ಕೋಲಾರದಲ್ಲಿ ತೆಲುಗು ಚಿತ್ರ, ಕನ್ನಡ ವಿಚಿತ್ರ!
ಕೋಲಾರ ಜಿಲ್ಲೆಯಲ್ಲಿ ಗೋಕಾಕ್ ಚಳವಳಿ ನಂತರ ಕನ್ನಡದ ಸ್ಥಿತಿಗತಿ ಮೇಲ್ನೋಟಕ್ಕೆ ಕೊಂಚ ಸುಧಾರಣೆ ಆಗಿರುವ ರೀತಿ ಕಾಣುತ್ತಿದೆ. ಆದರೂ ಗಡಿ ಪ್ರದೇಶದಲ್ಲಿ ನೆಲೆಸಿರುವ ಜನತೆಯಲ್ಲಿ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇನ್ನೂ ಜಾಗೃತಿ, ಸ್ವಾಭಿಮಾನ ಹಾಗೂ ಆತ್ಮವಿಶ್ವಾಸ ಮೂಡಿಲ್ಲ.
ಜಿಲ್ಲೆಯ ಐದು ತಾಲೂಕುಗಳ ಪೈಕಿ ಕೋಲಾರ ಹೊರತುಪಡಿಸಿದರೆ ಇನ್ನುಳಿದಂತೆ ಬಂಗಾರಪೇಟೆ, ಮಾಲೂರು, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ಕನ್ನಡ ಬಾಷೆ ಬಳಕೆಯಲ್ಲಿದೆ. ಆದರೂ ಅಲ್ಲಿನ ಜನತೆಯ ಬದುಕಿನ ಭಾಷೆಯಾಗಿ ಹೊರ ಹೊಮ್ಮಿಲ್ಲ. ಸರ್ಕಾರ ಗಡಿ ಪ್ರದೇಶದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರದೆ ಕೇವಲ ಪುಸ್ತಕಗಳಲ್ಲಿ ಗುರಿ ಸಾಧನೆಯನ್ನು ದಾಖಲೆ ಮಾಡುವುದಕ್ಕೆ ಸಿಮೀತವಾಗಿದ್ದರಿಂದ ಕನ್ನಡ ಗಟ್ಟಿಗೊಳ್ಳುತ್ತಿಲ್ಲ.
ಇದಕ್ಕೆ ಉತ್ತಮ ನಿದರ್ಶನವೆಂದರೆ ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ ತಾಲೂಕಿನಲ್ಲಿ ಇರುವ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಂತ ತೆಲುಗು ಚಿತ್ರಗಳು ಹೆಚ್ಚು ದಿನ ಪ್ರದರ್ಶನವಾಗುತ್ತಿರುವುದು.
ಕನ್ನಡಿಗರೆಂದು ಹೇಳಿಕೊಳ್ಳುವವರು ಸಹ ಕನ್ನಡ ಚಿತ್ರಗಳು ಚೆನ್ನಾಗಿರುವುದಿಲ್ಲ ಹಾಗೂ ಪ್ರವೇಶ ಶುಲ್ಕ ದುಬಾರಿ ಎಂದು ಮಜಾ ನೀಡುವ ಪರಭಾಷಾ ಚಿತ್ರಗಳಿಗೆ ಮಾರು ಹೋಗುತ್ತಿದ್ದಾರೆ. ಇದರಿಂದ ಕನ್ನಡ ಚಿತ್ರಗಳು ಕನಿಷ್ಠ ಒಂದು ವಾರ ಸಹ ಪ್ರದರ್ಶನಗೊಳ್ಳದೆ ಚಿತ್ರಮಂದಿರಗಳಿಂದ ಎತ್ತಂಗಡಿ ಆಗುತ್ತಿವೆ.
ಗಡಿ ಭಾಗದ ಹಳ್ಳಿಗಳಲ್ಲಿ ಜನತೆ ಇತ್ತ ಕನ್ನಡವನ್ನು ಅತ್ತ ತೆಲುಗು ಭಾಷೆಯನ್ನು ಸ್ವಚ್ಛವಾಗಿ, ಅರ್ಥಪೂರ್ಣವಾಗಿ ಮಾತನಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮುಳಬಾಗಿಲು ತಾಲೂಕಿನ ನಂಗಲಿ, ಬೈರಕೂರು, ಆಲಂಗೂರು, ಶ್ರೀನಿವಾಸಪುರದ ರಾಯಲ್ಪಾಡು, ಗೌನಿಪಲ್ಲಿ, ಅಡ್ಡಗಲ್, ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ, ಸುಂದರಪಾಳ್ಯ, ಕ್ಯಾಸಂಬಳ್ಳಿ, ರಾಮಸಾಗರ, ಮಾಲೂರು ತಾಲೂಕಿನ ಜಯಮಂಗಲ, ಲಕ್ಕೂರು, ಚಿಕ್ಕತಿರುಪತಿ, ಮಾಸ್ತಿ ಮತ್ತು ಕೆಜಿಎಫ್ ನಗರ ಸೇರಿದಂತೆ ಇನ್ನಿತರ ಕಡೆ ತೆಲುಗು, ತಮಿಳು ಭಾಷೆಯ ಜನರೊಂದಿಗೆ ಕನ್ನಡಿಗರು ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವುದರಿಂದ ಭಾಷೆಯ ಬಗ್ಗೆ ಸಂವೇದನೆ ಇಲ್ಲದಂತಾಗಿದೆ.
ಗಡಿ ಭಾಷೆಯಲ್ಲಿ ಕನ್ನಡ ಅಭಿವೃದ್ಧಿಯಾಗದಿರುವುದರಿಂದ ಆಂಧ್ರ ಇಲ್ಲವೇ ತಮಿಳುನಾಡು ಗಡಿ ಭಾಗದಲ್ಲಿ ಅಲ್ಲಿನ ಭಾಷೆಯೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಗೊಂಡಿಲ್ಲ. ಹೀಗಾಗಿ ಸರ್ಕಾರ ದಾಖಲೆಗಾಗಿ ಕಾರ್ಯಕ್ರಮಗಳನ್ನು ಮಾಡದೆ ಪ್ರತಿಯೊಬ್ಬರ ಬದುಕಿಗೆ ಕನ್ನಡ ಭಾಷೆ ಅನಿವಾರ್ಯವೆಂಬ ವಾತಾವಣರ ನಿರ್ಮಿಸಬೇಕಾಗಿದೆ.
'ಜೇಬಿನಿಂದ ದುಡ್ಡು ಹಾಕಿ ಕನ್ನಡದ ಹಬ್ಬ'
ಕೋಲಾರ ಜಿಲ್ಲೆಯಲ್ಲಿ ಕನ್ನಡಕ್ಕಾಗಿ ಹೋರಾಟ ನಡೆಸಿರುವವರು ಸಾವಿರಾರು ಜನರಿದ್ದಾರೆ. ಅವರಲ್ಲಿ ಬಿಇಎಂಎಲ್ ಕಾರ್ಖಾನೆಯ ನಿವೃತ್ತ ಕಾರ್ಮಿಕ ಅ.ಕೃ.ಸೋಮಶೇಖರ್ ಕೊಂಚ ಭಿನ್ನವಾಗಿ ನಿಲ್ಲುತ್ತಾರೆ. ಕನಕನ ಪಾಳ್ಯ ನಿವಾಸಿ ಸೋಮಶೇಖರ್ ಚಿಕ್ಕ ವಯಸ್ಸಿನಲ್ಲೇ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಸತತ 45 ವರ್ಷಗಳ ಕಾಲ ಕನ್ನಡಕ್ಕಾಗಿ ಹೋರಾಡಿದ್ದಾರೆ.
1969-70ನೇ ಸಾಲಿನಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕಾಗಿ ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಹೋರಾಟಗಾರನಾಗಿ ರೂಪುಗೊಂಡ ಸೋಮಶೇಖರ್, 1971ರಿಂದ 1977ರವರೆಗೆ ಮೈಸೂರು ದಸರಾ ಮಾದರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಗಳನ್ನು ಆಚರಿಸುವ ಮೂಲಕ ಕೋಲಾರ ನಗರದ ಮನೆ ಮಾತಾಗಿದ್ದಾರೆ.
ಬಡ ಕುಟುಂಬದಿಂದ ಬಂದವರಾದ ಸೋಮಶೇಖರ್ ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಬಿಇಎಂಎಲ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಕನ್ನಡದ ಕೆಲಸಕ್ಕಾಗಿ ತಮ್ಮ ದುಡಿಮೆಯ ಹಣವನ್ನು ಖರ್ಚು ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕಾಗಿ ಕಾರ್ಖಾನೆಯಲ್ಲಿ ಮುಂಗಡವಾಗಿ ಸಂಬಳ ಪಡೆದು ಈ ಹಣವನ್ನು ಕನ್ನಡದ ಕೆಲಸಕ್ಕೆ ವಿನಿಯೋಗ ಮಾಡಿ ಮನೆಯಲ್ಲಿ ತರಾಟೆಗೆ ಒಳಗಾಗಿದ್ದಾರೆ!
ಕೋಲಾರದಲ್ಲಿ ಪ್ರತಿ ತಿಂಗಳು ಒಂದು ಕನ್ನಡ ಕಾರ್ಯಕ್ರಮವನ್ನು ಕಡ್ಡಾಯವಾಗಿ ಏರ್ಪಡಿಸುವ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಿದ್ದಾರೆ. ಗೋಕಾಕ್ ಚಳವಳಿಯಲ್ಲಿ ಸುಮಾರು 35 ದಿನ ಸಕ್ರಿಯವಾಗಿ ಭಾಗವಹಿಸಿದ್ದಾರೆ. ನನಗೆ ಡಾ.ರಾಜಕುಮಾರ್, ಜಿ.ನಾರಾಯಣ ಕುಮಾರ್, ಡಾ.ಚಿದಾನಂದಮೂರ್ತಿ, ವಾಟಾಳ್ ನಾಗರಾಜ್, ದೊಡ್ಡ ಹನುಮಪ್ಪ, ಬಿ.ಆರ್.ಗೋಪಾಲ್, ಪ್ರಭಾಕರ ರೆಡ್ಡಿ, ವಿ.ವಿ.ನಾರಾಯಣ ಸ್ಫೂರ್ತಿ ನೀಡಿದ್ದಾರೆ. ನಾರಾಯಣಕುಮಾರ್ ನಿಧನದ ನಂತರ ರಾಜ್ಯದಲ್ಲಿ ಕನ್ನಡ ಹೋರಾಟಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ. ಇತ್ತೀಚೆಗೆ ಕನ್ನಡ ಹೋರಾಟಗಳು ತನ್ನ ನೈಜ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಾವು ಕೈಯಿಂದ ಹಣ ಖರ್ಚು ಮಾಡಿ ಕನ್ನಡದ ಕೆಲಸ ಮಾಡಿದ್ದೇವೆ. ಆದರೆ, ಈಗ ಕಾಸಿಗಾಗಿ ಕನ್ನಡ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸುತ್ತಾರೆ ಸೋಮಶೇಖರ್.
ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

