ಕೋಲಾರ

ಶಾಶ್ವತ ನೀರಾವರಿ: ಚಕಾರವೆತ್ತದ ಸಿಎಂ

Published On :


ಕ.ಪ್ರ. ವಾರ್ತೆ, ಕೋಲಾರ, ಅ.29
ಜಿಲ್ಲೆಯಲ್ಲಿ ಅಂತರ್ಜಲ ಕಡಿಮೆಯಾಗುತ್ತಿದೆ ಎಂದು ಒಪ್ಪಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಶ್ವತ ನೀರಾವರಿ ಸೌಲಭ್ಯದ ಬಗ್ಗೆ ಚಕಾರ ಎತ್ತದಿರುವುದು ಜಿಜ್ಞಾಸೆಗೆ ಕಾರಣವಾಗಿದೆ.
ತಾಲೂಕಿನ ಅಚ್ಚನಹಳ್ಳಿಯಲ್ಲಿ ಸ್ಕಾನಿಯಾ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಕೋಲಾರ ಜಿಲ್ಲೆ ಹಿಂದುಳಿದೆ. ಅಂತರ್ಜಲ ಕಡಿಮೆ ಆಗುತ್ತಿದೆ. ಸಾವಿರಾರು ಅಡಿ ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ ಎಂದು ಅನುಕಂಪ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಜನತೆಯ ಸಮಸ್ಯೆ ನಿವಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ, ಸೂಕ್ತವಾದ ಯೋಜನೆಯ ಮೂಲಕ ಶಾಶ್ವತ ನೀರಾವರಿ ಯೋಜನೆಯನ್ನು ಕಾಲ ಮಿತಿಯಲ್ಲಿ ಜಾರಿಗೆ ತರುವುದಾಗಿ ಹೇಳದಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ನಿಜ. ಮುಖ್ಯಮಂತ್ರಿಗಳು ಹೇಳುವ ರೀತಿಯಲ್ಲಿ ಜಿಲ್ಲೆಯ ರೈತರು ಅಂತರ್ಜಲ ಸಮಸ್ಯೆಯ ನಡುವೆಯೂ ರೇಷ್ಮೆ ಮತ್ತು ಹಾಲು ಉತ್ಪಾದನೆಯಲ್ಲಿ ಮಂಚೂಣಿಯಲ್ಲಿದ್ದಾರೆ. ಆದರೆ, ಈ ಅನುಕಂಪ ಅಥವಾ ಹೇಳಿಕೆಗಳಿಂದ ಜನತೆ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಂತಾಗುವುದಿಲ್ಲ.
ನೀರಿಗಾಗಿ ಕಳೆದ ಹತ್ತಾರು ವರ್ಷಗಳಿಂದ ನೂರಾರು ಹೋರಾಟಗಳು ನಡೆದಿವೆ. ಸರ್ಕಾರಗಳನ್ನು ನಡೆಸಿದವರು ಜನತೆಯ ಮುಗಿಗೆ ಬೆಣ್ಣೆ ಸವರಿ ಸಮ್ಮನಾಗಿದ್ದಾರೆ. ಎತ್ತಿನ ಹೊಳೆ, ಪರಮಶಿವಯ್ಯ ವರದಿ ಯಾವಾಗ ಜಾರಿಗೆ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಳೆದ ತಿಂಗಳು ವೇಮಗಲ್ ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಎತ್ತಿನ ಹೊಳೆ ಯೋಜನೆ ಜಾರಿ ಬಗ್ಗೆ ಪ್ರಸ್ತಾಪಿಸಿದ್ದರಲ್ಲದೆ, ಬಯಲು ಸೀಮೆಯ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದ್ದರು. ಆದರೆ, ಒಂದು ತಿಂಗಳು ಕಳೆದರೂ ಯಾವುದೇ ಸಭೆ ಕರೆಯಲಾಗಿಲ್ಲ, ಇತ್ತೀಚೆಗೆ ಬಿದ್ದ ಅಲ್ಪ-ಸ್ವಲ್ಪ ಮಳೆಯಿಂದ ಜನತೆಯೂ ಸುಮ್ಮನಾಗಿದ್ದಾರೆ. ಸೋಮವಾರ (ಅ.28) ಕೋಲಾರದಲ್ಲಿ ನಡೆದ ಮಾಧ್ಯಮ ಅಕಾಡೆಮಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ವೀರಾವೇಶದಿಂದ ಮಾತನಾಡಿ ಜನಪ್ರತಿನಿಧಿಗಳ ಸಭೆ ಕರೆದು ನೀರಿನ ವ್ಯವಸ್ಥೆ ಮಾಡದಿದ್ದರೆ ಸ್ವಾತಂತ್ರ್ಯ ಸಂಗ್ರಾಮ ರೀತಿಯಲ್ಲಿ ಹೋರಾಟ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸಚಿವರ ಈ ಎಚ್ಚರಿಕೆಯನ್ನು ಮುಖ್ಯಮಂತ್ರಿಗಳು ಗಮನಿಸಿಲ್ಲವೇ ಅಥವಾ ಬೇರೇನು ಕಾರಣವೆಂಬುದು ಯಕ್ಷ ಪ್ರಶ್ನೆಯಾಗಿದೆ. ಮಂಗಳವಾರ ತಮ್ಮ ಪಕ್ಕದಲ್ಲೇ ಕುಳಿತಿದ್ದ ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವರಾದರೂ ಮಾಧ್ಯಮ ಅಕಾಡೆಮಿಯಿಂದ ನಡೆದ ಕಾರ್ಯಕ್ರಮಗಳ ವಿವರ ತಿಳಿಸಿ ಸ್ಪಷ್ಟ ಉತ್ತರ ಪಡೆಯಬೇಕಾಗಿತ್ತು. ಕೆ.ಎಚ್. ಮುನಿಯಪ್ಪನವರೂ ನಿನ್ನೆ ಜನರ ಮುಂದೆ ತೋರಿದ ಧೈರ್ಯ, ತಾಕತ್ತನ್ನು ಸಿಎಂ ಮುಂದೆ ವ್ಯಕ್ತಪಡಿಸಲು ಸಾಧ್ಯವಾಗಿಲ್ಲವೆಂಬುದು ಚರ್ಚೆಗೆ ಗ್ರಾಸವಾಗಿದೆ.
ಕೈಗಾರಿಕೆಗಳಿಗೆ ವರ್ತೂರ್ ಕೆರೆ ಇಲ್ಲವೇ ಮತ್ತೊಂದು ಕೆರೆಯಿಂದ ಹರಿಯುವ ಕೊಳವೆ ನೀರನ್ನು ಶುದ್ಧಿಕರಿಸಿ ಒದಗಿಸಬಹುದು. ಆದರೆ, ಕುಡಿಯುವ ನೀರಿಗೆ ಶಾಶ್ವತ ಯೋಜನೆ ಅನಿವಾರ್ಯ. ನಮ್ಮ ಸರ್ಕಾರ ಕೈಗಾರಿಕೆ, ಕೃಷಿ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತಿದೆ ಹಾಗೂ ಅಹಿಂದ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವ ಮುಖ್ಯಮಂತ್ರಿಗಳು ರೇಲ್ವೆ ಕೋಚ್ ಕಾರ್ಖಾನೆಗೆ ಭೂಮಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದರ ಜೊತೆಗೆ ಅತಿ ಶೀಘ್ರ ಶಾಶ್ವತ ಕುಡಿಯುವ ನೀರಿನ ಯೋಜನೆಗೂ ಅಂಕಿತ ಹಾಕುವ ಮೂಲಕ ಜನತೆಯ ದಾಹ ತೀರಿಸದಿದ್ದರೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ ರೀತಿಯಲ್ಲಿ ಜನತೆಯ ಆಕ್ರೋಶ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು. ಶಾಶ್ವತ ನೀರಾವರಿ ಯೋಜನೆ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಗ್ಗೂಡಿ ಸರ್ಕಾರದಿಂದ ಕೆಲಸ ಮಾಡಿಸಬೇಕೆಂದು ಅಂತರ್ಜಲ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತ ವಿಚಾರ ಗೋಷ್ಠಿಯಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸದಿದ್ದರೆ, ರಾಜಕಾರಣಿಗಳ ಮಾತು ಮತ್ತು ಭರವಸೆ ಗೋರ್ಕಲ ಮೇಲೆ ನೀರು ಸುರಿದಂತಾಗುತ್ತದೆ.

 ಪಾ.ಶ್ರೀ. ಅನಂತರಾಮ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.