ಮೃತ್ಯುಕೂಪವಾದ ಕೊಳವೆ ಬಾವಿಗಳು
ಪಾ.ಶ್ರೀ. ಅನಂತರಾಮ್
ಕೋಲಾರ: ವಿಫಲ ಕೊಳವೆ ಬಾವಿಗಳನ್ನು ಮುಚ್ಚದೆ ನಿರ್ಲಕ್ಷಿಸಿದ ಪರಿಣಾಮ ಆಗಿರುವ ಅನಾಹುತಗಳಿಂದ ರೈತರು ಪಾಠ ಕಲಿತಂತೆ ಕಾಣುತ್ತಿಲ್ಲವೆಂಬುದಕ್ಕೆ ಜಿಲ್ಲೆಯ ಖಾಸಗಿ ಜಮೀನುಗಳಲ್ಲಿ ಮೃತ್ಯುಕೂಪವಾಗಿರುವ ಕೊಳವೆ ಬಾವಿಗಳೇ ಸಾಕ್ಷಿ.
ವಿಜಾಪುರ ಜಿಲ್ಲೆಯ ದ್ಯಾಬೇರಿಯಲ್ಲಿ ಅಕ್ಷತಾ ಎಂಬ ಪುಟ್ಟ ಬಾಲಕಿ ತೆರೆದ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಸರ್ಕಾರಿ ಮತ್ತು ಖಾಸಗಿ ಜಾಗದಲ್ಲಿ ವಿಫಲವಾಗಿರುವ ಕೊಳವೆ ಬಾವಿಗಳನ್ನು ತಕ್ಷಣ ಮುಚ್ಚಬೇಕೆಂದು ಸೂಚಿಸಿತ್ತು.
ಸಾವು ಬದುಕು: ಆದರೂ ಎಚ್ಚರಗೊಳ್ಳದ ಪಾಲಕರ ನಿರ್ಲಕ್ಷ್ಯದಿಂದಾಗಿ ಬಾಗಲಕೋಟೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ 6 ವರ್ಷದ ಬಾಲಕ ಕಬ್ಬಿನ ಗದ್ದೆಯಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ದ್ಯಾಬೇರಿಯಲ್ಲಿ ನಡೆದ ಘಟನೆಯ ಹಿನ್ನಲೆಯಲ್ಲಿ ಕೋಲಾರ ಜಿಲ್ಲೆಯ ವಿಫಲ ಕೊಳವೆ ಬಾವಿಗಳ ಸ್ಥಿತಿ-ಗತಿಗಳ ಮೇಲೆ ಜೂ. 19ರಂದು ಕನ್ನಡಪ್ರಭ ಬೆಳಕು ಚೆಲ್ಲಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಫಲ ಕೊಳವೆ ಬಾವಿಗಳನ್ನು ಪತ್ತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆ ಕಾರ್ಯ ನಡೆಸಿ ತಕ್ಷಣ ಅಂತಹ ಬಾವಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು.
ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಸಹ ವಿಫಲವಾಗಿರುವ ಕೊಳವೆ ಬಾವಿಗಳನ್ನು ಮುಚ್ಚಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಜಮೀನುಗಳಲ್ಲಿನ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಎಚ್ಚರಿಕೆ ನೀಡಬೇಕೆಂದು ತಾಕೀತು ಮಾಡಿದ್ದರು.
ಕವಡೆ ಕಾಸಿನ ಕಿಮ್ಮತ್ತಿಲ್ಲ: ಆದರೆ, ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಆದೇಶಕ್ಕೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಸಮೀಕ್ಷೆಯ ವರದಿಯನ್ನು ನೀಡಿಲ್ಲ, ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಅರಿವು ಮೂಡಿಸುವ ಯಾವುದೇ ಪ್ರಯತ್ನ ಮಾಡಿಲ್ಲ.
ಜಿಲ್ಲೆಯ ಬಹುತೇಕ ಕಡೆ ಖಾಸಗಿ ಜಮೀನುಗಳಲ್ಲಿ ರೈತರು ಕೊಳವೆ ಬಾವಿಗಳನ್ನು ಕೊರೆಸಿದ್ದು ನೀರು ಸಿಗದೆ ವಿಫಲವಾಗಿರುವ ಕೊಳವೆ ಬಾವಿಗಳಿಗೆ ಮುಚ್ಚಳ ಹಾಕಿ ಭದ್ರಪಡಿಸುವುದಕ್ಕೆ ಗಮನ ನೀಡಿಲ್ಲ.
ಕೋಲಾರ ತಾಲೂಕಿನ ತೋರದೇವಂಡಹಳ್ಳಿ ಮತ್ತು ಸುತ್ತ-ಮುತ್ತಲ ಗ್ರಾಮಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಕೊರೆಸಿರುವ ಕೊಳವೆ ಬಾವಿಗಳು ನೀರು ಸಿಗದೆ ಮೃತ್ಯುಕೂಪವಾಗಿವೆ.
ಜಿಲ್ಲೆಯಲ್ಲಿ ಈವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಹಾಗಂತ ನಿರ್ಲಕ್ಷ್ಯ ವಹಿಸುವುದು ಮಹಾಪರಾಧ. ಈ ಹಿಂದೆ ನೀಡಿದ್ದ ಸೂಚನೆಗಳನ್ನು ಪಾಲಿಸದ ಅಧಿಕಾರಿಗಳಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿ ಅದಷ್ಟು ಬೇಗನೆ ತೆರೆದ ಕೊಳವೆ ಬಾವಿಗಳಿಗೆ ಮುಚ್ಚಳ ಹಾಕಿಸಿ ಇಲ್ಲವೇ ವಿಫಲವಾಗಿರುವ ಕೊಳವೆ ಬಾವಿಗಳನ್ನು ಮಳೆ ಕೊಯ್ಲು ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಅಮಾಯಕರು ಸಾವು-ನೋವಿನಿಂದ ಪಾರಾಗುವಂತೆ ಮಾಡಬೇಕೆಂದು ಜಿಲ್ಲೆಯ ನಾಗರಿಕರ ಒತ್ತಾಸೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

