ಅಂತರ್ಜಲ ಲೂಟಿ ತಪ್ಪಿಸದಿದ್ದರೆ ಅಪಾಯ
ಕ.ಪ್ರ.ವಾರ್ತೆ ಕೋಲಾರ ಅ. 28
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂತರ್ಜಲ ಲೂಟಿ ಆಗುತ್ತಿರುವುದರಿಂದ ಜನ ಮತ್ತು ಜಾನುವಾರುಗಳ ಜೀವಕ್ಕೆ ಕುತ್ತುಂಟಾಗಿದೆ ಎಂದು ಕನ್ನಡಪ್ರಭ ಮುಖ್ಯ ವರದಿಗಾರ ಕೆ.ವಿ. ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಅಂತರ್ಜಲ ವಿಚಾರ ಸಂಕಿರಣ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಅಂತರ್ಜಲ ಸಂರಕ್ಷಣೆ ಅಭಿವೃದ್ಧಿ ಬಗ್ಗೆ ಮಾಧ್ಯಮಗಳ ಪಾತ್ರ ಕುರಿತು ಮಾತನಾಡಿದ ಅವರು, ಸಕಲ ಜೀವ ರಾಶಿಗಳ ಸಂರಕ್ಷಣೆಗಾಗಿ ಅಂತರ್ಜಲ ಸಂರಕ್ಷಣೆ ಅತಿ ಮುಖ್ಯವಾಗಿದೆ ಎಂದರು. ನೀರು ಎಂಬ ಪದ ಕೇಳಲು ಕಿವಿಗೆ ಹಿತವಾಗಿದೆ. ಆದರೆ, ಜನತೆಯ ನಿರ್ಲಕ್ಷ್ಯ, ದುರಾಸೆ ಹಾಗೂ ಸರ್ಕಾರಗಳ ನೀತಿಯಿಂದಾಗಿ ನೀರು ಸಮಸ್ಯೆಯಾಗಿ ಕಾಡುತ್ತಿದೆ ಎಂದು ವಿಷಾಧಿಸಿದರು.
ಅಂತರ್ಜಲ ಸಮಸ್ಯೆ: ಪ್ರತಿಯೊಬ್ಬರು ನೀರಾವರಿ ಯೋಜನೆಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಅಂತರ್ಜಲ ಸಂರಕ್ಷಣೆಯಾದಲ್ಲಿ ಮಾತ್ರ ನೀರಾವರಿ ಯೋಜನೆ ಜಾರಿಗೆ ತರಲು ಸಾದ್ಯವೆಂಬುದನ್ನು ಅರಿತುಕೊಳ್ಳುತ್ತಿಲ್ಲ. ಪ್ರಸ್ತುತ ಅಂತರ್ಜಲ ಸಮಸ್ಯೆ ಉಲ್ಬಣಕ್ಕೆ ಜನತೆಯ ಅಸಹಕಾರದ ಜೊತೆಗೆ ರಾಜಕಾರಣಿಗಳ ದ್ವಂದ್ವ ನಿಲುವುಗಳಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುವಂತಾಗಿದೆ ಎಂದರು.
ಒತ್ತುವರಿ: ಅಂತರ್ಜಲದ ಮಹತ್ವದ ಬಗ್ಗೆ ಅನೇಕರಲ್ಲಿ ಅರಿವು ಮೂಡಿಲ್ಲ. ಕೆರೆಗಳ ಮತ್ತು ಪೋಷಕ ಕಾಲುವೆಗಳ ಮೂಲ ಸ್ವರೂಪನ್ನು ಒತ್ತುವರಿ ಮಾಡಿಲಾಗಿದೆ. ನೀರು ನಮ್ಮ ಕಡೆ ನುಗ್ಗುತ್ತಿಲ್ಲ. ಬದಲಾಗಿ ನೀರು ಇರುವ ಕಡೆಯೇ ನಾವು ನುಗ್ಗುತ್ತಿರುವುದರಿಂದ ಅಮೂಲ್ಯವಾದ ನೀರು ಬಳಕೆಗೆ ಸಿಗದೆ ವ್ಯರ್ಥವಾಗುತ್ತಿದೆ ಎಂದು ಹೇಳಿದರು.
ಅಂತರ್ಜಲ ಸಂರಕ್ಷಣೆಗೆ ಸಾಮಾಜಿಕ ಕಳಕಳಿ ಮುಖ್ಯವಾಗಿದ್ದು ಜನತೆಯಲ್ಲಿ ಹೆಚ್ಚಿನ ಅರಿವು ಮೂಡಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಕುರಿತು ಶಾಸಕ ವರ್ತೂರ್ ಪ್ರಕಾಶ್ ಹಗುರವಾಗಿ ಮಾತನಾಡಿದ್ದನ್ನು ಪ್ರಭಾಕರ್ ಖಂಡಿಸಿ, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಸಾರ್ವಜನಿಕ ವೇದಿಕೆಗಳಲ್ಲಿ ಹೇಗೆ ಮಾತನಾಡಬೇಕೆಂಬುದನ್ನು ಕಲಿಯಬೇಕೆಂದರು. ಪತ್ರಕರ್ತ ಮಂಜುನಾಥ ಅದ್ದೆ, ರಾಜಕೀಯ ನಿಲುವುಗಳ ವ್ಯತ್ಯಾಸದಿಂದ ಅಂತರ್ಜಲ ಸಂರಕ್ಷಣೆಗೆ ಅಡ್ಡಿಯಾಗುತ್ತಿದೆ ಎಂದು ದೂರಿದರು.
ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಕೆಜಿಎಫ್ ಚಿನ್ನದಗಣಿ ನೀರನ್ನು ಕೆರೆಗಳಿಗೆ ಹರಿಸಬೇಕೆಂದು ನೀಡಿದ ಸಲಹೆಗೆ ಸಿಡಿಮಿಡಿಗೊಂಡು. ಶಾಸಕರ ಮನವಿ ಪಾಲನೆಯಾದರೆ ಸಾವಿರಾರು ಕೆರೆ ಭೂಮಿ ವಿಷಕಾರಿ ಆಗುವುದರಲ್ಲಿ ಅನುಮಾನವಿಲ್ಲವೆಂದರು. ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಕಾರ್ಯದರ್ಶಿ ಎಸ್. ಶಂಕರಪ್ಪ ಮತ್ತಿತರರು ಇದ್ದರು. ಸದಸ್ಯ ಚನ್ನಬಸವಣ್ಣ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

