ಲಕ್ಷ್ಮೀನರಸಿಂಹಸ್ವಾಮಿ ದೇಗುಲ ಜೀರ್ಣೋದ್ಧಾರಕ್ಕೆ ಉಟ್ಲು ಪರಿಷೆ
ಬಾಗೇಪಲ್ಲಿ: ತಾಲೂಕಿನ ಯಲ್ಲಂಪಲ್ಲಿ ಗ್ರಾ.ಪಂ. ವ್ಯಾಪ್ತಿಯ ಗೇದಿಕರೇಕುಲಗುಟ್ಟದಲ್ಲಿನ ಶ್ರೀ ಗೆದಿಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಉಟ್ಲು ಪರಿಷೆ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾ.ಪಂ. ವ್ಯಾಪ್ತಿಯ ಗುವ್ವಲವಾರಿಪಲ್ಲಿ, ಕಂಬಾಲಪಲ್ಲಿ, ಮದ್ದಲಖಾನ, ಗುಂಟಿಗಾನಪಲ್ಲಿ, ಪಟ್ರವಾರಿಪಲ್ಲಿ, ಮೂಗಿಚಿನ್ನೇಪಲ್ಲಿ, ಚಪ್ಪರಂಪಲ್ಲಿ, ಸಾಕಾವಲಪಲ್ಲಿ, ಕಾರಕೂರು, ನಡಂಪಲ್ಲಿ ಮತ್ತು ಬುಟ್ಟಿವಾರಿಪಲ್ಲಿ ಗ್ರಾಮಗಳು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಗಂಗೆ ಪೂಜೆ, ಸ್ವಸ್ಥಿವಾಚನ, ರಕ್ಷಾ ಬಂಧನ, ನವಗ್ರಹಪೂಜೆ, ಕಳಶ ಸ್ಥಾಪನೆ, ನವಗ್ರಹ ಹೋಮ, ಪೂರ್ಣಾಹುತಿ, ಬಲಿಹರಣ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ನಡೆಯಿತು. ಉಟ್ಲುಪರಿಷೆಯಲ್ಲಿ ಜೇಡಿ ಮಣ್ಣನ್ನು ಮೆತ್ತಿದ್ದ ಕಂಬವನ್ನು ಹತ್ತಲು ಹತ್ತಾರು ಸಂಖ್ಯೆಯ ಉತ್ಸಾಹಿ ಯುವಕರು ಯತ್ನಿಸಿದರು. ಆಗ ಕಂಬದ ಮೇಲ್ತುದಿಯಲ್ಲಿ ಕುಳಿತಿದ್ದ ವ್ಯಕ್ತಿ ಯುವಕರ ಮೇಲೆ ಅಂಟಿನಿಂದ ಕೂಡಿದ ನೀರನ್ನು ಸುರಿದು ಅವರ ಯತ್ನ ವಿಫಲಗೊಳಿಸಲು ಮುಂದಾದ ದೃಶ್ಯ ನೋಡುಗರಿಗೆ ಮನರಂಜನೆ ನೀಡಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಎ. ಪದ್ಮ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಪೂಜಾ ಕಾರ್ಯಕ್ರಮಗಳ ನೇತೃತ್ವವನ್ನು ನರಸಿಂಹಪ್ಪ, ಅಶ್ವತ್ಥರೆಡ್ಡಿ, ವೆಂಕಟೇಶ್, ರಾಮಚಂದ್ರಪ್ಪ ಮುಂತಾದವರು ವಹಿಸಿದ್ದರು.
ಪಾಳೇಗಾರರ ಕಾಲದಿಂದ ಬಹು ವೈಭವವಾಗಿ ನಡೆಯುತ್ತಿದ್ದ ಪೂಜೆ ಕೈಂಕರ್ಯಗಳು ಅನೇಕ ಕಾರಣಗಳಿಂದ ನಿಂತುಹೋಗಿದ್ದವು ಎನ್ನಲಾಗಿದೆ. ಕಳೆದ 5 ವರ್ಷ ಹಿಂದೆ ಭಕ್ತಾಧಿಗಳು ಪಾಳು ಬಿದ್ದಿದ್ದ ಗುಡಿಯ ಜೀರ್ಣೋದ್ಧಾರ ಕೈಗೊಂಡು ಪ್ರತಿ ವರ್ಷ ಪೂಜಾ ಕಾರ್ಯಕ್ರಮಗಳನ್ನು ಇಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

