ಕೋಲಾರ

ಕೆಜಿಎಫ್ ಆಸ್ಪತ್ರೆ ಸುಧಾರಣೆಗೆ ಚುಚ್ಚುಮದ್ದು ನೀಡಿಯಾರೇ?

Published On :

ಆರ್.ರಜನೀಕಾಂತ್
ಕೆಜಿಎಫ್: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಅಗತ್ಯವಿರುವ ವೈದ್ಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಆಸ್ಪತ್ರೆ ಮುಂಭಾಗ ಕಳೆದ ಹತ್ತಾರು ವರ್ಷಗಳಿಂದ ಹೋರಾಟಗಳನ್ನು ನಡೆಸಿವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಅಷ್ಟೇ ಸ್ಪಷ್ಟ.
ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯರ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಸುಮಾರು 100 ವರ್ಷಗಳಷ್ಟು ಇತಿಹಾಸವಿರುವ ಸಾರ್ವಜನಿಕ ಆಸ್ಪತ್ರೆ ಸುಧಾರಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಮೈಸೂರು ಮಹಾರಾಜರ ಕಾಲದಲ್ಲಿ ಜಯಚಾಮರಾಜ ಒಡಿಯರ್ ನಿರ್ಮಿಸಿದ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆ ಜಿಲ್ಲೆಯಲ್ಲೇ ಪ್ರಸಿದ್ದ ಪಡೆದಿತ್ತು. ಬಿಜಿಎಂಎಲ್ ಚಿನ್ನದ ಗಣಿಗಳು ಕಾರ್ಯನಿರ್ವಹಿಸುತ್ತಿದ್ದಾಗ ಕೆಜಿಎಫ್ ನಗರ, ಚಿನ್ನದ ಗಣಿ ಕಾರ್ಮಿಕರ ಕುಟುಂಬ ವರ್ಗ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಗಡಿ ಭಾಗದ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾಗ ಆಸ್ಪತ್ರೆಯ ಎಲ್ಲಾ ಕೊಠಡಿಗಳು ತುಂಬಿ ತುಳುಕುತ್ತಿತ್ತು. 18ರಿಂದ 20 ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಇತ್ತೀಚಿನ 10 ವರ್ಷಗಳಿಂದ ಆಸ್ಪತ್ರೆಯ ಸ್ಥಿತಿ ಹದಗೆಟ್ಟಿದೆ.
ರೋಗಿಗಳಿಗೆ ಮೂಲಭೂತ ಸೌಕರ್ಯವಿಲ್ಲ. ಸೂಕ್ತ ಭದ್ರತೆಯಿಲ್ಲ, ಕೊಳವೆ ಬಾವಿ ದುರಸ್ತಿಗೊಂಡು ನೀರಿನ ಸಮಸ್ಯೆ ಉಂಟಾಗಿದೆ. ಆಸ್ಪತ್ರೆಯಲ್ಲಿ ಈಗ ಕೇವಲ 4 ವೈದ್ಯರು ಮಾತ್ರ ಇದ್ದಾರೆ. ರೋಗಿಗಳು ಇಲ್ಲದೆ ಬೆಡ್ಗಳು ಖಾಲಿ, ಖಾಲಿ. ಕೊಠಡಿಗೆ ಬೀಗ ಹಾಕುತ್ತಿದ್ದು, ಜಾನುವಾರುಗಳು, ಬೀದಿ ನಾಯಿಗಳ ವಾಸ ಸ್ಥಳವಾಗಿ ಪರಿವರ್ತನೆಗೊಂಡಿವೆ!
ಸಣ್ಣಪುಟ್ಟ ಕಾಯಿಲೆಗಳಿಗೂ ಕೋಲಾರ, ಬೆಂಗಳೂರು, ಕುಪ್ಪಂ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಆಸ್ಪತ್ರೆಯಲ್ಲಿ ತುರ್ತುವಾಹನವೂ ಇಲ್ಲ. ಅಪಘಾತ ಸಂದರ್ಭಗಳಲ್ಲಿ ಭಾರಿ ಸಮಸ್ಯೆ ಸೃಷ್ಟಿಯಾಗುತ್ತಿದೆ.
ಶಾಸಕಿ ವೈ.ರಾಮಕ್ಕ ಅಂತೂ ಇತ್ತ ತಿರುಗಿಯೂ ನೋಡುತ್ತಿಲ್ಲ. ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಸಚಿವ ಯು.ಟಿ.ಖಾದರ್ ಅವರು  ಒಮ್ಮೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಅಷ್ಟೆ. ಮತ್ತೆ ಅವರು ಇತ್ತ ತಲೆಹಾಕಿಲ್ಲ. ಇನ್ನಾದರೂ ಇತ್ತ ಗಮನ ಹರಿಸಿ ಕೆಜಿಎಫ್ ಆಸ್ಪತ್ರೆಗೆ ಸುಧಾರಣೆಯ ಚುಚ್ಚುಮದ್ದು ನೀಡಿಯಾರೇ?


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.