ಗಣತಿದಾರರ ನಿಖರ ಮಾಹಿತಿ ದೇಶದ ಅಭಿವೃದ್ಧಿಗೆ ಸಹಕಾರಿ
ಶಿಡ್ಲಘಟ್ಟ: ಗಣತಿದಾರರು ನೀಡುವ ನಿಖರ ಮಾಹಿತಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಹಸೀಲ್ದಾರ್ ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ 6ನೇ ಆರ್ಥಿಕ ಗಣತಿ 2012-2013 ತರಬೇತಿ ಶಿಬಿರದ ಅಧ್ಯಕ್ಷತೆ ಸ್ಥಾನದಿಂದ ಅವರು ಮಾತನಾಡಿದರು. ಗಣತಿದಾರರು ಪ್ರತಿ ಮನೆ ಮನೆಗೂ ತೆರಳಿದಾಗ ಕೃಷಿ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಮಾಹಿತಿಯ ಅಂಕಿ ಅಂಶಗಳನ್ನು ನಿಗದಿತ ಸಮಯದಲ್ಲಿ ಒದಗಿಸಬೇಕು. ಗಣತಿದಾರರು ಆರ್ಥಿಕ ಗಣತಿಗೆ ಸಹಕರಿಸಬೇಕಾದಂತಹ ವ್ಯಕ್ತಿಗಳೊಂದಿಗೆ ಉತ್ತಮ ವಿಶ್ವಾಸ ಗಳಿಸಿಕೊಂಡು ಪ್ರತಿ ಮಾಹಿತಿ ಸಂಗ್ರಹಿಸಬೇಕು. ತಪ್ಪು ಮಾಹಿತಿ ನೀಡಬಾರದು. ಗಣತಿಕಾರ್ಯ ಮಹತ್ತರವಾದುದಾಗಿದ್ದು, ನೀವು ಕೊಡುವ ಮಾಹಿತಿಗಳ ಆಧಾರದಲ್ಲಿ ಸರ್ಕಾರಗಳು ಯಾವುದೇ ರೀತಿಯಾದ ಯೋಜನೆಗಳನ್ನು ತಯಾರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಭಾಗದಲ್ಲಿನ ನಿರುದ್ಯೋಗ, ಆರ್ಥಿಕ ಮುಂತಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸಹಕಾರಿಯಾಗುತ್ತದೆ. ಗಣತಿ ಸಂದರ್ಭದಲ್ಲಿ ಗಣತಿದಾರರಿಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲು ತಾಲೂಕು ಆಡಳಿತ ಸಿದ್ದವಾಗಿದೆ. ಯಾವುದೇ ಸಂದರ್ಭದಲ್ಲಿಯೂ ಗೊಂದಲಕ್ಕೆ ಒಳಗಾಗದೆ ಕೆಲಸ ಮಾಡುವಂತೆ ಸೂಚಿಸಿದರು.
ಕಳೆದ ವರ್ಷದಲ್ಲಿ ನಡೆಸಿದ ಗಣತಿ ಕಾರ್ಯಕ್ಕೆ ಇನ್ನೂ ಹಣ ನೀಡಿಲ್ಲ. ಪುನಾ ನಾವು ಗಣತಿಕಾರ್ಯವನ್ನು ಮಾಡಬೇಕೆ ಎಂದು ಸಭೆಯಲ್ಲಿ ಹಾಜರಿದ್ದ ಅಂಗನವಾಡಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ತಹಸೀಲ್ದಾರ್ ನಾರಾಯಣಸ್ವಾಮಿ ಕಳೆದ ವರ್ಷದಲ್ಲಿ ನೀವು ಮಾಡಿರುವ ಗಣತಿ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ಹಣ ಬಿಡುಗಡೆಯಾಗದೆ ಸರ್ಕಾರದ ಹಂತದಲ್ಲೆ ಉಳಿದಿದೆ. ಶೀಘ್ರದಲ್ಲೆ ಸರ್ಕಾರ ಅದನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಒಟ್ಟು 162 ಗಣತಿದಾರರು, ಹಾಗೂ 81 ಮೇಲ್ವಿಚಾರಕರು ಪಾಲ್ಗೊಂಡಿದ್ದರು.
ಪುರಸಭೆ ಮುಖ್ಯಾಧಿಕಾರಿ ಚೆನ್ನರಾಯಪ್ಪ, ಶಿಶು ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಗಣತಿ ಕಾರ್ಯದ ತಾಲೂಕು ನೋಡಲ್ ಅಧಿಕಾರಿ ಸಿ.ಜೋಸೆಫ್, ಸಾಂಖಿಕ ನಿರೀಕ್ಷಕ ಅನಿಲಕುಮಾರ್, ತರಬೇತಿದಾರ ಶಂಕರನಾರಾಯಣ, ವೆಂಕಟರೆಡ್ಡಿ, ಇಂಜಿನಿಯರ್ ಸುಧಾಕರ್, ಪ್ರಸಾದ್ ಹಾಗೂ ತಾಲೂಕು ಕಚೇರಿಯ ಮೂರ್ತಿ, ಸುಬ್ರಮಣಿ, ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

