ಅನರ್ಹರಿಗೆ ಸಂಮಾನ, ಅರ್ಹರಿಗೆ ಅವಮಾನ
ಚಿಕ್ಕಬಳ್ಳಾಪುರ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಲುವಾಗಿ ಕನ್ನಡನಾಡು ನುಡಿ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಿಲ್ಲಾಡಳಿತದ ವತಿಯಿಂದ ಚುರುಕಾಗಿ ನಡೆಯುತ್ತಿದ್ದು ಈ ನಡುವೆ ಪ್ರಭಾವಿಗಳ ಒತ್ತಡಕ್ಕೆ, ಶಿಫಾರಸ್ಸಿಗೆ ಮಣೆ ಹಾಕಿ ಅನರ್ಹರಿಗೆ ಪ್ರಶಸ್ತಿ ನೀಡುವುದಕ್ಕೆ ಅವಕಾಶ ನೀಡಬಾರದೆಂಬ ಒತ್ತಾಯ ಕೇಳಿ ಬಂದಿದೆ.
ಜಿಲ್ಲಾಡಳಿತದ ವತಿಯಿಂದ ಆಚರಣೆ ಮಾಡುವ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಸೇರಿದಂತೆ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿ ವರ್ಷ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಸಾಮಾನ್ಯವಾಗಿ ಅರ್ಹರಿಂದ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗುತ್ತದೆಯಾದರೂ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಮಿತಿ ಸದಸ್ಯರು ಕೊನೆಗೆ ತಮಗೆ ಬೇಕಾದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವಂತಹುದು ನಡೆದು ಹಲವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಶಿಫಾರಸ್ಸು,ಪ್ರಭಾವಿಗಳಿಂದ ಒತ್ತಡ ಹಾಕಿಸಿದರೆ ಸಾಕು ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳಬಹುದೆಂಬ ಆರೋಪಗಳು ಹೆಚ್ಚಾಗಿ ಸ್ಪೋಟಗೊಳ್ಳುತ್ತದೆ. ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಆಯ್ಕೆ ಸಮಿತಿ ಸ್ವಜನಪಕ್ಷಪಾತವಾಗಿ ನಡೆದುಕೊಂಡು ಸಾಕಷ್ಟು ಬಾರಿ ಏನೂ ಸಾಧನೆ ಮಾಡದಿದ್ದ ಅನರ್ಹರನ್ನು ಗುರುತಿಸಿ ಆತ್ಮೀಯವಾಗಿ ಸನ್ಮಾನಿಸಿರುವಂತಹುದೂ ನಡೆದಿದೆ.
ಹಿಂದೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರ ಪ್ರಭಾವ ಕೆಲಸ ಮಾಡಿತ್ತು. ಅರ್ಹರನ್ನು ಬದಿಗೊತ್ತಿ ಪಕ್ಷದ ಮುಖಂಡರೊಬ್ಬರಿಗೆ ಜಿಲ್ಲಾಡಳಿತ ಗೌರವಿಸಿತ್ತು. ಈ ಸಂದರ್ಭದಲ್ಲಿ ಸನ್ಮಾನಿತರ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಹಲವರು ಆಶ್ಚರ್ಯಕ್ಕೆ ಗುರಿಯಾಗಿದ್ದರು. ಇನ್ನೂ ಅರ್ಹರಾಗಿದ್ದವರೊಬ್ಬರು ಕೊನೆಯ ಕ್ಷಣದಲ್ಲಿ ತಮ್ಮ ಹೆಸರನ್ನು ಕೈ ಬಿಟ್ಟಿರುವುದು ತಿಳಿಯದೇ ಕಾರ್ಯಕ್ರಮದಿಂದ ಹೊರ ನಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹ ನಿದರ್ಶನಗಳು ಅದೆಷ್ಟೋ.
ಆದ್ಯತೆಯಲ್ಲಿ ಗೊಂದಲ: ಜಿಲ್ಲೆಯಲ್ಲಿ ನಾಡು ನುಡಿ ಅಭಿವೃದ್ಧಿಗೆ, ಜನಪರ ಮತ್ತು ಜಿಲ್ಲೆಯ ಸಮಸ್ಯೆ ವಿರುದ್ಧ ಪ್ರಾಮಾಣಿಕವಾಗಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವವರು ಹಲವರಿದ್ದಾರೆ. ಹೊಸ ಪ್ರತಿಭಾವಂತರು ಎಲೆಮರೆ ಕಾಯಂತೆ ತಮ್ಮದೇ ಆದ ರೀತಿಯಲ್ಲಿ ಸಾಧನೆ ತೋರುತ್ತಿದ್ದಾರೆ. ಆದರೆ, ಹೆಚ್ಚಿಗೆ ಇವರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಕೇವಲ ಕೆಲಸಕ್ಕಿಂತ ಹೆಸರಿಗೆ ಮಾತ್ರ ಕಾಣಿಸಿಕೊಳ್ಳುವ ಪ್ರಚಾರಪ್ರಿಯರನ್ನು ಗುರುತಿಸಿ, ಅರ್ಹರನ್ನು ಕಡೆಗಣಿಸಲಾಗುತ್ತಿದೆ. ಇದಕ್ಕೆ ಆಯ್ಕೆ ಸಮಿತಿ ಸದಸ್ಯರ ಧೋರಣೆಯೇ ಕಾರಣವಾಗಿದೆ. ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಸಾಧಕರನ್ನು ಸನ್ಮಾನಿಸಲು ಇರುವ ಆಯ್ಕೆ ಸಮಿತಿಗೆ ಜಿಲ್ಲಾಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಆದರೆ, ಇವರು ತಲೆ ಕೆಡಿಸಿಕೊಳ್ಳದೇ ತಮ್ಮ ಅಧೀನ ಅಧಿಕಾರಿಗಳಿಗೆ ಬಿಟ್ಟು ಕೈ ತೊಳೆದುಕೊಳ್ಳುತ್ತಾರೆ. ಆಯ್ಕೆಯಲ್ಲಿ ಅನರ್ಹರಿದ್ದಾರೆಯೇ ಅರ್ಹರು ವಂಚಿತರಾಗಿದ್ದಾರೆಯೇ ಎನ್ನುವುದನ್ನು ನೋಡುವುದಿಲ್ಲ. ಅವರು ಕೇವಲ ಕಾರ್ಯಕ್ರಮದಲ್ಲಿ ಸನ್ಮಾನ ಮಾಡುವುದಕ್ಕೆ ಮಾತ್ರ ಸೀಮಿತವಾಗುತ್ತಾರೆ. ಮತ್ತೊಂದೆಡೆ ಅಧೀನ ಅಧಿಕಾರಿಗಳು ಸಮಿತಿಯಲ್ಲಿರುವ ಸಂಘಟನೆಗಳ ಮುಖಂಡರ ಮೇಲೆ ಭಾರ ಹಾಕುತ್ತಾರೆ. ಮುಖಂಡರು ತಮಗೆ ಬೇಕಾದವರನ್ನು ಗುರುತಿಸಿ ಪಟ್ಟಿ ತಯಾರಿಸಿ ಜಿಲ್ಲಾಡಳಿತದ ಮುಂದಿಡುತ್ತಾರೆ. ಇಲ್ಲಿ ಜಾತಿ, ಗುಂಪು, ಪ್ರತಿಸ್ಪರ್ಧಿ ಎನ್ನುವುದು ಪ್ರಮುಖವಾಗಿ ಆಧಾರವಾಗಿದ್ದು ಇಂತಹ ಆಯ್ಕೆಯೇ ಹೆಚ್ಚಿಗೆ ನಡೆಯುತ್ತಿದೆ.
ಕಾಟಾಚಾರದ ಸಮಿತಿ: ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲು ಜಿಲ್ಲಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಉಪ ವಿಭಾಗಾಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರು ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರನ್ನೊಳಗೊಂಡಂತೆ ಸಮಿತಿ ಇದೆ. ಆಸಕ್ತರು ಅರ್ಜಿಗಳನ್ನು ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಅ.29 ರೊಳಗೆ ಸಲ್ಲಿಸಬೇಕಾಗಿದೆ. ಆದರೆ, ಇಲ್ಲಿ ಸಮನ್ವಯದ ಕೊರತೆ ಇದ್ದು ಈವರೆಗೂ ಎಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಅಲ್ಲದೇ ಸಮಿತಿಯಲ್ಲಿ ಯಾರ್ಯಾರು ಸದಸ್ಯರಿದ್ದಾರೆ ಎಷ್ಟು ಮಂದಿ ಇದ್ದಾರೆ ಎನ್ನುವುದೇ ಸಮಿತಿಯ ಉಸ್ತುವಾರಿ ಜವಾಬ್ದಾರಿಯನ್ನು ಹೊತ್ತಿರುವ ಉಪ ವಿಭಾಗಾಧಿಕಾರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೇ ತಿಳಿದಿಲ್ಲ. ಸ್ವತಃ ಅವರು ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ ಎಂದು ಉತ್ತರ ನೀಡುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಜಿಲ್ಲೆಗೆ ಎಟುಕದ ವಸ್ತು. ಕೋಲಾರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರೇ ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ವಹಣೆಯನ್ನು ಹೊತ್ತುಕೊಂಡಿದ್ದು ಸಿಬ್ಬಂದಿ ಕೊರತೆಯಿಂದ ಸಮರ್ಪಕ ಕಚೇರಿ ನಿರ್ವಹಣೆಯಿಲ್ಲದೇ ಇಲಾಖೆ ನಲುಗುತ್ತಿದೆ. ಇದರಿಂದ ಆಯ್ಕೆಯಲ್ಲಿ ಮುಖಂಡರ ದರ್ಬಾರೇ ಹೆಚ್ಚು ಸ್ಟ್ರಾಂಗ್ ಆಗಿದೆ.
ಅರ್ಹರನ್ನು ಗುರುತಿಸಿ: ಜಿಲ್ಲಾಡಳಿತ ಅರ್ಹರನ್ನು ಗುರುತಿಸಿ ಗೌರವಿಸಬೇಕೇ ಹೊರತು ಪ್ರಭಾವ ಮತ್ತು ಶಿಫಾರಸ್ಸುಗಳನ್ನು ಹೊಂದಿರುವ, ಲಾಭಿ ಮಾಡುವ ಅನರ್ಹರಲ್ಲ. ನಿರ್ದಾಕ್ಷಿಣ್ಯವಾಗಿ ಅನರ್ಹರನ್ನು ಕೈ ಬಿಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಾರಿಯಾದರೂ ಜಿಲ್ಲಾಡಳಿತದ ವತಿಯಿಂದ ನಡೆಯುವ ಸನ್ಮಾನಕ್ಕೆ ಅನರ್ಹರು ಸೇರಿಕೊಳ್ಳುವುದಿಲ್ಲ ಎಂಬ ಆಶಯವನ್ನು ಹೊಂದಿದ್ದು ಹಿಂದೆಯೆಲ್ಲಾ ಬೇಸರ ತಂದಿದೆ. ಮತ್ತೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಬಾರದೆಂದು ಹಿರಿಯ ಪತ್ರಕರ್ತ ಎಸ್. ಶಿವರಾಂ ಆಗ್ರಹಿಸಿದ್ದಾರೆ.
ಲಾಭಿ ಸನ್ಮಾನ ಮಾಡಿಸಿಕೊಳ್ಳುವುದಕ್ಕಿಂತ ಸುಮ್ಮನಿರುವುದು ಮೇಲು. ಅನರ್ಹರನ್ನೇ ಗುರುತಿಸಿದರೆ ಅರ್ಹರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕುಮುದೇಂದು ಮಹರ್ಷಿ ಕನ್ನಡಪರ ಸಂಘದ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಸನ್ಮಾನಕ್ಕೆ ಅರ್ಹರನ್ನು ಮಾತ್ರ ಗುರುತಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಎನ್. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

