ಕೋಲಾರ

ಕೃಷಿ ರಂಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಬಂಡವಾಳ ಹೂಡಲು ವಿರೋಧ

Published On :

ಕ.ಪ್ರ.ವಾರ್ತೆ   ಕೋಲಾರ   ಅ.29
ಕೃಷಿ ರಂಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಬಂಡವಾಳ ಹೂಡಲು ಅವಕಾಶ ನೀಡಿರುವುದರಿಂದ ದೇಶಿಯ ಸಣ್ಣ ಮತ್ತು ಅತಿ ಸಣ್ಣ ರೈತರು ಬೀದಿ ಪಾಲಾಗಲಿದ್ದಾರೆ. ಆದ್ದರಿಂದ ಈ ಆದೇಶವನ್ನು ವಾಪಸ್ ಪಡೆದು ದೇಶೀಯ ಕೃಷಿಯನ್ನು ಸಂರಕ್ಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕಂಪನಿ ಕೃಷಿ ವಿರೋಧಿಸಿ, ರೈತರು ಮತ್ತು ಕೂಲಿಕಾರರ ಕೃಷಿಯನ್ನು ಸಂರಕ್ಷಿಸಲು ಆಗ್ರಹಿಸಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರಚಾರಾಂದೋಲನ ಜಾಥಾವನ್ನು ತಾಲೂಕಿನ ಉಪ್ಪುಕುಂಟೆ ಗೇಟ್‌ನಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ಕಡಿಮೆ ಬೆಲೆ ಸಾವಿರಾರು ಎಕರೆ ಜಮೀನನ್ನು ಖರೀದಿಸಿ, ಉನ್ನತ ತಂತ್ರಜ್ಞಾನದಿಂದ ವ್ಯವಸಾಯ ಮಾಡುತ್ತಿದ್ದಾರೆ. ಇದರಿಂದ ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಕೃಷಿ ಕೂಲಿಕಾರ್ಮಿಕರು ಬೀದಿ ಪಾಲಾಗಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮ ಮಾಡಬೇಕೆಂದು ಕೋರಿ ಜಿಲ್ಲೆಯಲ್ಲಿ ಸಲ್ಲಿಸಿದ ಒಟ್ಟು ಅರ್ಜಿಗಳು 68437, ಸಾಗುವಳಿ ಚೀಟಿ ನೀಡಿರುವ ಸಂಖ್ಯೆ 23383, ತಿರಸ್ಕೃತವಾಗಿರುವ 30402 ಅರ್ಜಿಗಳು, ಇತ್ಯರ್ಥವಾಗದೇ ಇರುವ ಅರ್ಜಿಗಳು 14616 ಬಾಕಿ ಇದ್ದು, ಹೊಸದಾಗಿ ಅರ್ಜಿಗಳನ್ನು ಹಾಕಲು ಅವಕಾಶ ಕಲ್ಪಿಸಬೇಕು ಮತ್ತು ಈಗಾಗಲೇ ಅರ್ಜಿಗಳನ್ನು ಹಾಕಿರುವ ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು. ಮುಖ್ಯ ಅತಿಥಿ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್ ಮಾತನಾಡಿ ಜಿಲ್ಲೆಯ ಜೀವನಾಡಿಯಾಗಿರುವ ಹೈನುಗಾರಿಕೆ ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕಾಲುಬಾಯಿ ಜ್ವರಕ್ಕೆ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಹಸುಗಳು ಸಾವನ್ನಪ್ಪಿದ್ದು, ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದ ನೂರಾರು ಕುಟುಂಬಗಳು ಆರ್ಥಿಕ ಮೂಲವನ್ನು ಕಳೆದುಕೊಂಡಿದ್ದಾರೆ. ಇವರಿಗೆ ಸರ್ಕಾರವು ಕನಿಷ್ಠ 50 ಸಾವಿರ ರು. ಪರಿಹಾರ ಧನ ನೀಡಬೇಕೆಂದು ಎಂದು ಒತ್ತಾಯಿಸಿದರಲ್ಲದೇ ಹಸುಗಳ ವಿಮೆಯನ್ನು ಗರಿಷ್ಠ 70 ಸಾವಿರ ರು. ಗಳಿಗೆ ಹೆಚ್ಚಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಕುರ್ಕಿ ದೇವರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಮುಖಂಡರಾದ ಗಂಗಮ್ಮ, ವಿ.ನಾರಾಯಣರೆಡ್ಡಿ, ಬಿ.ಸಿ. ರಾಮಿರೆಡ್ಡಿ, ಕೆ.ಎಂ. ವೆಂಕಟೇಶ್, ಮುನಿಸ್ವಾಮಿ, ಮಂಜಮ್ಮ, ರಾಮಾಂಜಿ, ಚಿನ್ನಮ್ಮ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.