ಏಕರೂಪ ಶಿಕ್ಷಣಕ್ಕಾಗಿ ಇಂದು ಜನಜಾಗೃತಿ ಆಂದೋಲನ
ಕ.ಪ್ರ. ವಾರ್ತೆ, ಕೋಲಾರ, ಸೆ.10
ಏಕರೂಪ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ಜಯಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಜಾಗೃತಿ ಜನಾಂದೋಲನ ರಥಯಾತ್ರೆ ಸೆ.11 ರಂದು ಬೆಂಗಳೂರಿನ ಟೌನ್ಹಾಲ್ನ ನ ಬಳಿ ಆರಂಭಗೊಳ್ಳಲಿದೆ ಎಂದು ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೆ.11 ರಂದು ಬೆಳಗ್ಗೆ ಬೆಂಗಳೂರಿನ ಟೌನ್ ಹಾಲ್ಬಳಿ ಸಮಾನ ಮನಸ್ಕರಾದ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ, ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ನಿರಂಜನಾರಾಧ್ಯ, ಡಾ.ಕಮಲಾ ಹಂಪನಾ ಸೇರಿದಂತೆ ಇನ್ನಿತರು ಚಾಲನೆ ನೀಡಲಿದ್ದಾರೆ ಎಂದರು.
ಬೆಂಗಳೂರಿನಿಂದ ಪ್ರಾರಂಭವಾಗುವ ಈ ಜನಜಾಗೃತಿ ಜನಾಂದೋಲನಾದ ರಥಯಾತ್ರೆ ರಾಜ್ಯದ 78 ತಾಲೂಕುಗಳಲ್ಲಿಸಂಚಾರ ನಡೆಸಿ 1 ಲಕ್ಷ ಸಹಿ ಸಂಗ್ರಹ ನಡೆಸಲಾಗುವುದು ಎಂದ ಅವರು, ಈ ರಥಯಾತ್ರೆ ಅ.2 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಮುಕ್ತಾಯಗೊಳ್ಳಲಿದೆ ಎಂದು ವಿವರಿಸಿದರು.
ಕೋಲಾರಕ್ಕೆ 12 ರಂದು ರಥಯಾತ್ರೆ: ಜನಜಾಗೃತಿ ಜನಾಂದೋಲನ ರಥಯಾತ್ರೆ ಕೋಲಾರ ನಗರಕ್ಕೆ ಸೆ.12 ರಂದು ಬೆಳಗ್ಗೆ 10 ಗಂಟೆಗೆ ಪ್ರವೇಶ ಮಾಡಲಿದ್ದು ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಲಾಗುವುದು ಎಂದ ಅವರು, ಗಾಂಧಿವನದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಗೋವಿಂದ ವರದಿಯನ್ನು ಆಧರಿಸಿ ರಾಜ್ಯದಲ್ಲಿ 5 ಕ್ಕಿಂತ ಕಡಿಮೆಯಿರುವ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿದಾಗ ಮಾತ್ರ ಜನಾಂಗದ ಬದುಕು ಹಸನ್ನಾಗಲಿದೆ ಎಂದರು. ಗೋವಿಂದ ವರದಿಯಿಂದ ರಾಜ್ಯದಲ್ಲಿ ಇದುವರೆಗೂ 3 ಸಾವಿರ ಶಾಲೆಗಳನ್ನು ಮುಚ್ಚಲಾಗಿದೆ ಎಂದ ಅವರು, ಕೂಡಲೇ ರಾಜ್ಯ ಸರಕಾರ ಏಕರೂಪ ಸಮಾನ ಶಾಲಾ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರಾಜ್ಯ ಹಿರಿಯ ಉಪಾಧ್ಯಕ್ಷ ದಿಲೀಪ್ ಶೆಟ್ಟೆ ಮಾತನಾಡಿ, ರಾಜ್ಯದಲ್ಲಿ ಜಾರಿಯಲ್ಲಿರುವ ಶಾಲಾ ಶಿಕ್ಷಣದ ನೀತಿಯು ಅನೇಕ ತಾರತಮ್ಯಗಳಿಂದ ಅಸಮಾನತೆಯಿಂದ ಕೂಡಿದ್ದು, ಶಿಕ್ಷಣ ವ್ಯವಸ್ಥೆ ಗೋಜಲುಗಳು ಮತ್ತು ಗೊಂದಲಗಳ ಗೂಡಾಗಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್, ಮಹಮದ್ ಅಲಿ, ಸಲಹೆಗಾರ ರಾಜಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

