ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮನವಿ
ಎನ್. ಬಾಬು
ಚಿಂತಾಮಣಿ: ಬೆವರು ಸುರಿಸಿ ಬೆಳೆದ ದವಸ-ಧಾನ್ಯಗಳನ್ನು ರೈತನು ಮಾರಾಟ ಮಾಡಲು ಎಪಿಎಂಸಿ ಮಾರುಕಟ್ಟೆಗೆ ತಂದರೆ ಮಾರುಕಟ್ಟೆ ಪ್ರಾಂಗಣದಲ್ಲಿರುವ ಮಧ್ಯವರ್ತಿಗಳ ಹಾವಳಿಯಿಂದ ಮೋಸ ಹೋಗುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಕಮೀಷನ್ ಏಜಂಟರು ಉತ್ತಮ ದವಸ-ಧಾನ್ಯಗಳಿಗೆ ನಿಗದಿತ ಬೆಲೆಯೂ ನೀಡದೆ ರೈತರನ್ನು ಮೋಸ ಮಾಡುತ್ತಿದ್ದಾರೆ. ಇವರ ಹಾವಳಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪಾಲಿಗೆ ಬಂದಿದ್ದೇ ಪಂಚಾಮೃತ ಎನ್ನುವ ರೀತಿಯಲ್ಲಿ ಸಿಕ್ಕಷ್ಟು ಹಣವನ್ನು ತೆಗೆದುಕೊಂಡು ಹೋಗುವ ಸ್ಥಿತಿ ರೈತರಿಗೆ ಒದಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ರೈತರು ಬೆಳೆದ ಬೆಳೆದ ರಾಗಿ, ಬತ್ತ, ಟ್ಚಗರಿ, ಅವರೆ, ಅಲಸಂದಿ, ಕಡಲೆಕಾಯಿ ಸೇರಿದಂತೆ ಇತರೆ ಧಾನ್ಯಗಳು ಗ್ರಾಮೀಣ ಪ್ರದೇಶಗಳಿಂದ ಪ್ರಮುಖ ವಾಣಿಜ್ಯ ಕೇಂದ್ರವಾದ ನಗರದ ಎಪಿಎಂಸಿ ಮಾರುಕಟ್ಟೆಗೆ ತರುವಾಗ ಬಸ್ಸಿನಿಂದ ಇಳಿಸುವ ಮುನ್ನವೇ 5-6 ಜನ ಗುಂಪು ಕೂಡಿ ರೈತನ ಮೂಟೆಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಇದರಿಂದ ರೈತನು ತನಗೆ ಇಷ್ಟಬಂದ ದಲ್ಲಾಳಿಗಳಿಗೆ ದಾನ್ಯ ಮಾರಾಟ ಮಾಡುವ ಹಕ್ಕನ್ನೇ ಕಳೆದುಕೊಂಡಂತಾಗಿದೆ.
ಮದ್ಯವರ್ತಿಗಳ ಹಾವಳಿ; ಎಪಿಎಂಸಿ ಮಾರುಕಟ್ಟೆಯ ಹೊರ ಮತ್ತು ಒಳ ಭಾಗಗಳಲ್ಲಿ ಇರುವ ಹಲವು ದಲ್ಲಾಳಿಗಳು ಹಲವು ಜನರನ್ನು ಕೈಯಲ್ಲಿಟ್ಟುಕೊಂಡು ರೈತರು ತರುವ ದಾನ್ಯಗಳನ್ನು ವಾಹನಗಳಿಂದ ಕೆಳಗಿಳಿಸುವ ಮುನ್ನವೇ ತೆಗೆದುಕೊಂಡು ನಿಗದಿತ ಬೆಲೆ ನೀಡದೆ ಅನ್ಯಾಯ ಮಾಡುತ್ತಿದ್ದಾರೆಂದು ಹಲವಾರು ರೈತರು ಈಗಾಗಲೇ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಿಲ್ಲವಾಗಿದೆ.
ಪ್ರತಿನಿತ್ಯ ಕೋಟ್ಯಂತರ ರು. ವಹಿವಾಟು ನಡೆಯುವ ಎಪಿಎಂಸಿ ಯಾರ್ಡ್ನಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬುನಾತ ಬೀರುತ್ತಿದೆ. ರೈತರ ಅನುಕೂಲಕ್ಕಾಗಿ ಸುಸಜ್ಜಿತ ಫಲಾಹಾರ ಮಂದಿರ ಇಲ್ಲದೆ ಪರದಾಡುವಂತಾಗಿದೆ. ಶೌಚಾಲಯ ಇದ್ದೂ ಇಲ್ಲದಂತಾಗಿ ಹಂದಿಗಳ ಗೂಡಾಗಿದೆ. ಇನ್ನು ಮುಂದಾದರೂ ಮಾರುಕಟ್ಟೆಗೆ ಬರುವ ರೈತರ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರೈತರಿಗಾಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕೆಂದು ರೈತರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

