ಕೋಲಾರ

ಸಂಬಂಧಿಕರಿಂದ ಪತಿ ಮನೆಗೆ ಕಲ್ಲು ತೂರಾಟ

Published On :

ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಬುಧವಾರ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದ ಇಲ್ಲಿನ ಪ್ರಶಾಂತ ನಗರದ ಶಶಿಕಲಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ವಿಷಯವನ್ನು ತಿಳಿದ ಮೃತಳ ಸಂಬಂಧಿಕರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು. ಆಕೆ ಪತಿಯ ಮನೆಯ ಮೇಲೆ ಗುರುವಾರ ಕಲ್ಲು ತೂರಾಟ ಸಹ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರಶಾಂತನಗರದ ನಿವಾಸಿ ರಾಜೇಶ್ ಅವರಿಗೆ ಗುಡಿಬಂಡೆ ತಾಲೂಕಿನ ರಾಮಚಂದ್ರಪ್ಪರವರ ಮಗಳು  ಶಶಿಕಲಾರವರನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಕೊಟ್ಟು ಅದ್ಧೂರಿಯಾಗಿ ವಿವಾಹ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೇಳಿದಷ್ಟು ವರದಕ್ಷಿಣೆ, ಮತ್ತು ಚಿನ್ನಾಭರಣಗಳನ್ನು ಸಹ ನೀಡಲಾಗಿತ್ತಲ್ಲದೇ ನಗರದಲ್ಲಿ ರಾಜೇಶ್‌ಗೆ ಹಾರ್ಡ್‌ವೇರ್ ಅಂಗಡಿ ನಡೆಸಲು 5 ಲಕ್ಷ ರು. ಆರ್ಥಿಕ ಸಹಾಯ ಮಾಡಲಾಗಿತ್ತು ಎನ್ನಲಾಗಿದೆ. ಇದರಿಂದ ಪ್ರಾರಂಭದಲ್ಲಿ ಸಂಸಾರ ಚೆನ್ನಾಗಿಯೇ ನಡೆದಿದ್ದು ದಂಪತಿಗೆ ಒಂದು ಗಂಡು ಮಗು ಇದೆ. ಈ ನಡುವೆ ಇನ್ನಷ್ಟು ಆರ್ಥಿಕ ಸಮಸ್ಯೆಗಳನ್ನು ಹೇಳಿಕೊಂಡು ಶಶಿಕಲಾಗೆ ಆಕೆಯ ಗಂಡ ರಾಜೇಶ್, ಅತ್ತೆ ಪದ್ಮಾವತಿ, ಮಾವ ವೆಂಕಟೇಶಪ್ಪ ತವರು ಮನೆಯಿಂದ ಇನ್ನೂ ಹೆಚ್ಚಿನ ಹಣವನ್ನು ತರುವಂತೆ ಪೀಡಿಸುವುದನ್ನು ಶುರುವಿಟ್ಟುಕೊಂಡು ಪ್ರತಿದಿನ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು.
 ಇದನ್ನು ಸಹಿಸಲಾಗದೇ ಶಶಿಕಲಾ ತನ್ನ ತವರು ಮನೆಗೆ ಹೋಗಿ ಆಗಾಗ ಉಳಿದುಕೊಂಡಿದ್ದು ಸಂಸಾರದ ಗಲಾಟೆ ದೊಡ್ಡದಾಗಿ ಹಿರಿಯರ ಮುಂದೆ ಪಂಚಾಯಿತಿ ನಡೆಸುವ ಮಟ್ಟಿಗೆ ಹೋಗಿತ್ತು. ಆಗ ಹಿರಿಯರು ಸಮಾಧಾನಪಡಿಸಿ ಆಕೆಯನ್ನು ಮತ್ತೆ ಗಂಡನ ಮನೆಗೆ ಕಳುಹಿಸಿದ್ದರು. ಇಷ್ಟಾದರೂ ವರದಕ್ಷಿಣೆಗಾಗಿ ಪ್ರತಿನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದನ್ನು ಮುಂದುವರೆಸಿದ್ದರಿಂದ ಬೇಸತ್ತ ಶಶಿಕಲಾ ಬುಧವಾರ ತಮ್ಮ ಮನೆಯಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದು ಸುಡುತ್ತಿದ್ದ ಬೆಂಕಿಯ ನೋವನ್ನು ತಾಳಲಾರದೇ ಕಿರುಚಿಕೊಳ್ಳುತ್ತಿದ್ದಂತೆ ಸ್ಥಳೀಯರು ತಕ್ಷಣ ಬೆಂಕಿಯನ್ನು ನಂದಿಸಿ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆಕೆಯನ್ನು ಸಾಗಿಸಲಾಗಿತ್ತು. ಆದರೆ, ಶಶಿಕಲಾ ತೀವ್ರ ಸುಟ್ಟುಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಸಂಬಂಧಿಕರ ಆಕ್ರೋಶ: ಶಶಿಕಲಾ ಮೃತಪಟ್ಟ ವಿಷಯವನ್ನು ತಿಳಿಯುತ್ತಿದ್ದಂತೆ ಆಕೆಯ ಸಂಬಂಧಿಕರು ರಾಜೇಶ್ ಅವರ ಮನೆಯ ಮುಂದೆ ಜಮಾಯಿಸಿ ಕಲ್ಲು ತೂರಾಟ ನಡೆಸಿ ಮನೆಯ ಕಿಟಕಿ ಗಾಜು ಪುಡಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಮೃತಳ ಶವ ಸಂಸ್ಕಾರವನ್ನು ಆ ಮನೆಯ ಮುಂದೆ ನೆರವೇರಿಸುವುದಾಗಿ ಪಟ್ಟು ಹಿಡಿದರು.
ಕೇಳಿದಷ್ಟು ವರದಕ್ಷಿಣೆ ನೀಡಲಾಗಿದೆಯಾದರೂ ಹಣದ ದಾಹದಿಂದ ಶಶಿಕಲಾಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಕೊನೆಗೆ ರಾಜೇಶ್, ಅತ್ತೆ ಪದ್ಮಾವತಿ, ಮಾವ ವೆಂಕಟೇಶಪ್ಪ ಬಲವಂತವಾಗಿ ಆಕೆಯ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಇದೀಗ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದಾರೆ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ತಕ್ಕ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳುವುದರ ಜತೆಗೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಈಗಾಗಲೇ ತನಿಖೆ ಕಾರ್ಯವನ್ನು ಪ್ರಾರಂಭಿಸಿದ್ದು ತಲೆ ಮರೆಸಿಕೊಂಡಿರುವ ತಪ್ಪಿತಸ್ಥರನ್ನು ತ್ವರಿತವಾಗಿ ಬಂಧಿಸಿ ತಕ್ಕ ಶಿಕ್ಷೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಡಿವೈಎಸ್ಪಿ ದೇವಯ್ಯ, ಸರ್ಕಲ್ ಇನ್ಸೆಪೆಕ್ಟರ್ ಬಾಲಾಜಿ ಸಿಂಗ್ ಮತ್ತು ನಗರ ಠಾಣೆಯ ಪಿಎಸ್‌ಐ ಶಿವಸ್ವಾಮಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.