ಕೋಲಾರ

ಸುಳ್ಳು ಜಾತಿ ಪತ್ರ ನೀಡಿರುವವರ ವಿರುದ್ಧ ಕ್ರಮ

Published On :

ಕ.ಪ್ರ.ವಾರ್ತೆ   ಕೋಲಾರ   ಅ.30
ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಕೆಲಸ ಪಡೆದಿರುವ ಅಭ್ಯರ್ಥಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ ಪ್ರಮಾಣ ಪತ್ರ ಪರಿಶೀಲನೆ ಸಮಿತಿ ಮುಂದೆ 27 ಪ್ರಕರಣಗಳಿವೆ. ಅವುಗಳಲ್ಲಿ ಆರು ಪ್ರಕರಣಗಳನ್ನು ರಾಜ್ಯ ಸಮಿತಿಗೆ ಕಳುಹಿಸಲಾಗಿದೆ. ಉಳಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ರಾಮನಿವಾಸ ಸೆಫಟ್ ಮಾತನಾಡಿ, 2013 ರಲ್ಲಿ ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರಿಗೂ 79 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 40 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಹಾಕಲಾಗಿದೆ ಎಂದು ಹೇಳಿದರು. 2012 ನೇ ಸಾಲಿನಲ್ಲಿ 85 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿಸಿದರು.
ಕೆ.ಜಿ.ಎಫ್ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಮಾತನಾಡಿ, ಕೆ.ಜಿ.ಎಫ್.ನಲ್ಲಿ 15 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 5 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಹಾಕಲಾಗಿದೆ.  ಉಳಿದ 8 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ಹೇಳಿದರು.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಗುರುಮೂರ್ತಿ ಮಾತನಾಡಿ, 205 ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 95 ಲಕ್ಷ  ರು.ಪರಿಹಾರ ನೀಡಲಾಗಿದೆ. ಈಗ ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 7 ಪ್ರಕರಣಗಳು ಬಾಕಿ ಇದ್ದು ಚೆಕ್ಗಳಿಗೆ ಸಹಿ ಮಾಡಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗದವರ ಕುಂದು ಕೊರತೆಗಳನ್ನು ನಿವಾರಣೆ ಮಾಡಿ ಅವರುಗಳ ಅಭಿವೃದ್ಧಿಗೆ ಶ್ರಮಿಸುವ ಉದ್ದೇಶ ಹೊಂದಲಾಗಿದೆ.  ಸಭೆಗೆ ಹತ್ತು ನಿಮಿಷ ತಡವಾಗಿ ಬರಲು ಕೇಂದ್ರ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಭೆಗಳನ್ನು ನಡೆಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು. ಸಭೆಗೆ ತಡವಾಗಿ ಬಂದಿದ್ದಕ್ಕೆ ಅನ್ಯತಾ ಭಾವಿಸಬಾರದು ಎಂದು ಹೇಳಿದರು.
ಶ್ಯಾನುಭೋಗನಹಳ್ಳಿಯಲ್ಲಿ ಗೋಡೆ ಕಾಂಪೌಂಡ್ ಕೆಡವಲಾಗಿದೆ ಎಂದು ಶಂಕರಪ್ಪ ಎಂಬುವರು ಆರೋಪಿಸಿ ಪರಿಹಾರ ಸಿಕ್ಕಿಲ್ಲವೆಂದು ದೂರಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಪ್ರಕರಣ ನ್ಯಾಯಾಲಯದಲ್ಲಿದೆ ಅದು ಅಲ್ಲಿಯೇ ಇತ್ಯರ್ಥವಾಗಬೇಕು. ಉಳಿದಂತೆ ಎರಡು ಪ್ರಕರಣಗಳಲ್ಲಿ 75 ಸಾವಿರ  ಮತ್ತು 90 ಸಾವಿರ ರು. ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ರೇಣುಕಾ ಎಂಬವರು ತಮಗೆ ಮೋಸ ಮಾಡಿರುವ ಯುವಕನ ಬಗ್ಗೆ ದೂರು ನೀಡಿದಾಗ ಜಿಲ್ಲಾಧಿಕಾರಿಗಳು ಆಕೆಗೆ ಮಾಸಾಶನ ಮಂಜೂರು ಮಾಡಲು ಮತ್ತು ವಾಸ ಮಾಡಲು ಅನುಕೂಲ ಮಾಡಿಕೊಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ನಗರಸಭೆ ಪುರಸಭೆಗಳಲ್ಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಮೀಸಲಿಡಲಾಗಿರುವ ಮೊತ್ತವನ್ನು ಕೌಶಲ್ಯ ತರಬೇತಿಗೆ ಉಪಯೋಗಿಸಬೇಕೆಂದರಲ್ಲದೆ ಸೌಲಭ್ಯಗಳು ನೀಡಲು ಭರಿಸಬೇಕೆಂದರು.  
ಕಂದಾಯ ಇಲಾಖೆ ವತಿಯಿಂದ ಅದಾಲತ್ಗಳನ್ನು ನಡೆಸಿ ಭೂಮಿಗೆ ಸಂಬಂಧಿಸಿದ ಪ್ರಕರಣಗಳನ್ನು ಗ್ರಾಮಗಳಲ್ಲಿಯೇ ಇತ್ಯರ್ಥ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರಲ್ಲದೆ ಮಾಸಾಶನ ಅದಾಲತ್ಗಳನ್ನು ಈಗಾಗಲೇ ಏರ್ಪಡಿಸಿದ್ದು ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ ಎಂದು ಹೇಳಿದರು. ಸಭೆಯಲ್ಲಿ ಶಾಸಕಿ ರಾಮಕ್ಕ, ಹೆಚ್ಚುವರಿ ರಕ್ಷಣಾಧಿಕಾರಿ ಎಂ.ಐ. ಜಮೀಲ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಖಾರ್ ಉಲ್ಲಾ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ್, ಉಪವಿಭಾಗಾಧಿಕಾರಿ ಮಂಜುನಾಥ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.