ಉನ್ನತ ಶಿಕ್ಷಣಕ್ಕೆ ಸಾಲ ನೀಡಲು ಬದ್ಧ: ದುಬೆ
ಕ.ಪ್ರ.ವಾರ್ತೆ ಕೋಲಾರ ಅ.30
ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ ಕಲ್ಪಿಸಲು ಕೆನರಾ ಬ್ಯಾಂಕ್ ಬದ್ಧವಾಗಿದೆ ಎಂದು ಸದರಿ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ಭರವಸೆ ನೀಡಿದರು.
ಕೆನರಾ ಬ್ಯಾಂಕಿನಿಂದ ಬುಧವಾರ ನಗರದ ಟಮಕ ಬಳಿ ಇರುವ ಶ್ರೀಗೋಕುಲ ಕಲ್ಯಾಣ ಮಂಟಕದಲ್ಲಿ ಹಮ್ಮಿಕೊಂಡಿದ್ದ ಶುದ್ಧೀಕರಿಸಿದ ಕುಡಿಯುವ ನೀರಿನ ಸವಲತ್ತು ಉದ್ಘಾಟನೆ ಹಾಗೂ ಎಂಎಸ್ಎಂಇ ಮತ್ತು ಗ್ರಾಮೀಣ ಸಾಲ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆನರಾ ಬ್ಯಾಂಕ್ ಸಾಮಾಜಿಕ ಬದ್ಧತೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಬ್ಯಾಂಕ್ ಆಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿನ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳು ಉನ್ನತ ಶಿಕ್ಷಣಕ್ಕೆ ಸಾಲ ನೀಡಲು ಮುಂದಾಗಬೇಕು. ಒಂದು ವೇಳೆ ಬೇರೆ ಬ್ಯಾಂಕುಗಳು ಸಾಲ ನೀಡದಿದ್ದ ಪಕ್ಷದಲ್ಲಿ ನಮ್ಮ ಬ್ಯಾಂಕಿನಿಂದ ಉನ್ನತ ಶಿಕ್ಷಣಕ್ಕೆ ಸಾಲ ಕೋರಿ ಅರ್ಜಿ ಸಲ್ಲಿಸುವ ಎಲ್ಲ ಆರ್ಹ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವುದಾಗಿ ಪ್ರಕಟಿಸಿದರು.
ಉನ್ನತ ಶಿಕ್ಷಣಕ್ಕೆ ಸಾಲ: ಇತ್ತೀಚೆಗೆ ವಿತ್ತ ಸಚಿವ ಪಿ. ಚಿದಂಬರಂ ಅವರು ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಶೇ.25 ರಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು. ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ಕಲ್ಪಿಸಬೇಕೆಂದು ವಿಧಾನ ಪರಿಷತ್ ನದಸ್ಯ ನಜೀರ್ ಅಹಮ್ಮದ್ಕೋರಿದ್ದರಿಂದ ಕೆನರಾ ಬ್ಯಾಂಕಿನ ಅಧ್ಯಕ್ಷ ಆರ್.ಕೆ. ದುಬೆ ಅವರು ಸ್ಪಷ್ಟ ಭರವಸೆ ನೀಡಿದರು.
ಸಾಲ ಯೋಜನೆ ಅನುಷ್ಟಾನಕ್ಕೆ: ಕೋಲಾರ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯಡಿ ಕೆನರಾ ಬ್ಯಾಂಕ್ ವಿವಿಧ ರೀತಿ ಸಾಲಗಳನ್ನು ನೀಡುತ್ತಿದೆ. ಆದರೆ, ಮಂಗಳೂರಿನಲ್ಲಿ ಬೇರೆ ರೀತಿಯ ಸಾಲ ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಕರಾವಳಿ ಭಾಗದ ಜನಪ್ರತಿನಿಧಿಗಳು ಅಲ್ಲಿನ ಕೆನರಾ ಬ್ಯಾಂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವ ರೀತಿಯ ಯೋಜನೆಗಳು ಅಗತ್ಯವೆಂಬುದನ್ನು ತಿಳಿಸಿದಲ್ಲಿ ಸಾಲ ಯೋಜನೆ ಅನುಷ್ಟಾನಕ್ಕೆ ತರುತ್ತೇವೆಂದು ಕರಾವಳಿ ಭಾಗದ ಶಾಸಕರೂ ಆಗಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ. ಖಾದರ್ ಅವರ ಮನವಿಗೆ ಸಕಾರಾತ್ಮಕ ಆಶ್ವಾಸನೆ ನೀಡಿದರು.
27 ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಫಲಾನುಭವಿಗಳಿಗೆ ರು. 100 ಕೋಟಿ, 100 ಪಿಎಂಇಜಿಪಿ ಫಲಾನುಭವಿಗಳಿಗೆ ರು. 10 ಕೋಟಿ, 2500 ಅತಿ ಸಣ್ಣ ಉದ್ದಿಮೆದಾರರಿಗೆ ರು. 7.50 ಕೋಟಿ, 10 ಸಾವಿರ ಫಲಾನುಭವಿಗಳಿಗೆ ತಲಾ ರು. 5 ಸಾವಿರದಂತೆ ರು. 5 ಕೋಟಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಆರ್.ಕೆ. ದುಬೆ ತಿಳಿಸಿದರು.
ಡಿಪ್ಲೋರೈಡ್ ಘಟಕಗಳ ಸ್ಥಾಪನೆ: ಇದಲ್ಲದೆ 5 ಸಾವಿರ ಸ್ವ ಸಹಾಯ ಗುಂಪುಗಳ ಸದಸ್ಯರು ಹಾಗೂ ಮೂಲಭೂತ ಉಳಿತಾಯ ಖಾತೆದಾರರಿಗೆ ರು. 15 ಕೋಟಿ ಮೈಕ್ರೊ ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಅಂತರ್ಜಲ ಸಮಸ್ಯೆಯಿಂದ ಶುದ್ಧ ನೀರು ಸಿಗದಿರುವುದರಿಂದ ನಮ್ಮ ಬ್ಯಾಂಕಿನ ವತಿಯಿಂದ ಜಿಲ್ಲೆಯ 200 ಹಳ್ಳಿಗಳಿಗೆ ತಲಾ ರು. 10 ಲಕ್ಷ ವೆಚ್ಚದಲ್ಲಿ ಪ್ಲೋರೈಡ್ ರಹಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಡಿಪ್ಲೋರೈಡ್ ಘಟಕಗಳ ಸ್ಥಾಪನೆ ಮಾಡಲಾಗುತ್ತಿದೆ. ಬುಧವಾರ ಕೋಲಾರ ತಾಲೂಕಿನ ನರಸಾಪುರ ಬಳಿಯ ಜೋಡಿ ಕೃಷ್ಣಾಪುರದಲ್ಲಿ ನೀರು ಶುದ್ಧೀಕರಣ ಘಟಕ ಉದ್ಘಾಟಿಸಲಾಗಿದ್ದು, ಉಳಿದ ಘಟಕಗಳನ್ನು ಶೀಘ್ರವೇ ಪ್ರಾರಂಭಿಸುವುದಾಗಿ ತಿಳಿಸಿದರು.
ಪ್ರತಿಯೊಂದು ಕುಟುಂಬದಲ್ಲಿ ಬ್ಯಾಂಕ್ ಖಾತೆಗಳು ಇರಬೇಕೆಂಬ ಉದ್ದೇಶದಿಂದ ನೋಡೆಲ್ ಅಧಿಕಾರಿಗಳ ಮೂಲಕ ಬ್ಯಾಂಕಿನ ಕೆಲಸ ನಿರ್ವಹಿಸಲಾಗುತ್ತಿದೆ. ಜಿಲ್ಲೆಯ ಮಾಲೂರು ತಾಲೂಕಿನ ಕಂಬೀಪುರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆನರಾ ಗ್ರಾಮೋದಯ ಯೋಜನೆಯಡಿ ಸದರಿ ಗ್ರಾಮವನ್ನು ದತ್ತು ಸ್ವೀಕರಿಸಲಾಗಿದೆ. ಅದೇ ರೀತಿ ವಿವಿಧ ಗ್ರಾಮಗಳನ್ನು ದತ್ತು ಸ್ವೀಕರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕೆನರಾ ಬ್ಯಾಂಕಿನಿಂದ ಹಮ್ಮಿಕೊಂಡಿರುವ ಯೋಜನೆಗಳನ್ನು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್, ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಗುಪ್ತ, ಜನರಲ್ಮ್ಯಾನೇಜರ್ ಭಟ್, ಕೋಲಾರ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಚಿನ್ನಪ್ಪ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಒ ಝುಲ್ಪಿಖಾರ್ ಉಲ್ಲಾ, ಬ್ಯಾಂಕಿನ ಅಧಿಕಾರಿಗಳಾದ ಮಂಜುನಾಥಸ್ವಾಮಿ, ಮಧುಸೂದನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

