ರಸ್ತೆ ಬದಿ ವ್ಯಾಪಾರಸ್ಥರ ಎತ್ತಂಗಡಿ: ಸಭೆಯಲ್ಲಿ ಕೋಲಾಹಲ
ಮಂಡ್ಯ: ನಗರದ ಪ್ರಮುಖ ರಸ್ತೆ ಬದಿ ವ್ಯಾಪಾರಸ್ಥರನ್ನು ಆಯುಕ್ತರು ಎತ್ತಂಗಡಿ ಮಾಡಿದ ವಿಚಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸಿತು. ಅಂತಿಮವಾಗಿ ರಸ್ತೆ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಭೆ ಸಮ್ಮತಿ ಸೂಚಿಸಿತು. ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಬಿ. ಸಿದ್ದರಾಜು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಸದಸ್ಯರಾದ ಎಂ.ಜೆ. ಚಿಕ್ಕಣ್ಣ ಮತ್ತು ಅರುಣ್ ಕುಮಾರ್ ರಸ್ತೆ ಬದಿ ವ್ಯಾಪಾಸ್ಥರನ್ನು ತೆರವುಗೊಳಿಸಿದ್ದನ್ನು ಪ್ರಸ್ತಾಪಿಸಿ ಪರಸ್ಪರ ವಾಗ್ವಾದದಲ್ಲಿ ತೊಡಗಿ ಕಾಲ ಹರಣ ಮಾಡಿದರು. ರಸ್ತೆ ಬದಿಯ ಫಾಸ್ಟ್ಫುಡ್ ಗಾಡಿಗಳನ್ನು ತೆರವುಗೊಳಿಸಿದ ನಿಮ(ಆಯುಕ್ತ)ಗೆ ಧಮಕಿ ಹಾಕಿದವರು ಯಾರೆಂಬುದನ್ನು ಬಹಿರಂಗ ಪಡಿಸುವಂತೆ ಜೆಡಿಎಸ್ ಸದಸ್ಯರಾದ ಚಿಕ್ಕಣ್ಣ, ಸೋಮಶೇಖರ್ ಕೆರಗೋಡು, ಮಹೇಶ್ ಕೃಷ್ಣ ಪಟ್ಟು ಹಿಡಿದರು.
ಬಹಿರಂಗ ಪಡಿಸಿ: ಅಧ್ಯಕ್ಷ ಸಿದ್ದರಾಜು ಸದಸ್ಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೆ, ಆಯುಕ್ತ ದಾಸೇಗೌಡ ಮೌನವಾಗಿ ಕುಳಿತಿದ್ದರು. ಆಗ ಪಕ್ಷೇತರ ಸದಸ್ಯ ಅರುಣ್ಕುಮಾರ್, ಆಯುಕ್ತರೇ ಅಧ್ಯಕ್ಷರ ಮುಖ ನೋಡಿಕೊಂಡು ಸುಮ್ಮನಿದ್ರೆ ಆಗಲ್ಲ, ನಿಮಗೆ ಧಮಕಿ ಹಾಕಿದವರು ಯಾರೆಂದು ಬಹಿರಂಗ ಪಡಿಸಿ. ಇಲ್ಲದಿದ್ರೆ ಸದಸ್ಯರ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ ಎಂದರು. ನಗರದ ಅಭಿವೃದ್ಧಿ ಮತ್ತು ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದರೆ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ. ಸಂಚಾರಿ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದಿಂದ ರಸ್ತೆ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದು ಸರಿಯಾಗಿದೆ ಎಂದು ಸದಸ್ಯ ಚಿಕ್ಕಣ್ಣ ಆಯುಕ್ತರ ಬೆಂಬಲಕ್ಕೆ ನಿಂತರು.
ಪರ್ಯಾಯ ವ್ಯವಸ್ಥೆ: ಇದರಿಂದ ಸಿಡಿಮಿಡಿಗೊಂಡ ಪಕ್ಷೇತರ ಸದಸ್ಯ ಅರುಣ್ಕುಮಾರ್, ರಸ್ತೆ ಬದಿ ವ್ಯಾಪಾರಿಗಳನ್ನು ಕಾಲರಾ ಭೀತಿ ಹಿನ್ನಲೆಯಲ್ಲಿ ತೆರವುಗೊಳಿಸಲಾಗಿದೆಯೋ ಅಥವಾ ಶಾಶ್ವತವಾಗಿ ತೆರವು ಮಾಡಲಾಗಿದೆಯೋ ಎಂದು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷರು ಮತ್ತು ಆಯುಕ್ತರಿಂದ ಸ್ಪಷ್ಟ ಉತ್ತರ ದೊರಕದಿದ್ದಾಗ ಅರುಣ್ ಕುಮಾರ್, ಸುಪ್ರೀಂ ಕೋರ್ಟ್ ಫುಟ್ಪಾತ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದೆ. ರಸ್ತೆ ಬದಿ ವ್ಯಾಪಾರವನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಅವರೆಲ್ಲರ ಗತಿ ಏನು ಎಂದು ಮರು ಪ್ರಶ್ನಿಸಿದರು.
ಸಭೆಯಲ್ಲಿ ಸದಸ್ಯರು ವಿಷಯವಾರು ಚರ್ಚೆ ನಡೆಸದೆ ಫಾಸ್ಟ್ಫುಡ್ ಗಾಡಿಗಳ ತೆರವುಗೊಳಿಸಿದ್ದನ್ನೇ ಮುಖ್ಯವಾಗಿಟ್ಟುಕೊಂಡು ಪರಸ್ಪರ ವಾಗ್ವಾದಲ್ಲಿ ತೊಡಗಿದ್ದರಿಂದ ಉಳಿದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆಗ ಅಧ್ಯಕ್ಷರು, ವಿಷಯವಾರು ಚರ್ಚೆಯಲ್ಲಿ ಈ ಸಂಗತಿಯನ್ನು ಚರ್ಚಿಸೋಣವೆಂದು ಸದಸ್ಯರನ್ನು ಸಮಾಧಾನ ಪಡಿಸಿದರು. ಆಗ ಅಧ್ಯಕ್ಷ ಸಿದ್ದರಾಜು, ರಸ್ತೆ ಬದಿ ವ್ಯಾಪಾರಸ್ಥರಿಗಾಗಿ ಸಿಲ್ವರ್ ಜ್ಯೂಬಿಲಿ ಪಾರ್ಕ್ ರಸ್ತೆ, ಪಂಪ್ಹೌಸ್ ಹಿಂಭಾಗ, ಹಳೇ ತಾಲೂಕು ಕಚೇರಿ ಹಾಗೂ ಆರ್ಎಪಿಸಿಎಂಎಸ್ ಬಳಿಯ ರಸ್ತೆಗಳನ್ನು ಗುರುತಿಸಲಾಗಿದೆ. ಇಲ್ಲಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿ ವ್ಯಾಪಾರಸ್ಥರಿಗೆ ಟೆಂಡರ್ ಮೂಲಕ ಸ್ಥಳ ನೀಡಲು ಚಿಂತನೆ ನಡೆಸಲಾಗಿದೆ ಎಂದರು. ಸದಸ್ಯ ಎಂ.ಜೆ. ಚಿಕ್ಕಣ್ಣ ಸಿಲ್ವರ್ ಜ್ಯೂಬಿಲಿ ಪಾರ್ಕ್ ಮತ್ತು ಗಾಂಧಿ ಪಾರ್ಕ್ನಲ್ಲಿ ವ್ಯಾಪಾಸ್ಥರಿಗೆ ಅವಕಾಶ ಮಾಡಿಕೊಡುವಂತೆ ಸಲಹೆ ನೀಡಿದರು. ಅಂತಿಮವಾಗಿ ಸಭೆಯಲ್ಲಿ ರಸ್ತೆ ಬದಿ ವ್ಯಾಪಾರಸ್ಥರು ಪರ್ಯಾಯ ಸ್ಥಳಾವಕಾಶ ಗುರುತಿಸಿ ನೀಡುವವರೆಗೂ ರಸ್ತೆ ಬದಿಗಳಲ್ಲಿ ವ್ಯಾಪಾರ ವಹಿವಾಟು ನಡೆಸಬಾರದು. ಶೀಘ್ರದಲ್ಲಿಯೇ ಬದಲಿ ವ್ಯವಸ್ಥೆ ಕಲ್ಪಿಸುವ ನಿರ್ಧಾರಕ್ಕೆ ಬರಲಾಯಿತು. ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳು ಮತ್ತು ಹಂದಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು. ಅನಧಿಕೃತ ಕೋಳಿ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿ ಮುಚ್ಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

