ಮಾರ್ವೆ ಮೀನು ವಿರುದ್ಧ ಸಮರ
ಚಿಂತಾಮಣಿ: ಅಕ್ರಮವಾಗಿ ಮಾರ್ವೆ ಮೀನು (ಆಪ್ರಿಕನ್ ಕ್ಯಾಟ್ ಫಿಶ್) ಸರ್ಕಾರ ನಿಷೇಧಿಸಿದ್ದರು ಸಾಕಾಣಿಕೆ ಮಾಡುತ್ತಿರುವ ಗುಣಿಗಳನ್ನು ಶೀಘ್ರವೇ ನಾಶಪಡಿಸುವುದಾಗಿ ನೂತನ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ಚೌಕಟ್ಟಿನಡಿ ತಾಲೂಕಿನ ಚಿನ್ನಸಂದ್ರ ಹಾಗೂ ಇತರೆ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಮಾರ್ವೆ ಮೀನು ಸಾಕಾಣಿಕೆ ಮಾಡುತ್ತಿರುವ ಬಗ್ಗೆ ವಿವರಿಸಿದರು. ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮೀನಿನ ಕುಂಟೆಗಳನ್ನು ತೆರವುಗೊಳಿಸಲಾಗುವುದೆಂದು ಹೇಳಿದರು.
'ಭ್ರಷ್ಟಾಚಾರ ಪ್ರೋತ್ಸಾಹಕ್ಕೂ ಶಿಕ್ಷೆ'
ಗುಡಿಬಂಡೆ: ಲಂಚ ಕೊಡುವುದು, ತೆಗೆದುಕೊಳ್ಳುವುದರ ಜೊತೆಗೆ ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ಸರ್ಕಾರಿ ನಿಯಮ ಉಲ್ಲಂಘಿಸುವುದೂ ಅಪರಾಧವೆಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜೇಗೌಡ ಹೇಳಿದರು. ಸರ್ಕಾರಿ ಅಧಿಕಾರಿಗಳ ಹೆಸಸರಲ್ಲಿ ಭ್ರಷ್ಟಾಚಾರ ಮಾಡುವ ಪ್ರಯತ್ನಕ್ಕೆ ಕೈ ಹಾಕಿದಲ್ಲಿ ಕಠಿಣ ಶಿಕ್ಷೆ ಕಾದಿದೆ ಎಂದು ಎಚ್ಚರಿಸಿದರು. ನಂತರ ಸಭೆಗೆ ಸಲ್ಲಿಸಲಾದ ಕುಂದು ಕೊರತೆ ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು. ತಹಸೀಲ್ದಾರ್ ಶೈಲಜಾ, ಲೋಕಾಯುಕ್ತ ನಿರೀಕ್ಷಕ ಅಶೋಕ್ ಇದ್ದರು.
ರಾಜ್ಯೋತ್ಸವ ಆಚರಣೆ
ಕೆಜಿಎಫ್: ನವೆಂಬರ್ 1 ರಂದು ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಕೆಜಿಎಫ್ ನಗರದ ಕಸ್ತೂರಿ ಕನ್ನಡ ಸಂಘ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕೈಗೊಂಡಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಕನ್ನಡ ಅಭಿಮಾನಿ ಹಾಗೂ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಗರಸಭೆ ಪೌರಾಯುಕ್ತ ವಿ. ಬಾಲಚಂದ್ರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸಂಘದ ವತಿಯಿಂದ ನೀಡಲು ತೀರ್ಮಾನಿಸಲಾಗಿದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ವಿ.ಎಸ್.ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಟ್ಟೆನೋವು: ಯುವಕ ಆತ್ಮಹತ್ಯೆ
ಗುಡಿಬಂಡೆ: ಹೊಟ್ಟೆನೋವಿನಿಂದ ಬೇಸತ್ತು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಮಿಲಿಗುರ್ಕಿ ಗ್ರಾಮದಲ್ಲಿ ನಡೆದಿದೆ. ವೆಂಕಟರೆಡ್ಡಿ ಮಗ ವಾಸು (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೋಮವಾರ ಮಧ್ಯಾಹ್ನ ವಿಷ ಸೇವಿಸಿದ್ದು ಕೂಡಲೆ ಆತನನ್ನು ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಸೇರಿಸಲಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ. ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಕೆರೆಯಲ್ಲಿ ಶವ ಪತ್ತೆ
ಗುಡಿಬಂಡೆ: ತಾಲೂಕಿನ ಚೆಂಡೂರು ಗ್ರಾಮದ ಕೆರೆಯಲ್ಲಿ ಪುರುಷ ಶವವೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಕೆರೆಯಲ್ಲಿ ಶವ ತೇಲಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ ಎನ್ನಲಾಗಿದೆ. ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಸರು ತುಂಬಿದ್ದು ಹಾಗೂ ಶವ ಕೊಳೆತ ಸ್ಥಿತಿಯಲ್ಲಿರುವುದರಿಂದ ಗುರುತು ಪತ್ತೆ ಹಚ್ಚಲು ವಿಳಂಬವಾಗಿದೆಯೆಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಹಿಳೆ ಸಾವು: ಕೊಲೆ ಶಂಕೆ
ಗುಡಿಬಂಡೆ: ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಪಟ್ನ ಗ್ರಾಮದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಪತಿ ಕೊಲೆ ಮಾಡಿಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮತ ಮಹಿಳೆ ಮಂಜುಳಮ್ಮ(40) ಎನ್ನಲಾಗಿದ್ದು, ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆ ತನ್ನ ಮನೆಯಲ್ಲಿ ಮೃತಪಟ್ಟಿದ್ದು, ಪತಿ ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದು, ಆಕೆಯ ಸಂಬಂಧಿಗಳು ನೀಡಿದ ದೂರಿನನ್ವಯ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

