೆ ನಿವಾರಣೆಗೆ ಒಂಬುಡ್ಸ್‌ಮನ್: ಕೆಲಸ ಮಾಡುವ ಜಾಗದಲ್ಲಿ ಕುಡಿಯುವ ನೀರು, ವಿಶ್ರಾಂತಿಗಾಗಿ ನೆರಳು, ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಮತ್ತು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ 5ಕ್ಕಿಂತ ಹೆಚ್ಚಿನ ಮಕ್ಕಳು ಕಾರ್ಮಿಕರೊಂದಿಗೆ ಬಂದಲ್ಲಿ ಅವರನ್ನು ನೋಡಿಕೊಳ್ಳಲು ದಿನದ ಕನಿಷ್ಠ ಕೂಲಿ ಆಧಾರದಲ್ಲಿ ಒಬ್ಬ ಮಹಿಳೆಯನ್ನು ನೇಮಿಸಿಕೊಳ್ಳಲು ಅವಕಾಶವಿದೆ.
ಕೆಲಸದ ವೇಳೆಯಲ್ಲಿ ಅಪಘಾತ ಸಂಭವಿಸಿದಲ್ಲಿ ಚಿಕಿತ್ಸೆ ಪಡೆಯಲು ಅಗತ್ಯ ಖರ್ಚು ಭರಿಸಲು ಅಥವಾ ಮರಣ ಹೊಂದಿದಲ್ಲಿ 25 ಸಾವಿರ ರು. ಪರಿಹಾರ ನೀಡಲು ಗ್ರಾಪಂಗಳಿಗೆ ಅಧಿಕಾರ ನೀಡಲಾಗಿದೆ.
ನರೇಗಾ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಏನಾದರೂ ಸಮಸ್ಯೆ, ಕುಂದು-ಕೊರತೆ ಎದುರಾದಲ್ಲಿ ಸರ್ಕಾರವೇ ನಿಯೋಜಿಸಿರುವ ಒಂಬುಡ್ಸ್‌ಮನ್‌ಗಳಿಗೆ ದೂರು ನೀಡಿ ಅನ್ಯಾಯ ಸರಿಪಡಿಸಿಕೊಳ್ಳುವುದಕ್ಕೆ ಅವಕಾಶವಿರುವುದರಿಂದ ವೈಯಕ್ತಿಕ ಫಲಾನುಭವಿಗಳು ಜಮೀನುಗಳಲ್ಲಿ ಕಾಮಗಾರಿ ಕೈಗೊಂಡು ಜಿಲ್ಲೆಯ ಬಹುತೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಳ್ಳುವ ಅವಕಾಶವಿರುವುದರಿಂದ ಗ್ರಾಪಂ ಸದಸ್ಯರು ಯೋಜನೆ ಪಾರದರ್ಶಕವಾಗಿ ಕಾರ್ಯರೂಪಕ್ಕೆ ತರಲು ಬದ್ಧತೆ ಪ್ರದರ್ಶಿಸಿದರೆ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಶಯ ಈಡೇರುತ್ತದೆ.


-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.