ಮಹಿಳೆಯರ ಸುರಕ್ಷತೆಗೆ ಎಬಿವಿಪಿ ಜನಜಾಗೃತಿ ಅಭಿಯಾನ
ಕ.ಪ್ರ.ವಾರ್ತೆ , ಕೋಲಾರ , ಅ.24
ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರಗಳನ್ನು ತಡೆಗಟ್ಟಲು ಕಠಿಣವಾದ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿ ಹಾಗೂ ಜನತೆಯಲ್ಲಿ ಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ಮಹಿಳಾ ಸುರಕ್ಷಾ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮಹಿಳೆಯರಿಗೆ ಸುರಕ್ಷತೆ ಒದಗಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಎಬಿವಿಪಿ ರಾಜ್ಯ ಸಮಿತಿಯ ಕರೆಯ ಮೇರೆಗೆ ನಡೆದ ಅಭಿಯಾನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ವಿದ್ಯಾರ್ಥಿನಿಯರ-ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದು, ಜನಸಾಮಾನ್ಯರಲ್ಲಿ ಅಸುರಕ್ಷತೆಯ ಜೊತೆಗೆ ಆಕ್ರೋಶದ ಮನೋಭಾವನೆ ಬಂದಿದೆ ಎಂದು ಘೋಷಣೆಗಳ ಮೂಲಕ ಜನರ ಗಮನ ಸೆಳೆದರು.
ಮಹಿಳೆಯರ ಮೇಲೆ ಅದರಲ್ಲೂ ವಿದ್ಯಾರ್ಥಿನಿಯರನ್ನು ಗುರಿಯಾಗಿಟ್ಟುಕೊಂಡು ದೌರ್ಜನ್ಯ, ಆಸಿಡ್ ದಾಳಿ, ಲೈಂಗಿಕ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಕೊಲೆ ಇವುಗಳು ಹೆಚ್ಚುತ್ತಿದ್ದು ಈ ಬಗ್ಗೆ ಸರಿಯಾದ ಕಠಿಣ ಕಾನೂನನ್ನು ಜಾರಿಗೆ ತರದೆ ಇರುವುದರಿಂದ ಇಂತಹ ಘಟನೆಗಳು ಪದೇ ಪದೇ ದೇಶದಲ್ಲಿ ನಡೆಯುತ್ತಿವೆ ಎಂದು ಆರೋಪಿಸಿದರು.
ಈ ಕೂಡಲೇ ಕೇಂದ್ರ ಸರಕಾರ ಮಹಿಳಾ ಸುರಕ್ಷತೆಗೆ ಬಲವಾದ ಹಾಗೂ ಸಮಗ್ರವಾದ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು: ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಶೋಷಣೆ, ಆಸಿಡ್ ದಾಳಿ, ಅತ್ಯಾಚಾರದಂತಹ ಪ್ರಕರಣಗಳ ವಿಚಾರಣೆಯನ್ನು ತ್ವರಿತ ನ್ಯಾಯಾಲಯಗಳಿಗೆ ವಹಿಸಬೇಕು. ಅತ್ಯಾಚಾರವೆಸಗಿದ ಅಪರಾಧಿಗೆ ಕಠಿಣ ಶಿಕ್ಷೆ, ಜೀವಾವಧಿ ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸಬೇಕು, ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ತನಿಖೆಗಾಗಿ ಹೆಚ್ಚು ಅಧಿಕಾರವುಳ್ಳ ಸಂಸ್ಥೆಗಳನ್ನು ತನಿಖೆಗಾಗಿ ನೇಮಿಸಬೇಕು. ಆ ಸಂಸ್ಥೆಗೆ ದೂರುಗಳನ್ನು ದಾಖಲಿಸಿಕೊಳ್ಳುವ ಮೊಕದ್ದಮೆಯನ್ನು ನೀಡುವ, ಶಿಕ್ಷೆ ನೀಡುವ, ಕೌನ್ಸಿಲಿಂಗ್ಗಳನ್ನು ನಡೆಸುವ ಮತ್ತು ಮಹಿಳಾ ಪುನರ್ವಸತಿಗಳನ್ನು ಕಲ್ಪಿಸುವ ಪೂರ್ಣ ಅಧಿಕಾರ ಆ ಸಂಸ್ಥೆಗೆ ಇರಬೇಕೆಂದು ಆಗ್ರಹಿಸಿದರು.
ಎಲ್ಲ ಪೋಲಿಸ್ ಠಾಣೆಗಳಲ್ಲಿ ಮಹಿಳಾ ಪೊಲೀಸ್ಪೇದೆಗಳನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ, ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿಗಳನ್ನು ನೇಮಿಸಬೇಕು. ಮುದ್ರಣ ಮತ್ತು ವಿದ್ಯುನ್ಮಾನ ಉದ್ಯಮಗಳಲ್ಲಿ ಪ್ರಸಾರವಾಗುವ ಮಹಿಳೆಯರ ಅಸಹ್ಯ, ಅಸಭ್ಯ, ಅಶ್ಲೀಲ ಚಿತ್ರಗಳಿಗೆ ಕಡಿವಾಣ ಹಾಕಬೇಕೆಂದು ತಿಳಿಸಿದರು.
ಪರೀಕ್ಷೆಗಳಲ್ಲಿ ಆಂತರಿಕ ಮೌಲ್ಯಮಾಪನ, ಸಂಶೋದನಾ ವಿದ್ಯಾರ್ಥಿಗಳಿಗೆ ಯಾವುದೇ ಲೈಂಗಿಕ ದೌರ್ಜನ್ಯಗಳಾಗದಂತೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ದೂರುಪೆಟ್ಟಿಗೆಯನ್ನು ಇಡಬೇಕು ಮತ್ತು ಯಾವುದೇ ಮಹಿಳಾ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿರುವ ವಿದ್ಯಾರ್ಥಿನಿಯರಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಲು ಪ್ರತ್ಯೇಕವಾಗಿ ಮಹಿಳಾ ಶಿಕ್ಷಕಿಯರನ್ನು ನೇಮಿಸಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರು ಮನವಿ ಪತ್ರ ಮುಖೇನ ಒತ್ತಾಯಿಸಿದರು.
ವರದಕ್ಷಿಣೆಯ ಪಿಡುಗನ್ನು ಹತ್ತಿಕ್ಕಲು ಕಾನೂನಿನಲ್ಲಿ ಪರಿವರ್ತನೆಯನ್ನು ತರಬೇಕು ಮತ್ತು ವರದಕ್ಷಿಣೆ ಕೇಳುವವರ ವಿರುದ್ಧ ಕ್ರಮ ಜರುಗಿಸಬೇಕು. ವಿದ್ಯಾರ್ಥಿನಿಯರ ಸುರಕ್ಷತೆಗೆ ಮತ್ತು ಉನ್ನತ ವ್ಯಾಸಂಗಕ್ಕೆ ಸುವ್ಯವಸ್ಥಿತ ವಿದ್ಯಾರ್ಥಿನಿಯರ ಉಚಿತ ಹಾಸ್ಟೆಲ್ಗಳನ್ನು ತೆರೆಯಬೇಕೆಂದು ತಿಳಿಸಿದರು.
ಸೌಜನ್ಯಾ ಹತ್ಯೆ ಬಗ್ಗೆ ತನಿಖೆ ಆಗಲಿ: ಉಜಿರೆಯ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತದೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ವಿದ್ಯಾರ್ಥಿಪರಿಷತ್ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ಜಿಲ್ಲಾ ಸಂಚಾಲಕ ಸುನೀಲ್, ನಗರ ಕಾರ್ಯದರ್ಶಿ ಹರೀಶ್, ಶಿಲ್ಪ, ಪಲ್ಲವಿ, ಸರಿತ, ಶ್ವೇತ, ಅಶ್ವಿನಿ, ಮಂಜುಳ, ನೌನಿತ ಮತ್ತಿತರರು ಜನಜಾಗೃತಿಯ ಅಭಿಯಾನದ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

