ಕೋಲಾರ

ಉಪಯುಕ್ತ ಔಷಧ ನಾಶ: ಆಕ್ರೋಶ

Published On :

ಚಿಕ್ಕಬಳ್ಳಾಪುರ: ಸರ್ಕಾರ ಉಚಿತವಾಗಿ ಪೂರೈಕೆ ಮಾಡುತ್ತಿದ್ದರೂ ಅನೇಕ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನಿಲ್ಲ ಎಂದು ಹೇಳಿ ಹೊರಗಡೆಯಿಂದ ಔಷಧಗಳನ್ನು ತರಲು ರೋಗಿಗಳಿಗೆ ಚೀಟಿ ಬರೆದುಕೊಡುವುದರ ನಡುವೆ ಲಕ್ಷಾಂತರ ರು. ಮೌಲ್ಯದ ಔಷಧಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಸಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ.
ನಗರದ ಬಿಬಿ ರಸ್ತೆಯಲ್ಲಿರುವ ಹಳೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿ ಲಕ್ಷಾಂತರ ರು. ಮೌಲ್ಯದ ಔಷಧಗಳನ್ನು ಬಿಸಾಡಿದ್ದು, ಮತ್ತೊಂದು ಕಡೆ ಬೆಂಕಿ ಹಾಕಿ ಸುಡಲಾಗಿದೆ. ಇದರಲ್ಲಿ ಇನ್ನೂ ಅವಧಿ ಹೊಂದಿ ಬಳಕೆಗೆ ಅರ್ಹವಾಗಿರುವ ಮಾತ್ರೆಗಳು ಮತ್ತು ಔಷಧಿಗಳು ಕಸದ ರಾಶಿಯಲ್ಲಿ ರಾರಾಜಿಸುತ್ತಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಲೇರಿಯಾ ಕಾಯಿಲೆಗೆ ನೀಡುವ ಕ್ಲೋರೋಕ್ವಿನ್ ಪಾಸ್ಫೇಟ್ 250 ಎಂ.ಜಿ, ಸಿರೆಂಜಿನ ಸೂಜಿಗಳು ರಾಶಿ ರಾಶಿಯಾಗಿ ಹಾಕಲಾಗಿದೆ. ಅವಧಿ ಮೀರಿದ ಮಾತ್ರೆಗಳನ್ನು ವಿಲೇವಾರಿ ಮಾಡಲು ಮುಂದಾದವರು ಉಪಯೋಗಕ್ಕೆ ಬರುತ್ತಿದ್ದ ಮಾತ್ರೆಗಳನ್ನು ನಿರ್ಲಕ್ಷಿಸಿದ್ದಾರೆ.
ಅಸಮರ್ಪಕ ವಿಲೇವಾರಿ: ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಅದರಲ್ಲೂ ವೈದ್ಯಕೀಯ ತ್ಯಾಜ್ಯ ವಸ್ತುಗಳ ವಿಲೇವಾರಿಯಲ್ಲಿ ಇನ್ನೂ ಎಚ್ಚರಿಕೆ ವಹಿಸಬೇಕು. ಆದರೆ, ಇಲ್ಲಿ ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯದ ಸೂಚನೆ ಪಾಲಿಸಿದ ಸಿಬ್ಬಂದಿ ಬಿಸಾಡಿದ್ದಾರೆ.
 ಗ್ಲುಕೋಸ್, ಸೊಳ್ಳೆಗಳನ್ನು ನಿಯಂತ್ರಿಸುವ ಪೆವಿವಾಲ್ 10 ವಿಪಿ, ಸಲ್ಫೂರಿಕ್ ಅಸಿಡ್ ಸೇರಿದಂತೆ ಚಿಕಿತ್ಸೆಗೆ ಬಳಸುವ ನಾನಾ ತರಹದ ಔಷಧಿ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಹಾಕಿದ್ದು ಈ ಹಿಂದಿನ ದಿನ ಕಟ್ಟಡದ ಹಿಂಭಾಗದ ಆವರಣದಲ್ಲಿ ಅರ್ಧಂಬರ್ಧ ಸುಡಲಾಗಿದೆ. ಔಷಧಿಗಳು ಬಳಕೆಗೆ ಸೂಕ್ತವಲ್ಲ ಎನ್ನುವುದು ಕಂಡು ಬಂದರೆ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು ಔಷಧಿಗಳು ಮತ್ತು ಮಾತ್ರೆಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾದರೂ ಮೇಲ್ನೋಟಕ್ಕೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದುಕೊಂಡಿಲ್ಲ ಎನ್ನುವುದು ತಿಳಿದು ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರೆಗಳು ಮತ್ತು ಔಷಧಿಗಳು ದಾಸ್ತಾನಿಲ್ಲ ಎಂದು ಬಡ ರೋಗಿಗಳು ಮತ್ತು ಅವರ ಕುಟುಂಬಸ್ಥರನ್ನು ಖಾಸಗೀ ಮೆಡಿಕಲ್ ಸ್ಟೋರುಗಳಿಗೆ ಕಳುಹಿಸುವಂತಹುದು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ.
 ಜಿಪಂ ಸಾಮಾನ್ಯ ಸಭೆ ಮತ್ತು ತಾಪಂ ಸಾಮಾನ್ಯ ಸಭೆಗಳಲ್ಲಿ ವೈದ್ಯಾಧಿಕಾರಿಗಳು ಮಾತ್ರ ಔಷಧಿಗಳ ಕೊರತೆಯಿಲ್ಲ ಎಂಬ ಸಿದ್ಧ ಉತ್ತರವನ್ನು ಹೇಳುತ್ತಿರುತ್ತಾರೆ. ಬಡವರಿಗಾಗಿ ಸರ್ಕಾರ ಮುಂಜಾಗ್ರತೆಯಿಂದ ಔಷಧಿಗಳನ್ನು ಪೂರೈಕೆ ಮಾಡುತ್ತಿದ್ದರೂ ಸಮರ್ಪಕವಾಗಿ ಬಳಸಿಕೊಳ್ಳದೇ ಇರುವಂತಹ ಘಟನೆಗಳು ನಡೆಯುತ್ತಿವೆ.ಬಡರೋಗಿಗಳು ಔಷಧಿಗಳನ್ನು ತೆಗೆದುಕೊಳ್ಳಲು ಪರದಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗ ಲಕ್ಷಾಂತರ ರು. ಮೌಲ್ಯದ ಔಷಧಿಗಳನ್ನು ಪೋಲು ಮಾಡಿ ಇಲ್ಲಿ ಬಿಸಾಡಿರುವುದಕ್ಕೆ ಯಾರು ಹೊಣೆ ಹೊರುತ್ತಾರೆ. ಇದು ಬಡವರಿಗೆ ಮತ್ತು ಸರ್ಕಾರಕ್ಕೆ ಮಾಡಿರುವ ವಂಚನೆ. ಕೂಡಲೇ ಸಂಬಂಧಪಟ್ಟವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಟಿ  ಅಗಲಗುರ್ಕಿ ಚಂದ್ರಶೇಖರ್, ಕರವೇ ಪ್ರಧಾನ ಕಾರ್ಯದರ್ಶಿ.
ಕಠಿಣ ಕ್ರಮ ಕೈಗೊಳ್ಳಲು ತನಿಖೆ
ಚಿಕ್ಕಬಳ್ಳಾಪುರ: ಅವಧಿ ಮೀರಿದ ಔಷಧಿಗಳ ವಿಲೇವಾರಿ ಜೊತೆಗೆ ಉಪಯುಕ್ತ ಔಷಧಿಗಳನ್ನು ಬಿಸಾಡಿ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ ತಿಳಿಸಿದ್ದಾರೆ.
ನಗರದಿಂದ ನೂತನ ಜಿಲ್ಲಾಡಳಿತ ಭವನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವರ್ಗಾಯಿಸಲಾಗಿದೆ. ಅನುಪಯುಕ್ತ ವಸ್ತುಗಳನ್ನು ಬಿಸಾಡುವ ಸಂದರ್ಭದಲ್ಲಿ ಉಪಯುಕ್ತ ಔಷಧಿಗಳನ್ನು ಎಸೆದಿರುವ ಶಂಕೆಯಿದೆ. ಜನರಿಗಾಗಿ ಬಳಕೆ ಮಾಡಬೇಕಾದ ಔಷಧಿ ಮತ್ತು ಮಾತ್ರೆಗಳನ್ನು ಹೀಗೆ ನಿರ್ಲಕ್ಷ್ಯ ವಹಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದರ ಬಗ್ಗೆ ಮೊದಲು ವರದಿ ಪಡೆದುಕೊಳ್ಳಲು ತನಿಖೆ ನಡೆಸಲಾಗುವುದು. ಆ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.