ಅಪ್ರಾಪ್ತ ವಿವಾಹಗಳಿಗೆ ಕೊನೆ ಎಂದು?
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಆಂಧ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯಲ್ಲಿ ಕಾನೂನಿಗೆ ವಿರುದ್ಧವಾಗಿದ್ದರೂ ಅಪ್ರಾಪ್ತ ವಯಸ್ಕರಿಗೆ ರಾಜಾರೋಷವಾಗಿ ಮದುವೆ ಮಾಡುವ ಪ್ರಕರಣಗಳು ನಡೆಯುತ್ತಲೇ ಇವೆ.
ಇವುಗಳಲ್ಲಿ ಕೆಲವೊಂದು ಪ್ರಕರಣಗಳು ಮಾತ್ರ ಬೆಳಕಿಗೆ ಬಂದು ಅಪ್ರಾಪ್ತ ಬಾಲಕಿಯರ ರಕ್ಷಣೆಯಾಗುತ್ತಿದ್ದರೆ, ಮತ್ತೆ ಅನೇಕ ಪ್ರಕರಣಗಳಲ್ಲಿ ಪೋಷಕರ ಅಜ್ಞಾನಕ್ಕೆ ತಮ್ಮದಲ್ಲದ ತಪ್ಪಿಗೆ ಅಮಾಯಕ ಬಾಲಕಿಯರು ಅರಿವಿಲ್ಲದೆಯೇ ಸಮಸ್ಯೆ ಅನುಭವಿಸುತ್ತಿದ್ದಾರೆ.
ಆಂಧ್ರದ ಗಡಿ ಭಾಗದ ಬಾಗೇಪಲ್ಲಿ ಮತ್ತು ಗುಡಿಬಂಡೆ ವ್ಯಾಪ್ತಿಯ ಗುಡ್ಡಗಾಡು ಪ್ರದೇಶಗಳಲ್ಲಿ ಬಹಳಷ್ಟು ಗ್ರಾಮಗಳು ಮೂಲ ಸೌಕರ್ಯಗಳಿಲ್ಲದೆ ಹಿಂದುಳಿದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿವೆ. ಇದರಿಂದ ಗ್ರಾಮಗಳಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಗಳು ತುಂಬಿ ತುಳುಕಾಡುತ್ತಿರುವ ಪರಿಣಾಮ ಪೋಷಕರಲ್ಲಿ ಗಾಢವಾಗಿ ಮನೆ ಮಾಡಿರುವ ಅಜ್ಞಾನದಿಂದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು, ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವಂತಹ ಪ್ರಕರಣಗಳು ಹೆಚ್ಚಿಗೆ ನಡೆಯುತ್ತಿವೆ.
ನಾನಾ ಪ್ರಕರಣಗಳು: ಕಳೆದೆರಡು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಅಪ್ರಾಪ್ತ ಬಾಲಕಿಯರಿಗೆ ಮದುವೆ ಮಾಡುವ ಐದಾರು ಪ್ರಕರಣಗಳು ಬೆಳಕಿಗೆ ಬಂದಿದ್ದು ಗಮನಕ್ಕೆ ಬಾರದೆ ಅಪ್ರಾಪ್ತರಿಗೆ ಮದುವೆ ಮಾಡಿರುವ ಪ್ರಕರಣಗಳು ಅಧಿಕವಾಗಿಯೇ ನಡೆದಿವೆ. ಹಿಂದೆ ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ವಿವಾಹ ಮಾಡುವ ಕೊನೆಯ ಕ್ಷಣದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮದುವೆ ನಿಲ್ಲಿಸಿದ್ದರು. ಅಲ್ಲದೇ ಮತ್ತೆ ಬಾಲಕಿ ಶಾಲೆಗೆ ಹೋಗುವಂತೆ ಮಾಡಿದ್ದರು. ಇದಲ್ಲದೇ ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿಯಲ್ಲಿ ಎರಡ್ಮೂರು ಪ್ರಕರಣಗಳಲ್ಲೂ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿ ಮದುವೆಯಾಗುವುದನ್ನು ತಪ್ಪಿಸಿದ್ದರು.
ಕಳೆದ ಒಂದು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ನಗರದ ಅಪ್ರಾಪ್ತ ಬಾಲಕಿಯನ್ನು ಎರಡನೇ ಮದುವೆಯಾಗಲು ಆಂಧ್ರದ ಹಿಂದೂಪುರ ಮೂಲದ ಸುಮಾರು 50 ವರ್ಷದ ಅಸಾಮಿಯೊಬ್ಬ ಸಿದ್ಧತೆ ಮಾಡಿಕೊಂಡಿದ್ದ. ಬಾಲಕಿಯ ಪೋಷಕರಿಗೆ ನಯವಾಗಿ ಆರ್ಥಿಕ ನೆರವನ್ನು ಒದಗಿಸಿ ಗಾಳ ಬೀಸಿದ್ದ. ಈ ಮದುವೆಯನ್ನು ತಪ್ಪಿಸಲು ಅಧಿಕಾರಿಗಳು ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಇದೀಗ ಬುಧವಾರ ಗುಡಿಬಂಡೆ ತಾಲೂಕಿನ ಗಂಗುಲಪಲ್ಲಿಯಲ್ಲಿ ಕೊರಚ ಜನಾಂಗದ ಅಪ್ರಾಪ್ತ ಬಾಲಕಿಯನ್ನು ಆಕೆಯ ಪೋಷಕರು ಆಂಧ್ರದ ಮೂಲದ ವರ ವಿಶ್ವನಾಥ್ಗೆ ಕೊಟ್ಟು ವಿವಾಹ ಮಾಡಲು ಮುಂದಾಗಿದ್ದು ಈ ಬಗ್ಗೆ ಬಂದ ದೂರನ್ನು ದಾಖಲಿಸಿಕೊಂಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ಧಲಿಂಗಪ್ಪ ಮತ್ತು ಪೊಲೀಸ್ ಅಧಿಕಾರಿಗಳ ತಂಡ 13 ವರ್ಷ ವಯಸ್ಸಿನ ಬಾಲಕಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮದುವೆಯಾಗುವುದನ್ನು ತಪ್ಪಿಸಿದೆ.
ಮಧ್ಯವರ್ತಿಗಳ ಪ್ರಭಾವ: ಆಂಧ್ರದ ಕಡೆಯಿಂದ ಬಂದು ಮದುವೆ ಮಾಡಿಸುವ ಮಧ್ಯವರ್ತಿಗಳ ಬುದ್ದಿವಂತಿಕೆಯಿಂದ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರಿಗೆ ಮದುವೆ ಮಾಡಿಸುವ ಕೆಲಸ ಹೆಚ್ಚಿಗೆ ನಡೆಯುತ್ತಿದೆ. ಆಂಧ್ರ ಮೂಲದ ಹುಡುಗನಿಗೆ ಮದುವೆ ಮಾಡಿಸುವಂತೆ ಕೇಳಿಕೊಳ್ಳುವ ಪೋಷಕರಿಂದ 5 ಸಾವಿರದಿಂದ 10 ಸಾವಿರ ರು.ಗಳವರೆಗೂ ಹಣ ವಸೂಲಿ ಮಾಡುವ ಮಧ್ಯವರ್ತಿಗಳು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಹೊಂದಿರುವ ಅನಕ್ಷರಸ್ಥ ಮತ್ತು ಕಡು ಬಡಕುಟುಂಬದವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾರೆ. ಹುಡುಗನ ಕಡೆಯವರು ಏನನ್ನೂ ಬಯಸುವುದಿಲ್ಲ, ಬದಲಿಗೆ ಹುಡುಗಿಗೆ ಒಡವೆ ಕೊಟ್ಟು ಮದುವೆ ಖರ್ಚು ನೋಡಿಕೊಳ್ಳುತ್ತಾರೆ ಅಥವಾ ನಿಮ್ಮಿಂದ ಹೆಚ್ಚೇನು ಬಯಸುವುದಿಲ್ಲ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸರಳವಾಗಿ ಕಾರ್ಯಕ್ರಮ ಮುಗಿಸಿಕೊಡಿ ಎಂದೆಲ್ಲಾ ಹೇಳುವ ಮೂಲಕ ಆಸೆಗಳನ್ನು ಹುಟ್ಟಿಸಿ ಅಪ್ರಾಪ್ತ ಬಾಲಕಿಯಾಗಿದ್ದರೂ ಮದುವೆ ಮಾಡಿಸುವಂತೆ ಪುಸಲಾಯಿಸುತ್ತಿದ್ದಾರೆ. ಮೊದಲೇ ಆರ್ಥಿಕ ಸಮಸ್ಯೆಗಳಿಂದ ಸಂಕಷ್ಟ ಜೀವನ ನಡೆಸುತ್ತಿರುವ ಕುಟುಂಬದವರು ತಮ್ಮ ಮನೆಮಗಳ ಭಾರವನ್ನು ಕಳೆದುಕೊಳ್ಳಲು ಮಧ್ಯವರ್ತಿಗಳು ಹಾಕುವ ತಾಳಕ್ಕೆ ತಲೆಯಾಡಿಸುತ್ತಿದ್ದು ಈ ಸಂದರ್ಭದಲ್ಲಿ ಮಧ್ಯವರ್ತಿಗಳಿಂದ ಹಸಿಹಸಿ ಸುಳ್ಳುಗಳನ್ನೇಳಿ ವಂಚಿಸುತ್ತಿದ್ದಾರೆ. ಇದರಿಂದ ದುರ್ನಡತೆ ಹುಡುಗ ಸಿಗುವುದು, ಎರಡನೇ ಮದುವೆ, ವರದಕ್ಷಿಣೆ ಕಿರುಕುಳ ಸೇರಿದಂತೆ ನಾನಾ ಸಮಸ್ಯೆಗಳಿಗೆ ಅಪ್ರಾಪ್ತ ಬಾಲಕಿಯರು ಗುರಿಯಾಗುತ್ತಿದ್ದಾರೆ. ಮತ್ತೊಂದೆಡೆ ಶಿಕ್ಷಣದಿಂದ ವಂಚಿತರಾಗಿ ಹದಿಹರೆಯದ ವಯಸ್ಸಿನಲ್ಲಿ ಮಗುವನ್ನು ಪಡೆದುಕೊಂಡು ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಬೆಳಕಿಗೆ ಬರುವಂತಹುದು: ಕೇವಲ ದೂರು ಬಂದ ಪ್ರಕರಣಗಳಲ್ಲಿ ಮಾತ್ರ ಅಪ್ರಾಪ್ತ ಬಾಲಕಿಯರ ರಕ್ಷಣೆ ನಡೆಯುತ್ತಿದೆ.ಅಧಿಕಾರಿಗಳಿಗೆ ದೂರು ತಲುಪದ ಪ್ರಕರಣಗಳಲ್ಲಿ ಅನೇಕ ಮಂದಿ ಅಪ್ರಾಪ್ತರು ಬಲಿಯಾಗುತ್ತಿದ್ದಾರೆ. ಇಲ್ಲಿ ಇದನ್ನು ತಪ್ಪಿಸುವ ಪ್ರಕರಣಗಳು ಕಡಿಮೆ. ಕಾನೂನಿಗೆ ವಿರುದ್ಧದ ಪ್ರಕರಣಗಳು ಸಂಭವಿಸುವುದು ಹೆಚ್ಚಿಗೆ. ಕೆಲ ಗ್ರಾಮಗಳಲ್ಲಿ ತಮಗೆ ತಿಳಿದಿದ್ದರೂ ಯಾರು ದೂರು ಕೊಡುತ್ತಿಲ್ಲ. ಗ್ರಾಮಸ್ಥರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಮನೋಭಾವನೆಯಲ್ಲಿ ಕಣ್ಣಿದ್ದು ಕುರುಡರಂತೆ ಇದ್ದು ಬಿಡುತ್ತಿದ್ದಾರೆ. ಇನ್ನು ಅಧಿಕಾರಿಗಳು ದೂರು ಬಂದಿದೆ ಎಂದು ಹೋಗಿ ನೋಡುತ್ತಾರೆಯೇ ಹೊರತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಕೇವಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಕಚೇರಿಯಲ್ಲಿ ಮಾತ್ರ ಅಪ್ರಾಪ್ತ ವಯಸ್ಕರ ಮದುವೆ ವಿರುದ್ಧ ಕರಪತ್ರಗಳು ಕಾಣಿಸಿಕೊಳ್ಳುತ್ತಿವೆ. ಕಾರ್ಯಕ್ರಮಗಳೂ ನಗರ, ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿವೆ. ಇದರ ಫಲವಾಗಿ ಅಪ್ರಾಪ್ತ ವಯಸ್ಕರ ವಿವಾಹ ತಡೆಯುಲು ಹೋದಾಗೆಲ್ಲಾ ಅಧಿಕಾರಿಗಳು ಪೋಷಕರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ.ಅಂತಿಮ ಕ್ಷಣದಲ್ಲಿ ನಿಲ್ಲಿಸಿ ಮಾನ ಮರ್ಯಾದೆ ಕಳೆದುಕೊಳ್ಳಬೇಕಾ ಎಂದು ಪೋಷಕರು ತಿರುಗಿ ಬೀಳುತ್ತಿದ್ದಾರೆ. ಇಲ್ಲವೇ ಕೆಲ ದಿನ ಸುಮ್ಮನಿದ್ದು ನಂತರ ಕದ್ದು ಮುಚ್ಚಿ ಅಪ್ರಾಪ್ತ ಬಾಲಕಿಯರಿಗೆ ಮದುವೆ ಮಾಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರೊಂದಿಗೆ ಹೆಚ್ಚಿಗೆ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಕೈಗೊಂಡು ಜನರಲ್ಲಿ ಅರಿವು ಮೂಡಿಸಬೇಕು. ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

