ಕೋಲಾರ

36 ತಿಂಗಳಲ್ಲಿ ಶಾಶ್ವತ ನೀರಾವರಿ ಸಾಧ್ಯ

Published On :

ಕ.ಪ್ರ.ವಾರ್ತೆ    ಕೋಲಾರ    ಅ. 28
ಅಂತರ್ಜಲ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸಲು ಅನೇಕರು ಹಲವು ರೀತಿಯ ಸಲಹೆಗಳನ್ನು ನೀಡುತ್ತಿದ್ದಾರೆ. ಆದರೆ, ಸರ್ಕಾರ ಮನಸ್ಸು ಮಾಡಿದಲ್ಲಿ ಸೂಕ್ತವಾದ ಯೋಜನೆಯನ್ನು ಕೇವಲ 36 ತಿಂಗಳಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಿದೆ ನೀರಾವರಿ ತಜ್ಞ ಹಾಗೂ ಭಾರತೀಯ ರೈತ ಒಕ್ಕೂಟದ ಕಾರ್ಯದರ್ಶಿ ಪ್ರೊ. ನರಸಿಂಹಪ್ಪ ಹೇಳಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಸೋಮವಾರ ಮಾಧ್ಯಮ ಅಕಾಡೆಮಿಯಿಂದ ಏರ್ಪಡಿಸಿದ್ದ ಅಂತರ್ಜಲ ಸಂರಕ್ಷಣೆ ಕುರಿತ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು, ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯಕ್ಕಾಗಿ ರೂಪಿಸಿರುವ ಯೋಜನೆಗಳ ಅನುಷ್ಠಾನಕ್ಕೆ ತಂತ್ರಜ್ಞಾನದ ಅವಶ್ಯಕತೆ ಇರುವುದರಿಂದ ಸರ್ಕಾರ ಮೊದಲು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಜನತೆಯಲ್ಲಿ ಇರುವ ಗೊಂದಲ ನಿವಾರಿಸಬೇಕೆಂದು ಸಲಹೆ ನೀಡಿದರು. ಅಂತರ್ಜಲ ಸಮಸ್ಯೆ ನಿವಾರಣೆಯಾಗಬೇಕಾದರೆ ಮೊದಲು ಕೆರೆಗಳ ಅಭಿವೃದ್ಧಿಯಾಗಬೇಕು, ರೈತರು ತಮ್ಮ ಹೊಲಗಳಲ್ಲಿ ಮಳೆಯ ನೀರು ಅಲ್ಲೇ ಇಂಗಿಸುವ ಬದಲು ಅಕ್ಕಪಕ್ಕದ ಕೆರೆಗಳಿಗೆ ನೀರು ಹರಿಯುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಅರಣ್ಯಗಳಲ್ಲೂ ಮಳೆ ನೀರು ಹರಿಯುವಂತೆ ಮಾಡಿದಲ್ಲಿ ಕೆರೆಗಳಿಗೆ ನೀರು ಶೇಖರಣೆಯಾಗಿ ಅಂತರ್ಜಲ ಅಭಿವೃದ್ಧಿಗೊಳ್ಳುತ್ತದೆ ಎಂದು ತಿಳಿಸಿದರು. ಅಂತರ್ಜಲ ಸಮಸ್ಯೆಯಿದ್ದರೂ ನಮ್ಮ ರೈತರು ಆತ್ಮಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾರೆ. ನೀರು ಹೆಚ್ಚು ವ್ಯಯವಾಗುವ ಭತ್ತ, ಕಬ್ಬು ಬೆಳೆಯುತ್ತಿಲ್ಲ, ಹನಿ ನೀರಾವರಿ ಮೂಲಕ 1 ಎಕರೆಗೆ 1 ಲಕ್ಷ ರು. ಬೆಲೆಯ ಟೋಮೇಟೋ ಬೆಳೆಯುತ್ತಿದ್ದು, ಇಂತಹ ರೈತರು ಕರ್ನಾಟಕದಲ್ಲಿ ಮತ್ತೊಬ್ಬರು ಇಲ್ಲವೆಂದು ಪ್ರಶಂಸಿದರು. ಅಂತರ್ಜಲ ಮರುಪೂರಣವಾದಲ್ಲಿ ಮಾತ್ರ ನೀರಿನ ಸಮಸ್ಯೆ ನಿವಾರಣೆ ಆಗುತ್ತದೆ. ತಡವಾದರೂ ನಮ್ಮ ಜನರಲ್ಲಿ ಅರಿವು ಮೂಡುತ್ತಿದೆ. ಇದರಿಂದ ಇಂದಲ್ಲ ನಾಳೆ ಜನತೆಯ ಬೇಡಿಕೆಗಳು ಈಡೇರುವುದರಲ್ಲಿ ಅನುಮಾನವಿಲ್ಲವೆಂದರು. ಫ್ಲೋರೈಡ್ ನೀರಿನ ಸೇವನೆಯಿಂದ ಜನತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೊಳವೆ ಬಾವಿಗಳ ಬಳಕೆಯಲ್ಲಿ ಬೆಳಗಾವಿ ಮೊದಲ ಸ್ಥಾನದಲ್ಲಿ, ತುಮಕೂರು 2ನೇಯ ಹಾಗೂ ಕೋಲಾರ ಜಿಲ್ಲೆ 3ನೇ ಸ್ಥಾನದಲ್ಲಿ ಇದೆ. ನೂರು ದಿನಗಳ ಮಳೆಯಲ್ಲಿ 750 ರಿಂದ 800 ಮಿಮೀ ನೀರು ಸಿಗುತ್ತಿದೆ. ಇಸ್ರೇಲ್‌ನಲ್ಲಿ ಇರುವ ತಂತ್ರಜ್ಞಾನ ನಮ್ಮಲ್ಲಿ ಇಲ್ಲದಿರುವುದರಿಂದ ನೀರಿನ ಮಿತ ಬಳಕೆ ಆಗುತ್ತಿಲ್ಲವೆಂದು ಹೇಳಿದರು.
ಅಂತರ್ಜಲ ಸಹ ಒಂದು ರೀತಿಯಲ್ಲಿ ಬ್ಯಾಂಕ್‌ನಲ್ಲಿಡಬಹುದಾದ ಠೇವಣಿ. ಇದನ್ನು ಖಾಲಿ ಮಾಡಿದರೆ ಸಮಸ್ಯೆ ಎದುರಾಗುತ್ತದೆ, ಉಲಿತಾಯ ಮತ್ತು ಖರ್ಚು ಸಮತೋಲನವಾಗಿರಬೇಕು ಆಗ ಯಾವುದೇ ತೊಂದರೆ ಉಂಟಾಗದು ಎಂದು ಸೂಚ್ಯವಾಗಿ ನುಡಿದರು. ಅಂತರ್ಜಲ ಸಮಸ್ಯೆ ನಿವಾರಣೆಗಾಗಿ ರೈತರು ನೀರಾವರಿ ಪದ್ಧತಿ ಹಾಗೂ ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಮಗೆ ನೀರು ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಅವರು ಛಲಗಾರರು, ಕೈಗೊಳ್ಳುವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದೇ ತರುತ್ತಾರೆ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ತಂದೆ ತರುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.