ಪತ್ರಕರ್ತರು ಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸಬೇಕು
ಚಿಕ್ಕಬಳ್ಳಾಪುರ: ಸರಿಯಾಗಿ ಯೋಚಿಸದೇ ಸಮಾಜದ ಸ್ವಾಸ್ಥ್ಯವನ್ನು ಹಾಳುವ ಮಾಡುವ ವ್ಯಕ್ತಿನಿಷ್ಠ ಸುದ್ದಿಗಳನ್ನು ಪ್ರಕಟಿಸುವುದರಿಂದ ಹಲವರು ನೋವನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಪತ್ರಕರ್ತರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಸಲಹೆ ನೀಡಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರಿಕಾ ದಿನಾಚಣೆ ಅಂಗವಾಗಿ ಆಯೋಜಿಸಿದ್ದ ಭಾಷಾ ಪತ್ರಿಕೋದ್ಯಮ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುದ್ದಿಗಳಲ್ಲಿ ನೈಜತೆ ಇರಬೇಕು. ಜತೆಗೆ ಅದು ಸಮಾಜದ ಹಿತಕ್ಕೆ ಘಾಸಿಯನ್ನುಂಟು ಮಾಡಬಾರದು. ಖಚಿತ ಮಾಹಿತಿ, ನೈಜಾಂಶಗಳಿರುವಂತಹ ಸುದ್ದಿಗಳನ್ನು ಪತ್ರಕರ್ತರು ಜನರಿಗೆ ತಲುಪಿಸಿ ಜಾಗೃತರನ್ನಾಗಿಸಬೇಕೆಂದ ಅವರು, ಅಧಿಕಾರಿಗಳು ತಪ್ಪು ಮಾಡಿದಾಗ, ಆಡಳಿತದಲ್ಲಿ ಭ್ರಷ್ಟಾಚಾರ ಕಂಡು ಬಂದಾಗ ಅದನ್ನು ಬೆಳಕಿಗೆ ತರುವಂತಹ ಕೆಲಸ ಮೆಚ್ಚುಗೆಗೆ ಅರ್ಹವಾಗುತ್ತದೆ. ಆದರೆ, ಕೇವಲ ಸ್ಪರ್ಧೆ ದೃಷ್ಟಿಯಲ್ಲಿಟ್ಟುಕೊಂಡು ಸತ್ಯಾಂಶಗಳಿಗೆ ದೂರವಾದ ಸುದ್ದಿಗಳನ್ನು ಪ್ರಕಟಿಸುವುದು ಸರಿಯಲ್ಲ ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಗಂಗಾಧರ್ ಮೊದಲಿಯಾರ್ ಮಾತನಾಡಿ, ಪತ್ರಕರ್ತರು ಜ್ಞಾನಾರ್ಜನೆಯನ್ನು ನಿರಂತರ ಅಧ್ಯಯನದ ಮೂಲಕ ಹೆಚ್ಚಿಸಿಕೊಳ್ಳುವುದರ ಜತೆಗೆ ಬದ್ಧತೆಯನ್ನು ಹೊಂದಿರಬೇಕು. ಆಗ ಉತ್ತಮ ರೀತಿಯಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾಲ ಬದಲಾದಂತೆ ತಂತ್ರಜ್ಞಾನ ಬೆಳೆದು ಪತ್ರಿಕೋದ್ಯಮದಲ್ಲೂ ನಾನಾ ರೀತಿಯಲ್ಲಿ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಆದರೆ, ನಮ್ಮ ಪತ್ರಿಕೋದ್ಯಮದ ಗುರಿ, ಉದ್ದೇಶ ಎಂದಿಗೂ ಬದಲಾಗುವುದಿಲ್ಲ, ಬದಲಾಗಲೂ ಬಾರದು, ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ವರದಿಗಾರರಿಗೆ ತಾಂತ್ರಿಕ ಸಮಸ್ಯೆ ಭಾಷಾ ಸಮಸ್ಯೆ ಕಾಡುತ್ತಿದೆ. ಈ ಗೊಂದಲಗಳಿಗೆ ಭಾಷಾ ಪತ್ರಿಕೋದ್ಯಮ ಅನುಕೂಲ. ಪತ್ರಕರ್ತರಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಹೆಚ್ಚಿಗೆ ಹಮ್ಮಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಪತ್ರಕರ್ತರು ಭಾಗವಹಿಸಿ ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂದರು.
ಪತ್ರಿಕೋದ್ಯಮದಲ್ಲಿ ಭಾಷಾ ಪ್ರಯೋಗ ಕುರಿತು ಪತ್ರಕರ್ತ ಮಹಮ್ಮದ್ ಇಸ್ಮಾಯಿಲ್, ಗಡಿ ಭಾಷೆ ಮತ್ತು ವರದಿಗಾರಿಕೆ ಕುರಿತು ಕನ್ನಡ ಪ್ರಭ ಮುಖ್ಯ ವರದಿಗಾರ ಕೆ.ವಿ. ಪ್ರಭಾಕರ್, ದೃಶ್ಯ ಮಾಧ್ಯಮ ಮತ್ತು ಭಾಷೆ ಕುರಿತು ಪ್ರಕಾಶ್ ಚಂದ್ರ, ನ್ಯಾಯಾಲಯ ಮತ್ತು ಅಪರಾಧ ವರದಿಗಾರಿಕೆ ಕುರಿತು ಪಿ. ರಾಜೇಂದ್ರ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಕೆ.ಎನ್. ಕವನ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಮ್, ಪ್ರಧಾನ ಕಾರ್ಯದರ್ಶಿ ಚಿ. ವೀರಶೇಖರ್, ಖಜಾಂಚಿ ಎಂ. ಕೃಷ್ಣಪ್ಪ ಪಾಲ್ಗೊಂಡಿದ್ದರು.
ಪ್ರೆಸ್ ದುರ್ಬಳಕೆಗೆ ಕಡಿವಾಣ ಹಾಕಲು ಒತ್ತಾಯ : ಇತ್ತೀಚೆಗೆ ರಿಯಲ್ ಎಸ್ಟೇಟ್ ಉದ್ಯಮಿಗಳು, ಕೆಲ ಮುಖಂಡರು ಪ್ರೆಸ್ ಲೇಬಲ್ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪತ್ರಿಕೋದ್ಯಮಕ್ಕೆ ಕಳಂಕ ತರುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಮ್ ಒತ್ತಾಯಿಸಿದರು.
ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಶಾಲ್. ಆರ್ ಅವರಿಗೆ ಮನವಿ ಸಲ್ಲಿಸಿದ ಅವರು, ಪತ್ರಿಕೋದ್ಯಮ ಮಹತ್ವ ಸ್ಥಾನವನ್ನು ಹೊಂದಿದೆ. ಇದು ಸಮಾಜದ ಹಿತ ಕಾಪಾಡುವ ಕೆಲಸ ಮಾಡುತ್ತದೆ. ಇಂತಹುದನ್ನು ಕೆಲವರು ತಮ್ಮ ಸ್ವಾರ್ಥ ಸಾಧನೆಗೆ, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನಧಿಕೃತ ಪ್ರೆಸ್ ವಿಸಿಟಿಂಗ್ ಕಾರ್ಡುಗಳನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ತೋರಿಸಿ ಪ್ರಭಾವ ಬೀರಲು ಮುಂದಾಗುವುದು ಹಾಗೂ ತಮ್ಮ ವಾಹನಗಳ ಮೇಲೆ ಪ್ರೆಸ್ ಲೇಬಲ್ ಹಾಕಿಕೊಂಡು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಲ್ಲದೇ ಪೊಲೀಸರ ವಿರುದ್ಧ ತಿರುಗಿ ಬಿದ್ದು ಪತ್ರಕರ್ತರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ರವರು ಸಂಘದ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಕೊಟ್ಟಿದ್ದು ಸಂಘದ ಸದಸ್ಯರಿಗೆ ನಿವೇಶನ ಒದಗಿಸಲು ಜಮೀನಿನ ಕಡತ ಸಿದ್ದವಾಗಿದೆ. ಸಂಘದಿಂದ ಪತ್ರಕರ್ತರಿಗೆ ಆರೋಗ್ಯ ವಿಮೆ, ಕಲ್ಯಾಣ ನಿಧಿ ಸ್ಥಾಪನೆ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದು ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಿದರು.
ಸಣ್ಣ ತಪ್ಪುಗಳಿಗೂ ಅವಕಾಶ ನೀಡಬಾರದು: ಸಮಾಜದ ಮೇಲೆ ಪತ್ರಿಕೋದ್ಯಮ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ. ಇದರಿಂದ ಸಣ್ಣ ಸಣ್ಣ ತಪ್ಪುಗಳಿಗೂ ಪತ್ರಕರ್ತರು ಅವಕಾಶ ನೀಡಬಾರದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಭಾಷಾ ಪತ್ರಿಕೋದ್ಯಮ ಕುರಿತು ಕಾರ್ಯಾಗಾರ ಸಮಾರೋಪ ಕಾರ್ಯಕ್ರಮದಲ್ಲಿ ಪತ್ರಕರ್ತರ ತಾಲೂಕು ಸಂಘಗಳಿಗೆ ಕ್ರೀಡಾ ಸಾಮಗ್ರಿಗಳು ಮತ್ತು ಗುಂಪು ವಿಮೆ ಪ್ರಮಾಣ ಪತ್ರಗಳನ್ನು ನೀಡಿ ಮಾತನಾಡಿದ ಅವರು, ಬಾಷಾ ಪರಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಬೇಕು, ಇಲ್ಲದಿದ್ದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ತನ್ನ ಭಾವನಾತ್ಮಕ ಬಾಷೆ ಜೂತೆಗೆ ಕೆಲಸ ಮಾಡಬೇಕು. ಇದರಲ್ಲಿ ಮಾಧ್ಯಮದ ಪಾತ್ರ ಮುಖ್ಯವಾಗಿರುತ್ತದೆ ಎಂದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯದರ್ಶಿ ಎನ್. ರಾಜು ಮಾತನಾಡಿ, ತಾಂತ್ರಿಕತೆ ಬೆಳೆದಷ್ಟು ಭಾಷಾ ಜ್ಞಾನ ಕಡಿಮೆಯಾಗುತ್ತಿದೆ. ಇದು ಬಹಳ ಅಪಾಯಕಾರಿ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಇಂದು ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಸರ್ಕಾರ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಪತ್ರಕರ್ತರು ಸಂಘಟಿತರಾಗಬೇಕು. ಎಲ್ಲರೂ ಕೈ ಜೋಡಿಸಿ ಹೋರಾಟ ನಡೆಸಬೇಕಾಗಿದೆ ಎಂದರು. ಪತ್ರಕರ್ತರಾದ ಪಿ. ರಾಜೇಂದ್ರ, ಪ್ರಕಾಶ್ ಚಂದ್ರ, ಪ್ರಧಾನ ಕಾರ್ಯದರ್ಶಿ ಚಿ. ವೀರಶೇಖರ್, ಖಜಾಂಚಿ ಎಂ. ಕೃಷ್ಣಪ್ಪ, ಉಪಾಧ್ಯಕ್ಷ ಎಂ. ಮುನಿಕೃಷ್ಣಪ್ಪ, ವೃತ್ತ ನಿರೀಕ್ಷಕ ಬಾಲಾಜಿಸಿಂಗ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

