ಸಿಎಂ ಹೇಳಿಕೆಗೆ ಹೋರಾಟಗಾರರ ಖಂಡನೆ
ಚಿಕ್ಕಬಳ್ಳಾಪುರ: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಜ.31 ರಂದು ನಡೆಸಿದ ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿರುವುದಕ್ಕೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿ, ಹೇಳಿಕೆ ಹಿಂಪಡೆಯುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀರಾವರಿ ಹೋರಾಟಗಾರರು, ಅನೇಕ ವರ್ಷಗಳಿಂದ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಡಾ. ಪರಮಶಿವಯ್ಯನವರ ವರದಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಕಳೆದ ವರ್ಷ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆಗ ಹೋರಾಟದ ರಾಜಕೀಯ ಪ್ರೇರಿತರವಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹಿಂದಕ್ಕೆ ಪಡೆಯಿರಿ: ಮುಖ್ಯಮಂತ್ರಿಗಳು ಒಬ್ಬ ವ್ಯಕ್ತಿಯ (ವೀರಪ್ಪ ಮೊಯ್ಲಿ) ಹಿತಾಸಕ್ತಿಗೆ ಆದ್ಯತೆ ಕೊಡುವುದರ ಬದಲು ಲಕ್ಷಾಂತರ ಜನರ ಹಿತ ಕಾಪಾಡಬೇಕು. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡಿದಾಗ ಅದಕ್ಕೆ ಅವಕಾಶ ಕೊಡಬಾರದು. ಎತ್ತಿನಹೊಳೆ ಯೋಜನೆಗೆ ಟೆಂಡರ್ ಕರೆಯದೇ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೇ ಡಿಪಿಆರ್ ತಯಾರಿಸದೇ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿರುವುದನ್ನು, ಪರಮಶಿವಯ್ಯನವರ ನೀರಾವರಿ ವರದಿಯ ಬಗ್ಗೆ ಗೊಂದಲ ಮೂಡಿಸುತ್ತಿರುವುದನ್ನು ವಿರೋಧಿಸಿ ಜ.31 ರಂದು ಪಕ್ಷಾತೀತ, ಜಾತ್ಯತೀತವಾಗಿ ಜಿಲ್ಲಾ ಬಂದ್ ನಡೆಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಯಿತು. ಇದಕ್ಕೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಬೇಕಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಪಕ್ಷದ ಸಚಿವರ ಮಾತನ್ನು ನಂಬಿ ಎತ್ತಿನಹೊಳೆ ಯೋಜನೆ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ನೀರಾವರಿ ಹೋರಾಟ ರಾಜಕೀಯ ಪ್ರೇರಿತ ಎಂದಿರುವುದು ಖಂಡನೀಯ ಎಂದರು.
ರಾಜಕೀಯ ಏನಿಲ್ಲ: ನಮ್ಮ ಉದ್ದೇಶ ಬಯಲು ಸೀಮೆಯ ಜಿಲ್ಲೆಯ ಜನರ ನೀರಿನ ದಾಹ ತೀರಿಸುವ ಡಾ. ಪರಮಶಿವಯ್ಯ ವರದಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸುವುದೇ ಹೊರತು ರಾಜಕೀಯ ಮಾಡುವುದಲ್ಲ. ನೀರಾವರಿ ಹೋರಾಟದಲ್ಲಿ ರಾಜಕೀಯ ಮಾತಿನ ಪ್ರಶ್ನೆಯೇ ಇಲ್ಲ. ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಯಾವುದೇ ಪಕ್ಷದ ಸರ್ಕಾರವಿರಲಿ ಅದನ್ನು ಬೆಂಬಲಿಸುತ್ತೇವೆ. ಆದರೆ, ಜನರ ದಿಕ್ಕು ತಪ್ಪಿಸುವ ಸಲುವಾಗಿ ಸುಳ್ಳು ಭರವಸೆ ನೀಡಿದರೆ ಹೋರಾಟ ಮುಂದುವರೆಸದೇ ಬಿಡುವುದಿಲ್ಲ ಎಂದ ಅವರು, ಎತ್ತಿನಹೊಳೆ ಯೋಜನೆಯ ಮೂಲಕ 44 ಟಿಎಂಸಿ ನೀರನ್ನು ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳುತ್ತಿದ್ದಾರೆ. ಆದರೆ, ಜನರಿಗೆ ವಾಸ್ತವಾಂಶ ತಿಳಿಸಬೇಕು. ಜನರ ಗೊಂದಲ ದೂರ ಮಾಡಿ ಪ್ರಾಮಾಣಿಕವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಬೇಕೆಂದರು.
ಡಾ. ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿ ತಾಂತ್ರಿಕ ವರದಿ ನೀಡಿಲ್ಲ ಎಂದು ಸುಳ್ಳುವುದು ಹೇಳುವುದು. ಪರಮಶಿವಯ್ಯನವರ ವರದಿಯನ್ನು ಮೂಲೆಗುಂಪು ಮಾಡಲು ಅವೈಜ್ಞಾನಿಕವಾಗಿ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದು ರಾಜಕೀಯ. ಈ ಹಿಂದೆ ಕೆ.ಸಿ. ರೆಡ್ಡಿ ನೀರಾವರಿ ವರದಿ ಅನುಷ್ಠಾನಗೊಳಿಸಲು ಮುಂದಾದಾಗಲೂ ನಾವು ಪ್ರತಿಭಟನೆ ನಡೆಸಿದ್ದು ಈಗ ಎತ್ತಿನಹೊಳೆ ಯೋಜನೆಗೂ ವಿರೋಧ ವ್ಯಕ್ತಪಡಿಸಲಾಗುತ್ತದೆ ಎಂದರು.
ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಅವರೇ ಎತ್ತಿನಹೊಳೆ ಯೋಜನೆ ಉದ್ದೇಶ ಕಮೀಷನ್ ದಂಧೆ ಎಂದು ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಅವರ ಮಾತಿಗಾದರೂ ಬೆಲೆ ಇಲ್ಲವೇ ಎಂದು ಟೀಕಿಸಿದ್ದಾರೆ. ನೀರಾವರಿ ಹೋರಾಟಗಾರ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ರಾಜಾಕಾಂತ್, ಎಸ್. ಲಕ್ಷ್ಮಯ್ಯ, ಸೊಣ್ಣೇಗೌಡ, ಲಕ್ಷ್ಮೀನಾರಾಯಣ್, ಭೈರೇಗೌಡ, ಚಲಪತಿ, ಸುಷ್ಮಾ ಶ್ರೀನಿವಾಸ್, ಹರೀಶ್, ಸು.ಧಾ ವೆಂಕಟೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

