ಒಡವೆ ಅಡವಿಟ್ಟು ಸಾಲ ಮಾಡಬೇಡಿ
ಕ.ಪ್ರ.ವಾರ್ತೆ ಕೋಲಾರ ಅ.30
ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಒಡವೆಗಳನ್ನು ಅಡವಿಡುವ ಬದಲು ಕೆನರಾ ಬ್ಯಾಂಕ್ ಸೇರಿದಂತೆ ಇನ್ನಿತರ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಿಗುವ ಸಾಲ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೇಂದ್ರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆ ಸ್ವತಂತ್ರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಸಲಹೆ ನೀಡಿದರು.
ಅವರು ತಾಲೂಕಿನ ಜೋಡಿ ಕೃಷ್ಣಾಪುರದಲ್ಲಿ ಕೆನರಾ ಬ್ಯಾಂಕಿನಿಂದ ಅಳವಡಿಸಿರುವ ಶುದ್ಧ ನೀರಿನ ಘಟಕ ಹಾಗೂ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇದೇ ಬ್ಯಾಂಕಿನ ಎಟಿಎಂ ಉದ್ಘಾಟಿಸಿದ ಬಳಿಕ ಕೋಲಾರ ನಗರದ ಗೋಕುಲ್ ಕಲ್ಯಾಣ ಮಂಟದಪಲ್ಲಿ ಗ್ರಾಮೀಣ ಸಾಲ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಎರಡೂ ಜಿಲ್ಲೆಯ ಜನತೆ ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಮಾಡಿಸುವ ಮೂಲಕ ಕೇಂದ್ರ ಸರ್ಕಾರದಿಂದ ಸಿಗುವ ಆರ್ಥಿಕ ಸವಲತ್ತುಗಳನ್ನು ತಮದಾಗಿಸಿಕೊಳ್ಳಬೇಕು. ಪ್ರತಿಯೊಂದು ಕುಟುಂಬದಲ್ಲಿ ಕಡ್ಡಾಯವಾಗಿ ಬ್ಯಾಂಕಿನ ಖಾತೆ ಇದ್ದಲ್ಲಿ ಸುಲಭ ರೀತಿಯಲ್ಲಿ ಸಾಲ ಪಡೆಯಲು ಅನುಕೂಲವಾಗುತ್ತದೆ ಎಂದರು. ಬ್ಯಾಂಕುಗಳಲ್ಲಿ ಯಾವುದೇ ಠೇವಣಿ ಇಲ್ಲದೆ ಶೂನ್ಯ ಠೇವಣಿಯೊಂದಿಗೆ ಖಾತೆ ತೆರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಜೊತೆಗೆ ಕನಿಷ್ಠ 10 ಸಾವಿರ ರು. ಸಾಲವನ್ನು ಯಾವುದೇ ಭದ್ರತೆ ಇಲ್ಲದೆ ಪಡೆಯಬಹುದಾಗಿದೆ, ಗ್ರಾಹಕರು ಇದರ ಪ್ರಯೋಜನ ಪಡೆದು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದಲ್ಲಿ ಮತ್ತೆ ಹೆಚ್ಚಿನ ಸಾಲ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇನ್ನು ಮೂರು ತಿಂಗಳಲ್ಲಿ ಎಲ್ಲ ಕಡೆ ಬ್ಯಾಂಕ್ ಖಾತೆಗಳು ಆಗಬೇಕು. ಅವಿಭಾಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 6.50 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆ ಮಾಡಿಸಬೇಕಾಗಿದ್ದು ಲೀಡ್ ಬ್ಯಾಂಕು ಆಗಿರುವ ಕೆನರಾ ಬ್ಯಾಂಕಿನ ವ್ಯಾಪ್ತಿಗೆ ಸೇರಿದ ಎಲ್ಲಾ ಬ್ಯಾಂಕುಗಳಲ್ಲಿ ಜನರಿಗೆ ಬ್ಯಾಂಕ್ ಖಾತೆಯ ಸೌಲಭ್ಯ ಕಲ್ಪಿಸಬೇಕೆಂದರು.
ಕರ್ನಾಟಕ ರಾಜ್ಯದಲ್ಲೇ ಪ್ರಥಮ ಎನ್ನುವ ರೀತಿಯಲ್ಲಿ ಕೆನರಾ ಬ್ಯಾಂಕ್ ಮೂಲಕ ಕೋಲಾರ ಜಿಲ್ಲೆಯ 200 ಗ್ರಾಮಗಳಿಗೆ ತಲಾ 10 ಲಕ್ಷ ರು.ವೆಚ್ಚದಲ್ಲಿ ಫ್ಲೋರೈಡ್ ರಹಿತ ಶುದ್ಧವಾದ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇನ್ನು 5 ತಿಂಗಳಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ನೀಡುವ ಪಟ್ಟಿ ಆಧರಿಸಿ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಿ ಜನತೆಗೆ ಶುದ್ಧವಾದ ನೀರು ಸಿಗುವಂತೆ ಮಾಡಬೇಕೆಂದು ಕೆನರಾ ಬ್ಯಾಂಕಿನ ಸಿಎಂಡಿ ಆರ್.ಕೆ. ದುಬೆ ಅವರಿಗೆ ಸೂಚಿಸಿದರು.
ಬ್ಯಾಂಕುಗಳಲ್ಲಿ ಖಾತೆ ಮಾಡಿಸಿದವರಿಗೆ ಕೇಂದ್ರ ಸರ್ಕಾರ 10 ಸಾವಿರ ರು. ವೈಯಕ್ತಿಕವಾದ ಸಾಲದ ಜೊತೆಗೆ ಯಾವುದೇ ಭದ್ರತೆ ಇಲ್ಲದೆ 3 ಲಕ್ಷದವರೆವಿಗೂ ಸಾಲ ನೀಡುವುದರಿಂದ ಜನತೆ ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕೆಂದು ಹೇಳಿದರು.
ಬ್ಯಾಂಕ್ ಖಾತೆಗಳ ಸಂಬಂಧ ನವೆಂಬರ್ ಕಡೆ ವಾರದಲ್ಲಿ ಎರಡೂ ಜಿಲ್ಲೆಗಳ ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳ ಸಭೆ ಕರೆದು ಗುರಿ ಸಾಧನೆಗೆ ಕ್ರಮ ಕೈಗೊಳ್ಳಬೇಕೆಂದು ಸಚಿವ ಕೆ.ಹೆಚ್. ಮುನಿಯಪ್ಪ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಸರ್ಕಾರದ ಆರ್ಥಿಕ ಸೇರ್ಪಡೆ ಕಾರ್ಯಕ್ರಮದಡಿ ಕೋಲಾರ ಜಿಲ್ಲೆಯ 31 ಗ್ರಾಮಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 10 ಗ್ರಾಮಗಳನ್ನು ಗುರುತಿಸಿದ್ದು, ಇವುಗಳ ಪೈಕಿ ಕೆನರಾ ಬ್ಯಾಂಕ್ ಇದು ಜಿಲ್ಲೆಯ ಐತರಾಸನಹಳ್ಳಿ , ಐನೋಹಹೊಸಹಳ್ಳಿ, ಸೀತನಾಯಕನಹಳ್ಳಿ ಹಾಗೂ ಲಕ್ಷ್ಮೀಪುರ ಕ್ರಾಸ್ನಲ್ಲಿ ತೆರೆದಿರುವ ಶಾಖೆಗಳಿಗೆ ಸಚಿವ ಮುನಿಯಪ್ಪ ಚಾಲನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

