ಅಧಿಕಾರಿಗಳ ನಿರ್ಲಕ್ಷ್ಯ: ರೇಷ್ಮೆಗೂಡು ಮಾರುಕಟ್ಟೆ ರಸ್ತೆಯಲ್ಲೆಲ್ಲಾ ಚರಂಡಿ ನೀರು
ಶಿಡ್ಲಘಟ್ಟ: ಪಟ್ಟಣ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೋಗುವ ರಸ್ತೆಗೆ ಇದುವರೆಗೂ ಡಾಂಬರೀಕರಣ ಅಥವಾ, ಕಾಂಕ್ರಿಟ್ ನಿರ್ಮಿಸದಿರುವ ಪರಿಣಾಮ ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ ಎಂದು ನಾಗರಿಕರು ಪುರಸಭಾ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೇಷ್ಮೆಗೂಡಿನ ಮಾರುಕಟ್ಟೆಗೆ ಪ್ರವೇಶಿಸಲು ಇರುವುದು ಒಂದೇ ದ್ವಾರವಾಗಿದ್ದು, ಗೂಡನ್ನು ತರುವವರು, ಹರಾಜು ಪ್ರಕ್ರಿಯೆ ಆದ ನಂತರ ಗೂಡನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವಂತಹ ಹಮಾಲಿ ಕಾರ್ಮಿಕರು ಸೇರಿದಂತೆ ಈ ರಸ್ತೆಯಲ್ಲಿ ಸಂಚರಿಸುವ ನಾಗರಿಕರಿಗೆ ಇನ್ನಿಲ್ಲದ ಪರದಾಟ ಎದುರಾಗಿದೆ.
ರಸ್ತೆಯ ಇಕ್ಕೆಲುಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುವ ಅಂಗಡಿಗಳ ಮಾಲೀಕರಿಗೂ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗುತ್ತಿದೆ, ರಸ್ತೆಯು ತುಂಬಾ ಕಿರಿದಾಗಿದೆ, ಈ ರಸ್ತೆಯಲ್ಲಿ ವಾಹನಗಳು ಬಂದಾಗ ಏಳುವಂತಹ ಧೂಳಿನಿಂದ ರಸ್ತೆಯ ಪಕ್ಕದಲ್ಲೆ ಇರುವ ಹೊಟೇಲುಗಳಲ್ಲಿ ಊಟ ಮಾಡಲು ಸಹಾ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಧೂಳು ಮತ್ತೊಂದು ಕಡೆಯಲ್ಲಿ ಕೊಳಚೆ ನೀರಿನ ದುರ್ನಾತದಿಂದಾಗಿ ಇಲ್ಲಿ ಊಟ ಮಾಡಲು ರೈತರು ಹಿಂಜರಿಯುತ್ತಾರೆ. ಇದರಿಂದಾಗಿ ರಸ್ತೆಯನ್ನು ದುರಸ್ತಿಗೊಳಿಸದ ಪರಿಣಾಮವಾಗಿ ಹೊಟೇಲು ಉದ್ಯಮಗಳ ಮೇಲೂ ಪ್ರಭಾವ ಬೀರುತ್ತಿದೆ.
ಕಳೆದ ವರ್ಷವೇ ಈ ರಸ್ತೆಗೆ ಕಾಂಕ್ರಿಟ್ ಹಾಕಲು ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಹೇಳಿದ್ದ ಪುರಸಭೆ ಅಧಿಕಾರಿಗಳೂ ಈವರೆಗೂ ಕ್ರಿಯಾಯೋಜನೆ ತಯಾರಿಸದೆ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತೆರಿಗೆ ವಸೂಲಿ ಮಾಡಲು ಮಾತ್ರ ಪ್ರತಿತಿಂಗಳು ಕಡ್ಡಾಯವಾಗಿ ಬರುತ್ತಾರೆ. ರಸ್ತೆಯನ್ನು ರಿಪೇರಿ ಮಾಡದಿದ್ದಲ್ಲಿ ಪುರಸಭೆಗೆ ತೆರಿಗೆ ಪಾವತಿಸುವುದಿಲ್ಲ. ಪುರಸಭೆ ಮುಂದೆ ಪ್ರತಿಭಟನೆ ಮಾಡುವುದಾಗಿಯೂ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

