ಕೋಲಾರ

ಶಿಕ್ಷಣ ಪದ್ಧತಿಯಲ್ಲಿ ದೊಡ್ಡ ಕಂದಕ: ನಿಡುಮಾಮಿಡಿ ಶ್ರೀ

Published On :

ಕ.ಪ್ರ.ವಾರ್ತೆ  ಬಾಗೇಪಲ್ಲಿ  ಸೆ. 17
ಕೆಲ ರಾಜಕೀಯ ನಾಯಕರು, ಅಧಿಕಾರಿಗಳು, ಸಾಹಿತಿಗಳು, ವಿಚಾರವಾದಿಗಳು, ಜತೆಗೆ ಸನ್ಯಾಸಿಗಳು ಪ್ರವಾದಿಗಳಂತೆ ಮಾತನಾಡುತ್ತಾರೆ. ಪ್ರಾಮಾಣಿಕತೆ ಬೋಧನೆ ಮಾಡುತ್ತಾರೆ. ಆದರೆ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ಎಲ್ಲವನ್ನು ಹಣ ಕೊಟ್ಟು ಖರೀದಿ ಮಾಡಬೇಕಾದರೆ ಪ್ರಾಮಾಣಿಕತೆ ಹೇಗೆ ಬರಲು ಸಾಧ್ಯ ಎಂದು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿ ಪ್ರಶ್ನಿಸಿದರು.
ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಡಾ.ಎಸ್. ರಾಧಾಕೃಷ್ಣನ್ ಅವರ 126ನೇ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ದೇಶದಲ್ಲಿ ಶಿಕ್ಷಣ ಪದ್ಧತಿಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಈ ಕಂದಕ ದೂರ ಮಾಡುವ ನೀತಿ ರೂಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆಯೆಂದು ಆರೋಪಿಸಿದರು.
ನಮ್ಮದು ಹೇಡಿಗಳ ಸಮಾಜ. ನಮ್ಮ ದೇಶದಲ್ಲಿ ಹೇಡಿಗಳ ಸಂಖ್ಯೆಯೇ ಹೆಚ್ಚಾಗಿದೆ. ಕಾರಣ ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರ ರಕ್ತದಲ್ಲಿ ಹೇಡಿತನ ರಕ್ತಗತವಾಗಿ ತುಂಬಿತುಳುಕುತ್ತಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಜನರು ದಂಗೆ ಏಳಬಾರದು ಎನ್ನುವ ಲೆಕ್ಕಾಚಾರದಲ್ಲಿ ಈ ದೇಶದ ಜನರನ್ನು ಭಷ್ಟಾಚಾರದಲ್ಲಿ ಭಾಗಿಗಳನ್ನಾಗಿಸಲು ಹೊರಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಪಮೌಲ್ಯವಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರವೂ ಅಪಮೌಲ್ಯವಾಗುತ್ತಿದೆ. ಗುರುಗಳು ಎನಿಸಿಕೊಂಡವರು ಅಪಮೌಲ್ಯಕ್ಕೆ ಒಳಗಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಉತ್ತಮ ಮೌಲ್ಯಗಳು ಅಧಃಪತನದ ಹಾದಿ ಹಿಡಿಯುತ್ತಿವೆ ಎಂದರು.
ಮೌಲ್ಯ ಮತ್ತು ಆದರ್ಶಗಳು ಇಲ್ಲದೆ ಇರುವ ಸಮಾಜ ಸಮಜ(ಪಶುಶುಗಳ ಗುಂಪು)ವಾಗಿ ಪರಿವರ್ತನೆಯಾಗಿದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತೆ ಎಂದರು.
ನಮ್ಮ ದೇಶದಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿವೆ. ಬಡವರ, ದೀನದಲಿತರ ಹಾಗೂ ಶ್ರೀಮಂತರ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರೀಯ ಶಾಲೆಗಳು ಬಂದ ಮೇಲೆ ಪ್ರಾಂತೀಯ ಶಾಲೆ ಕಡೆಗಣಿಸಲಾಗುತ್ತಿದೆ. ಅಂತರ ರಾಷ್ಟ್ರೀಯ ಶಿಕ್ಷಣ ನೀಡುವ ವಸತಿ ಶಾಲೆಗಳು ಮಹಾ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಿಟ್ಟನಲ್ಲಿ ಇಡೀ ಶಿಕ್ಷಣ ಕ್ಷೇತ್ರವೇ ವ್ಯಾಪಾರಿಕರಣವಾಗುತ್ತಿರುವುದರಿಂದ ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು. ಒಂದು ಕಡೆ ಭಕ್ಷಕ ವರ್ಗ ಬೆಳೆಯುತ್ತಿದ್ದರೆ ಇನ್ನೊಂದು ಕಡೆ ಭಿಕ್ಷುಕ ವರ್ಗ ಬೆಳೆಯುತ್ತಿದೆ. ಆದರೆ, ರಕ್ಷಕರ ವರ್ಗ ನಮ್ಮ ದೇಶದಲ್ಲಿ ಇನ್ನೂ ನಿರ್ಮಾಣವೇ ಆಗಿಲ್ಲ. ನಮ್ಮ ದೇಶದಲ್ಲಿ ಬಡವರು ಸರ್ಕಾರಿ ಶಾಲೆಗಳಿಗೆ ಹಾಗೂ ಶ್ರೀಮಂತರು ಖಾಸಗಿ ಶಾಲೆಗಳಿಗೆ ಎಂದು ಸೀಮಿತಗೊಳಿಸಲಾಗಿದೆ. ಈ ದೇಶದ ಬಹುತೇಕ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಶ್ರೀಮಂತರಿಗೆ, ಶಿಕ್ಷಕರಿಗೆ ಸನ್ಯಾಸಿಗಳಿಗೆ ಸೇರಿದಂತೆ ಬಹುತೇಕರಿಗೆ ಮುಖಬೆಲೆ ಇದೆ. ಆದರೆ, ಆಂತರಿಕ ಮೌಲ್ಯ ಇಲ್ಲ. ಇದರಿಂದ ನಮ್ಮ ದೇಶ ದುರ್ಬಲವಾಗುತ್ತಿದೆ ಎಂದರು.
ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಾಣಸ್ವಾಮಿ, ಶಾಸಕ ಎನ್.ಎನ್. ಸುಬ್ಬಾರೆಡ್ಡಿ ಮಾತನಾಡಿದರು. ಸಮಾರಂಭದಲ್ಲಿ ಜಿಪಂ ಅಧ್ಯಕ್ಷ್ಯ ಚಿನ್ನಪ್ಪ, ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಸದಸ್ಯರಾದ ನಾರಾಯಣಮ್ಮ, ಅಮರಾವತಿ, ತಾಪಂ ಅಧ್ಯಕ್ಷೆ ಮುನಿರತ್ನಮ್ಮ, ಸದಸ್ಯ ನರಸಿಂಹಪ್ಪ, ತಹಸೀಲ್ದಾರ್ ಎಂ.ಎ.ಪಧ್ಮ, ಇಒ ಶ್ರೀನಿವಾಸ್, ಬಿಇಒ ಕೆ. ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತರೆಡ್ಡಿ, ಕೆ.ವಿ. ಟ್ರಸ್ಟ್‌ನ ಬಿ.ಎಸ್. ನಾಗಭೂಷಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.