ಕೋಲಾರ

ವಿದ್ಯಾರ್ಥಿ ನಾಪತ್ತೆ: ದೂರು ದಾಖಲು

Published On :

ಕೋಲಾರ: ನಗರದ ಕೀಲುಕೋಟೆ ಬಡಾವಣೆಯ ನಿವಾಸಿ ಷೇಕ್ ಬಾಬಾಜಾನ್ ಎಂಬವರ ಮಗ ಷೇಕ್ ಸಗೀರ್ ಅಹ್ಮದ್ ಜ.31ರಂದು ಕಾಣಿಯಾಗಿದ್ದು ಈವರೆಗೆ ಅವನ ಸುಳಿವು ಪತ್ತೆಯಾಗದ ಕಾರಣ ಕೋಲಾರ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ನಗರದ ಸುವರ್ಣ ಸೆಂಟ್ರಲ್ ಶಾಲೆಯಲ್ಲಿ 9 ನೇ ತರಗತಿ ವ್ಯಾಸಾಂಗ ಮಾಡುತಿದ್ದ ಷೇಕ್ ಸಗೀರ್ ಅಹಮ್ಮದ್ ಕೆಲ ದಿನಗಳಿಂದ ಶಾಲೆಗೆ ಗೈರುಹಾಜರಾಗಿದ್ದು ಶಾಲೆಯ ಮುಖ್ಯಸ್ಥರು ದೂರವಾಣಿ ಮೂಲಕ ಷೇಕ್ ಸಗೀರ್ ಅಹ್ಮದ್‌ರ ತಂದೆಗೆ ತಿಳಿಸಿದ್ದರು. ಈ ಬಗ್ಗೆ ತಂದೆ ಮಗನನ್ನು ಪ್ರಶ್ನಿಸಿದ್ದರು. ಇದಾದ ಬಳಿಕ ಷೇಕ್ ಸಗೀರ್ ಅಹ್ಮದ್ ತನ್ನ ತಾಯಿಯ ಬಳಿ ನನಗೆ ಮೈಯಲ್ಲಿ  ಹುಷಾರಿಲ್ಲ, ಆಸ್ಪತ್ರೆಗೆ ಹೋಗಿ ಟೋಕನ್ ತೆಗೆದುಕೊಂಡು ಬರುತ್ತೇನೆ ಎಂದು ಹೋದವನು ಐದಾರು ದಿನ ಕಳೆದರೂ ಮನೆಗೆ ಬಂದಿಲ್ಲವೆಂದು ತಿಳಿಸಿದ್ದಾರೆ. ಮಾಹಿತಿ ಸಿಕ್ಕರೆ ಕೂಡಲೆ ನಗರ ಪೊಲೀಸ್ ಠಾಣೆ ಅಥವಾ ಷೇಕ್ ಬಾಬಾಜಾನ್-ಲ 9972462738 ತಿಳಿಸಲು ಕೋರಲಾಗಿದೆ.
ಕೆಜಿಎಫ್: ಮುಕ್ತ ಸಂಚಾರದ ಬಗ್ಗೆ ಮಾಹಿತಿ
ಕೆಜಿಎಫ್: ನಗರ ಭಾಗದ ಪ್ರಮುಖ ರಸ್ತೆಗಳಾದ ಪ್ರಿಚರ್ಡ್‌ರಸ್ತೆ, ಗೀತಾ ರಸ್ತೆ, ಬಸ್ ನಿಲ್ದಾಣ, ಎಂ.ಜಿ. ಮಾರುಕಟ್ಟೆ, ಗಾಂಧಿ ವೃತ್ತ ಸೇರಿದಂತೆ ವಿವಿಧ ರಸ್ತೆಗಳ ಬದಿ ವ್ಯಾಪಾರಿಗಳು ರಸ್ತೆ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ವ್ಯಾಪಾರ ನಡೆಸಬಾರದು ಎಂದು ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ. ವಿವೇಕಾನಂದ ತಿಳಿಸಿದರು.
ಕೆಜಿಎಫ್ ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ವಾಹನ ನಿಲುಗಡೆ, ಪಾರ್ಕಿಗ್ ವ್ಯವಸ್ಥೆ, ಆಟೋ ಚಾಲಕರಿಗೆ ನಿರ್ದಿಷ್ಟ ನಿಲ್ದಾಣದ ಬಗ್ಗೆ ಹಲವು ನಿಯಮಗಳನ್ನು ರೂಪಿಸಿದ್ದು, ಸಾರ್ವಜನಿಕರು ನಿಯಮ ಮೀರಿದರೆ ಕಾನೂನನ್ವಯ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ವೃತ್ತ ನಿರೀಕ್ಷಕ ಪವನ್‌ಕುಮಾರ್, ಪಿಎಸ್‌ಐಗಳಾದ ಎಲ್. ಆಂಜಪ್ಪ, ಸುರೇಶ್ ಇದ್ದರು.
ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆ ಸಮಯ ಬದಲಾವಣೆ
ಕೋಲಾರ: ಜಿಲ್ಲಾದ್ಯಂತ ಫೆ.8 ರಂದು ಬೆಳಗ್ಗೆ 9 ಗಂಟೆಯಿಂದ 12.15 ರವರೆಗೂ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ 2ಗಂಟೆಯಿಂದ 5.15 ರವರೆಗೆ ಬದಲಿಸಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ಸೂಚಿಸಿದ್ದಾರೆ. ಫೆ.8 ರಂದು ಬೆಳಗ್ಗೆ9 ಗಂಟೆಯಿಂದ ರಾಜ್ಯಾದ್ಯಂತ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆ ನಡೆಸುತ್ತಿರುವುದರಿಂದಾಗಿ ಈ ದಿನ ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿಯ ಜೀವಶಾಸ್ತ್ರ, ಲೆಕ್ಕಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳ ಪರೀಕ್ಷೆಯನ್ನು ಇದೇ ದಿನ ಮಧ್ಯಾಹ್ನ 2 ಗಂಟೆಯಿಂದ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೋತೇನಹಳ್ಳಿ ಗ್ರಾಪಂ ಅಧ್ಯಕ್ಷರ ಅವಿಶ್ವಾಸಕ್ಕೆ ಸೋಲು
ಬಂಗಾರಪೇಟೆ: ಆಲಂಬಾಡಿ ಜೋತೇನಹಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ 11ಮಂದಿ ಸದಸ್ಯರು ಮಂಡಿಸಿದ್ದ ಅವಿಶ್ವಾಸಕ್ಕೆ ಸೋಲುಂಟಾಗಿದೆ. ಅವಿಶ್ವಾಸ ಮಂಡಿಸಲು ಸಹಿಹಾಕಿದ್ದ ಯಾವೊಬ್ಬ ಸದಸ್ಯರು ಅವಿಶ್ವಾಸ ನಿರ್ಣಯ ಸಭೆಗೆ ಬಂದಿರಲಿಲ್ಲ. ಕಳೆದ ತಿಂಗಳು 21 ರಂದು ಅಧ್ಯಕ್ಷ ಜುಂಜನಹಳ್ಳಿ ನಾರಾಯಣಸ್ವಾಮಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ಏಕಪಕ್ಷಿಯ ನಿರ್ಣಯ ಕೈಗೊಂಡಿರುವುದರಿಂದ ಗ್ರಾಮಗಳಲ್ಲಿ ಅಭಿವೃದ್ದಿ ನೆನೆಗುದಿದೆ ಬಿದ್ದಿದೆ ಎಂದು ಅಧ್ಯಕ್ಷರ ವರ್ತನೆ ವಿರುದ್ಧ 15 ಸದಸ್ಯರ ಪೈಕಿ 11 ಸದಸ್ಯರು ಅವಿಶ್ವಾಸ ಮಂಡಿಸಿ ಕೋಲಾರ ಉಪ ವಿಭಾಗಾಧಿಕಾರಿ ಮಂಜುನಾಥ್‌ರವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಬುಧವಾರ ಸಂಜೆ ಅವಿಶ್ವಾಸ ಸಭೆ ಕರೆಯಲಾಗಿತ್ತು. ಒಂದು ಗಂಟೆ ಕಾದರು 15ಸದಸ್ಯರಲ್ಲಿ ಯಾವೊಬ್ಬರೂ ಸಭೆಗೆ ಬರಲಿಲ್ಲ. ಎಲ್ಲರೂ ಗೈರು ಹಾಜರಾಗಿದ್ದರಿಂದ ಹಾಲಿ ಅಧ್ಯಕ್ಷರೇ ಮುಂದುವರೆಯುವರು ಎಂದು ಎಸಿ ಮಂಜುನಾಥ್ ಘೋಷಣೆ ಮಾಡಿ ಹೋದರು. ಇದರಿಂದ ಮತ್ತೆ ಪಂಚಾಯ್ತಿ ಬಿಜೆಪಿ ಮಯವಾಗಿದೆ. ಅವಿಶ್ವಾಸಕ್ಕೆ ಸೋಲಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟ್ಟಣದ ತಾಪಂ ಕಚೇರಿ ಮುಂದೆ ಜಮಾಯಿಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನಂತರ ಮಾತನಾಡಿದ ಅಧ್ಯಕ್ಷ ನಾರಾಯಣಸ್ವಾಮಿ, ಕಾಂಗ್ರೆಸ್‌ನವರು ಪಿತೂರಿ ನಡೆಸಿ ಅವಿಶ್ವಾಸ ಮಂಡಿಸಿದರು. ಆದರೆ ಜನಪರ ಆಡಳಿತಕ್ಕೆ ಸದಸ್ಯರು ಕೈ ಹಿಡಿಯುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಎಚ್ಚರಿಕೆ ನೀಡಿದ್ದಾರೆಂದರು. ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಮಾರ್ಕಂಡೇಗೌಡ, ತಾಪಂ ಅಧ್ಯಕ್ಷ ರೇಣುಕಾ, ಉಪಾಧ್ಯಕ್ಷ ಸಂಪಂಗಿರೆಡ್ಡಿ, ಅಮರೇಶ್, ಮೋಹನ್ ಮೂರ್ತಿ, ಹನುಮಪ್ಪ ಇದ್ದರು.
140 ಮನೆಗಳು ಜನ ಬಳಕೆಗೆ
ಶಿಡ್ಲಘಟ್ಟ: ವಸತಿ ಸೌಲಭ್ಯಗಳಿಲ್ಲದ ನೂರಾರು ಕುಟುಂಬಗಳಿಗೆ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣ ಮಾಡಿರುವ ಮನೆಗಳು ಲಭಿಸಿರುವುದರಿಂದ ಆಶ್ರಯ ಬಡಾವಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಿರ್ಮಾಣವಾಗಿರುವ 140 ಮನೆಗಳಿಗೆ ವಾಸಕ್ಕೆ ತೆರಳಿರುವವರ ಮುಖದಲ್ಲಿ ಸಂತೋಷ ಎದ್ದು ಕಾಣುತ್ತಿದ್ದು, ಕಳೆದ ಮೂರ್ನಾಲ್ಕು ದಶಕಗಳಿಂದ ರೇಷ್ಮೆಯಿಂದಲೇ ಜೀವನ ನಡೆಸಿ, ಕಷ್ಟಕರ ಜೀವನ ನಡೆಸುತ್ತಿದ್ದ ಜನತೆ ನೆಮ್ಮದಿಯಿಂದ ಜೀವನ ಮಾಡುವಂತಾಗಿದೆ.
ಬಡಾವಣೆಯಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಾಣ ಮಾಡಿ, ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದರೂ ಕುಡಿಯುವ ನೀರಿನ ಸೌಕರ್ಯವಿಲ್ಲ, ವಿದ್ಯುತ್ ದೀಪ, ಶಾಲೆ, ಅಂಗನವಾಡಿ ಸ್ವಚ್ಛಗೊಳಿಸಿಲ್ಲ. ಆದರೂ ಇದೇ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಮಾಲೂರು; ಇಲ್ಲಿನ ಎಪಿಎಂಸಿ ಅಧ್ಯಕ್ಷ ಮಹೇಶ್‌ಬಾಬು ತಮ್ಮ ಬೆಂಬಲಿಗರೂಡನೆ ಕಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸುಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಮುನಿಯಪ್ಪ, ಮಹೇಶ್ ಆಗಮನದಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದರು. ಇದೇ ಸಂಧರ್ಭದಲ್ಲಿ ಹುಂಗೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪುಟ್ಟಣ, ನಾರಾಯಣಸ್ವಾಮಿ, ದಸ್ತುಸಾಬ್, ಜಾಕೀರ್ ಖಾನ್ ಸೇರಿದಂತೆ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಬ್ಲಾಕ್ ಅಧ್ಯಕ್ಷ ಮುನಿರಾಜು, ಚೆನ್ನರಾಯಪ್ಪ, ರಾಜಣ್ಣ ಇದ್ದರು.
28 ವರ್ಷಗಳ ನಂತರ ಬದಲಾವಣೆ
ಬಾಗೇಪಲ್ಲಿ: ಕಳೆದ 28 ವರ್ಷಗಳಿಂದ ತಾಲೂಕಿನ ಆಚೇಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಒಬ್ಬ ವ್ಯಕ್ತಿಯ ಕಪಿ ಮುಷ್ಠಿಯಲ್ಲಿದ್ದು ಇದೀಗ ಜನರು ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ ಎಂದು ಗ್ರಾಮದ ಮುಖಂಡ ಎನ್. ಚೌಡರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ನೂತನವಾಗಿ ಒಂದು ಬಣಕ್ಕೆ ಸೇರಿರುವ 7 ಜನ ಸದಸ್ಯರು ಆಯ್ಕೆಯಾಗುವ ಮೂಲಕ ಹಾಲಿ ಅಧ್ಯಕ್ಷ ಎನ್. ಪ್ರಭಾಕರರೆಡ್ಡಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಕಳೆದ ಸುಮಾರು 28 ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸುವಲ್ಲಿ ಹಾಲಿ ಅಧ್ಯಕ್ಷರು ಸಂಪೂರ್ಣ ವಿಫಲರಾಗಿದ್ದರು ಎಂದು ಆರೋಪಿಸಿದರು.
ಚಿಕ್ಕ ಪೂಜಪ್ಪ ಮಾತನಾಡಿ, ಆಚೇಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಟ್ಟು 11 ಸ್ಥಾನಗಳಿದ್ದು ಇದರಲ್ಲಿ ನಮ್ಮ ಬಣದ 7 ಮಂದಿ ಹಾಗೂ ಹಾಲಿ ಅಧ್ಯಕ್ಷರ ಬಣದ 4 ಮಂದಿ ಸದಸ್ಯರನ್ನು ಷೇರುದಾರರು ಆಯ್ಕೆ ಮಾಡಿದ್ದಾರೆ ಎಂದರು. ಬಿ.ವಿ ರಾಮಿರೆಡ್ಡಿ, ನೂತನ ಸದಸ್ಯ ವೆಂಕಟರಾಯಪ್ಪ, ಜಯರಾಮರೆಡ್ಡಿ, ಲಕ್ಷ್ಮೀನರಸಿಂಹಪ್ಪ, ಆವುಲರೆಡ್ಡಿ, ಈಶ್ವರಪ್ಪ ಇದ್ದರು.
ವಿವಿಧ ಕಾಮಗಾರಿಗೆ ಶಾಸಕರಿಂದ ಚಾಲನೆ
ಕೆಜಿಎಫ್: ನಗರದ ವಿವಿಧ ಬಡಾವಣೆ ಸಾರ್ವಜನಿಕರ ಬೇಡಿಕೆಯಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದು, ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕಿ ವೈ.ರಾಮಕ್ಕ ಹೇಳಿದರು.
ನಗರದ ಕೆನಡೀಸ್ ತೆಲಗು ಲೈನ್‌ನಲ್ಲಿ ನಗರೋತ್ಥಾನ ಯೋಜನೆಯಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಶ್ರೀಘ್ರದಲ್ಲಿ ಅಶೋಕ್‌ನಗರ, ಉರಿಗಾಂ ರೈಲ್ವೆ ರಸ್ತೆ ಸೇರಿದಂತೆ ಇತರೆ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತದೆ ಎಂದರು. ನಗರೋತ್ಥಾನ ಯೋಜನೆಯಡಿ ಸುಮಾರು 20 ಲಕ್ಷ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ಶಾಸಕಿ ವೈ. ರಾಮಕ್ಕ ನೆರವೇರಿಸಿದರು. ಮಾಜಿ ಶಾಸಕ ವೈ. ಸಂಪಂಗಿ, ಬಿಜೆಪಿ ನಗರಾಧ್ಯಕ್ಷ ಸುರೇಶ್‌ನಾರಾಯಣ, ಜಿಲ್ಲಾ ಉಪಾಧ್ಯಕ್ಷ ಮುನಿಸ್ವಾಮಿರೆಡ್ಡಿ, ಉರಿಗಾಂ ಠಾಣಾ ಪಿಎಸ್‌ಐ ಮಾರ್ಕಾಂಡಪ್ಪ, ಯಶ್ವಂತ್‌ರಾಜ್ ಇದ್ದರು.
ದೊಡ್ಡವಲ್ಲಭಿ ಗ್ರಾಮದಲ್ಲಿ ಬಾವಿ ನೀರು ಸೇದಲು ಇದ್ದ ಅಡಚಣೆ ನಿವಾರಣೆ
ಕೋಲಾರ: ತಾಲೂಕಿನ ದೊಡ್ಡವಲ್ಲಭಿ ಗ್ರಾಮದಲ್ಲಿ ಬಾವಿ ನೀರು ಸೇದಲು ಇದ್ದ ಅಡಚಣೆಯನ್ನು ನಿವಾರಣೆ ಮಾಡುವಲ್ಲಿ ತಹಸೀಲ್ದಾರ್ ನಾಗರಾಜ್ ಸಫಲರಾಗಿದ್ದಾರೆ.
ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ಅಂಬೇಡ್ಕರ್ ಚಿತ್ರಕ್ಕೆ ಅಪಮಾನ ಮಾಡಿದ್ದ ಹಿನ್ನೆಲೆಯಲ್ಲಿ ಸಮಸ್ಯೆ ನಿವಾರಣೆ ಮಾಡಲು ಗ್ರಾಮಕ್ಕೆ ತೆರಳಿದ್ದ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ವೇಳೆ ದಲಿತರು ಬಾವಿ ನೀರು ಸೇದಲು ಹಾಗೂ ದೇವಾಲಯಕ್ಕೆ ಹೋಗಲು ಮೇಲ್ಜಾತಿಯವರು ಅವಕಾಶ ನೀಡುತ್ತಿಲ್ಲವೆಂದು ದೂರಿದರು.
ಇದು ಹೇಗೆ ಮುಂದುವರೆದರೆ ಗ್ರಾಮದಲ್ಲಿ ಶಾಂತಿ ಉಳಿಯದು ಎಂದು ತಹಸೀಲ್ದಾರ್ ನಾಗರಾಜ್ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸೌಹಾರ್ದಯುತ ಮಾತುಕತೆ ಮೂಲಕ ಸಮಸ್ಯೆ ನಿವಾರಣೆ ಮಾಡಿದ ನಂತರ ದಲಿತರು ಗ್ರಾಮದ ಬಾವಿಯಿಂದ ನೀರು ಸೇದಿಕೊಂಡರಲ್ಲದೆ, ಮುಜರಾಯಿ ಇಲಾಖೆಗೆ ಸೇರಿದ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ದಲಿತರು ಪ್ರವೇಶ ಮಾಡುವಂತೆ ಮಾಡಿ ಗ್ರಾಮದಲ್ಲಿ ಇದ್ದ ಅಸಮಾಧಾನ, ದುಗುಡ ನಿವಾರಣೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.