ಕೋಲಾರ

ಅಂತರ್ಜಲ ರಕ್ಷಣೆ ಎಲ್ಲರ ಜವಾಬ್ದಾರಿ

Published On :

ಕ.ಪ್ರ.ವಾರ್ತೆ , ಕೋಲಾರ , ಅ.27
ನೀರು ಎಲ್ಲಿ ಹರಿಯುವುದೋ, ಅಲ್ಲಿ ನಾಗರಿಕತೆ ಅರಳುತ್ತದೆ, ಅಂತರ್ಜಲ ಅಮೂಲ್ಯ ಅದನ್ನು ಮಿತವಾಗಿ ಬಳಸಿದರೆ ಬಾಳು ಬಂಗಾರ, ಹನಿ ಹನಿ ಗೂಡಿದರೆ ಹಳ್ಳ. ಹನಿ ಹನಿ ಇಂಗಿದರೆ ಅದುವೇ ಅಂತರ್ಜಲ.
ಇದು ಕೇವಲ ನಾಣ್ಮುಡಿಯಲ್ಲ, ಜೀವ ಕೋಟಿಗೆ ನೀರು ಅನಿವಾರ್ಯ, ನೀರಿಗೆ ಮಳೆಯೇ ಆಧಾರ, ಅಂತರ್ಜಲದಿಂದಲೇ ಜೀವ ಕುಲದ ಉದ್ಧಾರವೆಂಬುದನ್ನು ಪ್ರಮಾಣಿಕರಿಸುವ ಪ್ರಯತ್ನ.
ನೀರು ಯಾವುದೇ ಒಂದು ಚಟುವಟಿಕೆಗೂ ಅತ್ಯಗತ್ಯವಾದ ಸಂಪನ್ಮೂಲ. ಇಂದಿನ ಜಲಕ್ಷಾಮಕ್ಕೆ ಅಂತರ್ಜಲದ ಪೂರೈಕೆ ಹಾಗೂ ಬೇಡಿಕೆಗೆ ಇರುವ ಅಗಾಧವಾದ ಅಸಮತೋಲನವೇ ಪ್ರಮುಖ ಕಾರಣವಾಗಿದೆ. ಭೂಮಿಯ ಮೇಲೆ ಬೀಳುವ ಮಳೆ ನೀರು ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಸೇರುವುದನ್ನು ತಪ್ಪಿಸಿ ನೆಲದಾಳಕ್ಕೆ ಇಂಗುವಂತೆ ಮಾಡದಿದ್ದರೆ ಜನ-ಜಾನುವಾರುಗಳು ನಾಶವಾಗುವ ಮೂಲಕ ನಾಗರಿಕತೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.
ಜೀವನಕ್ಕೆ ಅಗತ್ಯವಾಗಿ ಬೇಕಾದ ನೀರು, ಗಾಳಿ ಎಲ್ಲರಿಗೂ, ಎಲ್ಲಾ ಕಾಲಕ್ಕೂ ಸುಲಭವಾಗಿ ದೊರೆಯುವಂತಾಗಬೇಕು. ಇದು ಪ್ರಕೃತಿಯ ನಿಯಮವೂ ಹೌದು. ಆದರೆ ಮಾನವ ಕೇವಲ ಹಕ್ಕುಗಳಿಗೆ ಹೋರಾಡಿ, ಕರ್ತವ್ಯ ಮರೆಯುತ್ತಿರುವುದರಿಂದ ನೀರಿನ ಸಮಸ್ಯೆ ಗಂಭೀರ ಘಟ್ಟ ತಲುಪುವಂತಾಗಿದೆ. ಇದು ಹೀಗೇಯೇ ಮುಂದುವರೆದರೆ ಜಲಕ್ಷಾಮದಿಂದ ಜೀವ ಕುಲಗಳು ನಾಶವಾಗುವುದರಲ್ಲಿ ಅನುಮಾನವಿಲ್ಲ.
ಓಡುವ ನೀರನ್ನು ನಡೆಯುವಂತೆ ಮಾಡಿ, ನಡೆಯುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಇಂಗುವಂತೆ ಮಾಡಿದಲ್ಲಿ ಮಾತ್ರ ಅಂತರ್ಜಲ ಸಂರಕ್ಷಣೆ ಸಾಧ್ಯವಾಗುತ್ತದೆ. ಆದರೆ ಕೆಲ ಸ್ವಾರ್ಥಿಗಳು ಅಂತರ್ಜಲವನ್ನು ಸಂರಕ್ಷಣೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಕೆರೆ, ಕಾಲುವೆ, ಕಲ್ಯಾಣಿಗಳನ್ನು ಒತ್ತುವರಿ ಮಾಡಿ ಕಾಂಕ್ರಿಟ್‌ಕಾಡಾಗಿ ಮಾರ್ಪಟಿಸಿರುವುದರಿಂದ ನೀರು ಅತ್ಯಂತ ಬೇಡಿಕೆಯ ವಸ್ತುವಾಗಿದೆ.
ಅಂತರ್ಜಲ ಸಂರಕ್ಷಣೆ ಆಗದಿರುವುದರಿಂದ ಹಾಗೂ ಅಭಿವೃದ್ಧಿಗೆ ಕೆಲವರು ಅಡ್ಡಗಾಲು ಹಾಕಿರುವುದರಿಂದ ಜನತೆಗೆ ಶುದ್ಧವಾದ ನೀರು ಸಿಗದೆ ಅನಾರೋಗ್ಯದಿಂದ ಬಳಲುವಂತಾಗಿದೆ.
ಭೂಮಿಯ ಮೇಲೆ ಹರಿಯುವ ನೀರಿಗೂ, ಭೂಮಿಯ ಒಳಗಿರುವ ಅಂತರ್ಜಲಕ್ಕೂ ಮಳೆಯೇ ಆಧಾರ, ಮಳೆ ಬಂದಾಗ ಬಹುಪಾಲು ನೀರು ನಿಲ್ಲದೇ ಹರಿದು ವ್ಯರ್ಥವಾಗುತ್ತಿದೆ. ಇದಕ್ಕೆ ಕೆರೆ, ಕಟ್ಟೆಗಳ ಒತ್ತುವರಿ, ನೀರು ಹರಿಯುವ ರಾಜ ಕಾಲುವೆಗಳನ್ನು ಮುಚ್ಚಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದೇ ಕಾರಣವಾಗಿದೆ.
ಅಂತರ್ಜಲ ಕುಸಿಯಲು ಮಾನವನಲ್ಲಿನ ದುರಾಸೆಯ ಜೊತೆಗೆ ಒಂದು ಪ್ರದೇಶದಲ್ಲಿನ ಅರಣ್ಯ ಭೂಮಿ ನಾಶವಾಗಿ ಭೂಮಿ ಬಂಜರಾದಾಗ, ಸಸ್ಯಗಳಿಲ್ಲದೆ ಮೇಲ್ಮಣ್ಣು ಕೊಚ್ಚಿ ಹೋಗಿ ಅಂತರ್ಜಲ ಮರುಪೂರ್ಣ ಕಡಿಮೆಯಾಗಿರುವುದು ಹಾಗೂ ಅನೇಕ ವರ್ಷಗಳ ಕಾಲ ಮಲೆ ಬೀಳದೆ ಅಂತರ್ಜಲ ಕುಸಿದಿರುವುದು ಕಾರಣ.
ತೀವ್ರಗೊಂಡ ಕೃಷಿ ಚಟುವಟಿಕೆಗಳು ಮತ್ತು ವಿಸ್ತಾರಗೊಂಡ ನೀರಾವರಿ ಪ್ರದೇಶ, ವರ್ಷ ಪೂರ್ತಿ ನೀರಾವರಿ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯಲು ಪ್ರಯತ್ನಿಸುತ್ತಿರುವುದು, ಅವೈಜ್ಞಾನಿಕ ಕೃಷಿ ಪದ್ಧತಿ, ಒಂದೇ ಜಮೀನಿನಲ್ಲಿ ಹಲವಾರು ಕೊಳವೆ ಬಾವಿ ಕೊರೆಸುವುದು, ಪೈಪೋಟಿಯಿಂದ ಒಂದೇ ಪ್ರದೇಶಗಳಲ್ಲಿ ಹೆಚ್ಚು ಕೊಳವೆ ಬಾವಿಗಳನ್ನು ಅಳದಲ್ಲಿ ಕೊರೆಸುವುದು ಹಾಗೂ ಅಗತ್ಯಕ್ಕಿಂತ ಹೆಚ್ಚು ನೀರನ್ನು ಕೃಷಿಗೆ ಬಳಸುವುದಲ್ಲದೆ ಹಣದಾಸೆಯಿಂದ ನೀರನ್ನು ಸಂಗ್ರಹಿಸಿ ಟ್ಯಾಂಕರ್‌ಗಳ ಮೂಲಕ ಮಾರಾಟ ಮಾಡುತ್ತಿರುವುದರಿಂದ ಅಂತರ್ಜಲ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ.
ಅಂತರ್ಜಲ ಬಳಕೆ ಎಷ್ಟು ಮುಖ್ಯವೋ ಅದೇ ರೀತಿ ಸಂರಕ್ಷಣೆ ಮತ್ತು ಅಬಿವೃದ್ಧಿಯು ಅಷ್ಟೇ ಮುಖ್ಯ. ಮಳೆ ಕಾಲ ಕಾಲಕ್ಕೆ ಸರಿಯಾಗಿ ಅಗದೆ ಏರುಪೇರು ಉಂಟಾಗಿದೆ.
 ಇದರಿಂದ ಅಸಮತೋಲನ ಹೆಚ್ಚುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಕೃತಕ ಮರುಪೂರಣ ಕಾರ್ಯಕ್ರಮಗಳು ಮುಖ್ಯ, ಚೆಕ್ ಡ್ಯಾಮ್, ಸೋಸು ಕೆರೆ, ಇಂಗು ಬಾವಿಗಳ ರಚನೆ ಮಾಡುವುದು ಸರ್ಕಾರ ಮತ್ತು ಜನತೆಯ ಕರ್ತವ್ಯವೂ ಆಗಿದೆ.
ಕೆರೆಗಳಲ್ಲಿ ಹೂಳು ತೆಗೆಯಬೇಕು. ಕೆರೆ, ಚೆಕ್ ಡ್ಯಾಮ್‌ಗಳಿಗೆ ಹೂಳು ಬರದಂತೆ ಆಯಕಟ್ಟು ಪ್ರದೇಶಗಳಲ್ಲಿ ಭೂಸವಕಳಿ ತಡೆ ನಿರ್ಮಿಸಬೇಕು. ಕೊಳವೆ ಬಾವಿ ದುರಸ್ತಿ ಕಾರ್ಯವನ್ನು ತಜ್ಞರ ಸಲಹೆಯಂತೆ ಕೈಗೊಳ್ಳಬೇಕು. ತುಂತರು ಹನಿ ನೀರಾವರಿ ಪದ್ಧತಿ ಆಳವಡಿಸಿದರೆ ನೀರು ಪೋಲಾಗುವುದನ್ನು ತಡೆಯಬಹುದು.
ಎಲ್ಲದಕ್ಕಿಂತ ಮುಖ್ಯವಾಗಿ ಕೆರೆ, ಕಾಲುವೆಗಳನ್ನು ಸಂರಕ್ಷಣೆ ಮಾಡುವ ಮೂಲಕ ಮಳೆ ನೀರು ನೆಲದಾಳದಲ್ಲಿ ಇಂಗುವಂತೆ ಮಾಡಲು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸದಿದ್ದರೆ ಅಂತರ್ಜಲ ಬತ್ತಿ ಭೂಮಿ ಬರಡಾಗುವುದರಿಂದ ಜೀವ ಕುಲ ನಶಿಸುವುದರಲ್ಲಿ ಅನುಮಾನವಿಲ್ಲ.
ಅಂತರ್ಜಲ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಅ.28 ರಂದು ಕೋಲಾರದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಜಿಲ್ಲಾ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿರುವ ವಿಚಾರ ಸಂಕಿರಣ ಜನತೆಯಲ್ಲಿ ಕೊಂಚ ಮಟ್ಟಿಗೆ ಅರಿವು ಮೂಡಿಸುವಂತಾಗಲಿ ಎಂಬುದು ಎಲ್ಲರ ಆಶಯ.


-ಪಾ.ಶ್ರೀ. ಅನಂತರಾಮ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.