ಪ್ರಭಾವಿಗಳ ಹಿಡಿತದಲ್ಲಿ ಪಕ್ಷಗಳು, ಭ್ರಷ್ಟಾಚಾರ ಹೆಚ್ಚಳಕ್ಕೆ ಇದೇ ಕಾರಣ: ದೊರೆಸ್ವಾಮಿ ಆತಂಕ
ಚಿಕ್ಕಬಳ್ಳಾಪುರ: ಸ್ವಾರ್ಥ ಲಾಭದ ನಿರೀಕ್ಷೆಯಲ್ಲಿರುವ ಉದ್ದಿಮೆದಾರರ ಹಿಡಿತಕ್ಕೆ ರಾಜಕೀಯ ಪಕ್ಷಗಳು ಸಿಲುಕಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದಕ್ಕೆ ಅಂಕುಶ ಹಾಕಲು ಸಾಧ್ಯವಾಗದಿರುವಂತಹ ವಾತಾವರಣ ನಿರ್ಮಾಣವಾಗುತ್ತಿರುವುದೂ ಅಪಾಯಕಾರಿ ಬೆಳವಣಿಗೆ ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ ಎಂದರು.
ಈ ಬಾರಿ ಚುನಾವಣೆಯನ್ನು ಸಮರ್ಪಕ ರೀತಿಯಲ್ಲಿ ನಡೆಸಲು ಚುನಾವಣಾ ಆಯೋಗ ವಿಫಲವಾಗಿದೆ. ಆಮಿಷಗಳನ್ನೊಡ್ಡಿ ಮತದಾರರನ್ನು ದುರ್ಬಳಕೆ ಮಾಡಿಕೊಳ್ಳುವಂತಹ ಕೆಲಸವೂ ಎಗ್ಗಿಲ್ಲದೇ ನಡೆದಿದೆ.ಪ್ರಭಾವಿ ಎನಿಸಿಕೊಂಡ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕರು ತಮ್ಮ ರಾಜಕೀಯ ಲಾಭಕ್ಕಾಗಿ ಜನರಿಗೆ ಬೇಸರ ತರುವಂತೆ ನಡೆದುಕೊಂಡಿದ್ದಾರೆ. ಹೀಗೆ ಜನನಾಯಕರು ತಮ್ಮ ಸ್ವಾರ್ಥವನ್ನು ಪ್ರದರ್ಶಿಸುತ್ತಿರುವುದು, ಇದಕ್ಕೆ ಬುದ್ದಿ ಕಲಿಸಲು ಸಾಧ್ಯವಾಗದಿರುವುದು ತಲೆ ತಗ್ಗಿಸುವ ವಿಚಾರವಾಗಿದೆ ಎಂದರು. ಹಿಂದೆ ತ್ಯಾಗ, ದೇಶಸೇವೆ ಪ್ರಮುಖ ಅಂಶವಾಗಿತ್ತು. ಇದೀಗ ಸ್ವಾರ್ಥ, ಅಧಿಕಾರ ದಾಹವೇ ಮುಖ್ಯವಾಗಿದೆ. ಭ್ರಷ್ಟಾಚಾರ ಮಿತಿ ಮೀರಿ ನಡೆಯುತ್ತಿದೆ. ಒಂದು ರೀತಿಯಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟು ಹೋಗುತ್ತಿದ್ದು ಇದನ್ನು ಸರಿಪಡಿಸುವ ಕೆಲಸ ಈಗಲೇ ನಡೆಯಬೇಕು. ಇದಕ್ಕೆ ಯುವ ಜನಾಂಗ ಪಣತೊಟ್ಟು ಭ್ರಷ್ಟಾಚಾರದಿಂದ ದೇಶವನ್ನು ರಕ್ಷಿಸಬೇಕೆಂದರು.
ಸರ್ಕಾರಿ ಶಾಲಾ ಕಾಲೇಜುಗಳನ್ನು ತಾತ್ಸರ, ನಿರ್ಲಕ್ಷ್ಯ ಮನೋಭಾವನೆಯಿಂದ ನೋಡುವಂತಹುದು ಸರಿಯಲ್ಲ.ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚಿಗೆ ಖ್ಯಾತಿಯನ್ನು ಪಡೆದುಕೊಂಡಿರುವಂತಹುದು ಎಂದ ಅವರು, ಖಾಸಗೀ ಸಂಸ್ಥೆಗಳಿಗೆ ಸರಿಯಾಗಿ ಪೈಪೋಟಿ ನೀಡುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತಾಗಲು ಸರ್ಕಾರದಿಂದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಸರ್ಮಪಕ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದಿರುವುದು, ಅರೆಕಾಲಿಕ ಉಪನ್ಯಾಸಕರು ವೇತನ ಸೇರಿದಂತೆ ಸೌಲಭ್ಯಗಳಿಂದ ವಂಚಿತರಾಗಿ ಹೋರಾಟ ಮಾಡುತ್ತಿದ್ದರೂ ಬಗೆಹರಿಸಲು ಸಾಧ್ಯವಾಗದಿರುವುದು ಬೇಸರದ ಸಂಗತಿ ಎಂದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಉಪ ಕುಲಪತಿ ಕೃಷ್ಣನ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಾಲಹರಣ ಮಾಡುವುದರಿಂದ ಮುಂದೆ ಪಶ್ಚಾತ್ತಾಪಪಡಬೇಕಾಗುತ್ತದೆ. ಅದೇ ಉತ್ತಮ ವ್ಯಾಸಂಗದಿಂದ ಒಳ್ಳೆಯ ಸ್ಥಾನಮಾನ ಲಭಿಸುತ್ತದೆ ಎಂದರು. ಎಸ್ಪಿ ದಿವ್ಯ ಗೋಪಿನಾಥ್, ಪ್ರಾಂಶುಪಾಲ ಕೃಷ್ಣಪ್ಪ, ನಾರಾಯಣಸ್ವಾಮಿ, ವೆಂಕಟರಾಮು, ಬಾಲಪ್ಪ, ರಾಮಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

