ಕೋಲಾರ

ವೃದ್ಧಾಶ್ರಮಗಳು ಮುಪ್ಪಿನಲ್ಲಿ ಆಶಾ ದೀಪ

Published On :

ಬಂಗಾರಪೇಟೆ: ಮುಪ್ಪಿನಲ್ಲಿರುವ ಪೋಷಕರನ್ನು ಮಕ್ಕಳು ನಿರ್ಲಕ್ಷ್ಯ ಮಾಡಿದಾಗ ವೃದ್ಧಾಶ್ರಮಗಳು ಅವರ ಬಾಳಿಗೆ ಆಶಾ ದೀಪವಾಗಲಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಬಾವರಹಳ್ಳಿ ಧಮ್ಮ ವಿಹಾರ ಟ್ರಸ್ಟ್‌ವತಿಯಿಂದ ನೂತನ ವೃದ್ಧಾಶ್ರಮದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿ, ಕೆಲವು ವೃದ್ಧಾಶ್ರಮಗಳು ಕೇವಲ ಪ್ರಚಾರಕ್ಕೆ ಹಾಗೂ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುವರು ಇಂತಹ ಧೋರಣೆಗಳಿಂದ ಸಂಸ್ಥೆಗಳು ಹೊರ ಬಂದು ವೃದ್ಧರ ಪಾಲನೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಬೇಕೆಂದು ಕೋರಿದರು.
ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ವರ್ತೂರು ಪ್ರಕಾಶ್, ಆರೋಗ್ಯದ ಕಡೆ ಒಲವನ್ನು ತೋರಿ ಮನುಷ್ಯ ಜೀವನರನ್ನು ಸಾರ್ಥಕಪಡಿಸಿಕೊಳ್ಳಿ ಎಂದರು. ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ವೃದ್ಧಾಶ್ರಮ ನಿರ್ಮಾಣಕ್ಕೆ 10 ಸಾವಿರ ದೇಣಿಗೆ ನೀಡಿದರು. ಇದೇ ವೇಳೆ ಧಮ್ಮ ವಿಹಾರ ಟ್ರಸ್ಟ್ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಕಾರ್ಯದರ್ಶಿ ಕೆ.ವಿ. ಸುರೇಂದ್ರ ಕುಮಾರ್, ಖಜಾಂಚಿ ಪ್ರಕಾಶ್, ನಿರ್ದೇಶಕರಾಗಿ ಗೋವಿಂದರಾಜು, ವೆಂಕಟಸ್ವಾಮಿ, ಜೈಜೇಗೌಡ, ಸೋಮಸುಂದರ್, ಶ್ರೀರಾಮರೆಡ್ಡಿರನ್ನು ಆಯ್ಕೆಯಾದರು.
ಅಪಘಾತ; ಮಹಿಳೆ ಸಾವು
ಚಿಕ್ಕಬಳ್ಳಾಪುರ: ಆಂಧ್ರದಿಂದ ಬೆಂಗಳೂರು ಕಡೆ ಹೊರಟಿದ್ದ ಟೆಂಪೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮೃತಪಟ್ಟು ಮೂವರು ತೀವ್ರವಾಗಿ ಗಾಯಗೊಂಡಿರುವ ರ್ಘಟನೆ ನಗರದ ಹೊರ ವಲಯದ ಹೂನೇಗಲ್ ಬಳಿ ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ನಡೆದಿದೆ.
ಇದೇ ಸಂದರ್ಭದಲ್ಲಿ ಘಟನೆಯ ಸ್ಥಳಕ್ಕೆ ತಡವಾಗಿ ಬಂತು ಎಂದು ಆಕ್ರೋಶಗೊಂಡ ಕೆಲವರು 108 ಆ್ಯಂಬುಲೆನ್ಸ್ ವಾಹನಕ್ಕೆ ಕಲ್ಲು ತೂರಿ ಪ್ರತಿಭಟನೆ ನಡೆಸಿದರಿಂದ ಕೆಲ ಸಮಯ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಬೇಕಾಯಿತು. ತಾಲೂಕಿನ ಹೂನೇಗಲ್ ಗ್ರಾಮದ ರಘುನಾಥ ಮೂರ್ತಿ ಕುಟುಂಬದವರು ಸಮೀಪ ನಡೆಯುತ್ತಿದ್ದ ಚಿತ್ರಾವತಿ ಜಾತ್ರೆ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಕಾರಿನಲ್ಲಿ ವಾಪಾಸ್ಸಾಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 7 ರ ತಿರುವಿನಲ್ಲಿ ವಾಹನ ರಸ್ತೆ ದಾಟುತ್ತಿದ್ದಾಗ ಕಲ್ಲಂಗಡಿ ಹಣ್ಣನ್ನು ತುಂಬಿಕೊಂಡು ಬೆಂಗಳೂರಿಗೆ ಅತಿ ವೇಗವಾಗಿ ಹೊರಟಿದ್ದ ಟೆಂಪೋ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಅಪಘಾತ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದು ಆ ಸಂದರ್ಭದಲ್ಲಿ ಬೇಗ ದೂರವಾಣಿ ಕರೆ ಮಾಡಿ ತಿಳಿಸಿದರೂ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ವಾಹನ ಬಂದಿಲ್ಲ ಎಂದು ಆರೋಪಿಸಿ ಕೆಲವರು ಪ್ರತಿಭಟನೆ ನಡೆಸಿದರಲ್ಲದೇ ಸ್ಥಳಕ್ಕೆ ಬಂದ ಆ್ಯಂಬುಲೆನ್ಸ್ ಮೇಲೆ ಕಲ್ಲು ತೂರಿ ವಾಹನವನ್ನು ಜಖಂಗೊಳಿಸಲು ಮುಂದಾಗಿದ್ದು ಸ್ಥಳದಲ್ಲಿಯೇ ಇದ್ದ ಪೊಲೀಸರ ಮಾತಿನಿಂದ ಸಮಾಧಾನಗೊಂಡಿಲ್ಲ. ಇದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.
ಈ ನಡುವೆ ಗಾಯಾಳುಗಳು ಗಂಭೀರವಾಗಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಯಮುನಾ ( 25) ಎಂಬವರು ಮೃತಪಟ್ಟಿದ್ದಾರೆ. ಅನಂತಮ್ಮ, ತೇಜ, ಹರೀಶ್ ಎಂಬವರು ತೀವ್ರ ಗಾಯಗೊಂಡಿದ್ದು ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಟ್ರ್ಯಾಕ್ಟರ್ ಪಲ್ಟಿ; 10 ಮಂದಿಗೆ ಗಾಯ
ಚಿಂತಾಮಣಿ: ಕಲ್ಲು ಚಪ್ಪಡಿ ತುಂಬಿದ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ 10 ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಾಯಗಳಾಗಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಎನ್. ಕೊತ್ತೂರು ಬಳಿ ಬುಧವಾರನಡೆದಿದೆ. ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಹಿರಣಪಲ್ಲಿ ಗ್ರಾಮದ ಶಿವ, ನಾಗೇಶ್, ನರಸಿಂಹಮೂರ್ತಿ, ಬಾಲು, ತಿರುಮಲೇಷ, ಅಶೋಕ್, ವೆಂಕಟೇಶಮೂರ್ತಿ, ರಾಮಕೃಷ್ಣ ಸೇರಿದಂತೆ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಾಯಗಳಾಗಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರ್‌ಟಿಇ ಸಮರ್ಪಕ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಕೆಜಿಎಫ್: ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿಕ್ಷಣ ಹಕ್ಕು ಕಾಯ್ದೆ ಸರಿಪಡಿಸಬೇಕು ಎಂದು ಒತ್ತಾಯಿಸಿ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಿದರು.
ಕೇಂದ್ರ ಸರ್ಕಾರ ಮಹತ್ವದ ಶಿಕ್ಷಣ ಹಕ್ಕು ಕಾಯ್ದೆ ಯೋಜನೆ ಜಾರಿಗೊಳಿಸಿದೆ. ಆದರೆ ರಾಜ್ಯದಲ್ಲಿ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರದ ಆದೇಶದಂತೆ ಎಲ್ಲ ತಾಲೂಕುಗಳ ಖಾಸಗಿ ಶಾಲೆಗಳಲ್ಲಿ 2014ನೇ ಸಾಲಿನ ದಾಖಲಾತಿ ಅರ್ಜಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಕೃಷ್ಣಮೂರ್ತಿ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಮಹಿಳಾ ಉಪಾಧ್ಯಕ್ಷೆ ರೂಪಕಲಾ ಶಶಿಧರ್, ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಾಹಿದ್ ಶಾಜ್ಜಾದಾ, ನಗರ ಘಟಕದ ಅಧ್ಯಕ್ಷ ಜರ್ಮನ್‌ಜೂಲಿಯಸ್, ರಾಜ್ಯ ಯುವ ನಾಯಕ ಅಮಿತ್‌ರಾಜ್, ಜಿಲ್ಲಾ ಕಾರ್ಯದರ್ಶಿ ಸುಬಾಷ್ ಇದ್ದರು.
ರಕ್ತದಾನ ಮಾಡಲು ಯುವಕರಿಗೆ ಮನವಿ
ಕೋಲಾರ: ಯುವಕರು ರಕ್ತದಾನದ ಮಹತ್ವ ಅರಿತು ರಕ್ತದ ಕೊರತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡಿ ವ್ಯಕ್ತಿಯ ಪ್ರಾಣ ಉಳಿಸಬೇಕೆಂದು  ಜಿಪಂ ಮಾಜಿ ಸದಸ್ಯ ದಳಸನೂರು ಗೋಪಾಲಕೃಷ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯು ದಿವಂಗತ ಮುನಿವೆಂಕಟಮ್ಮ ಶ್ರೀನಿವಾಸಗೌಡ, ಶಿವಣ್ಣ, ಈರಪ್ಪ ನಾಗರತ್ನಮ್ಮ ಇವರ ಸ್ಮರಣಾರ್ಥ ಏರ್ಪಡಿಸಿದ್ದ ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ಯುವರಿಗೆ ಯಾವುದೇ ರೀತಿಯ ತೊಂದರೆ ಇಲ್ಲವೆಂದರು.
ಜಿಲ್ಲಾ ಆರೋಗ್ಯಾಧಿಕಾರಿ ಫಯಾಜ್ ಖಾನ್ ಮಾತನಾಡಿ, ಆರೋಗ್ಯವಂತ ಯುವಕ ಯುವತಿಯರು 18 ರಿಂದ 60 ವರ್ಷದೊಳಗಿನ ಹೆಣ್ಣು ಗಂಡೆಂಬ ಬೇಧಭಾವವಿಲ್ಲದೆ ಎಲ್ಲರೂ ರಕ್ತದಾನ ಮಾಡಬಹುದು.ಗಂಡು ಮೂರು ತಿಂಗಳಿಗೊಮ್ಮೆ ಹಾಗೂ ಹೆಣ್ಣು ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಹೃದಯಾಘಾತಗಳು ಕಡಿಮೆಯಾಗುತ್ತವೆ ಎಂದರು. ಗಾಂಡ್ಲಹಳ್ಳಿ ವೆಂಕಟಾಚಲಪತಿ, ಶಶಿಕುಮಾರ್, ರಾಮಚಂದ್ರೇಗೌಡ, ವೀರಭದ್ರಯ್ಯ,  ಎಸ್. ಸತೀಶ್ ಅಬ್ಬಣಿ ಶಿವಪ್ಪ ಇದ್ದರು.
ಖಾಸಗಿ ಶಾಲೆ ರಸ್ತೆ ಅತಿಕ್ರಮ; ಪರಿಶೀಲನೆ
ಕೆಜಿಎಫ್: ಸಾರ್ವಜನಿಕ ರಸ್ತೆಯನ್ನು ಭಾರತ್‌ನಗರದ ಖಾಸಗಿ ಶಾಲೆಯೊಂದು ಅತಿಕ್ರಮಿಸಿರುವ ಬಗ್ಗೆ ಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ರಸ್ತೆ ತೆರವುಗೊಳಿಸಲು ಸ್ಥಳಕ್ಕಾಗಮಿಸಿದ ಬಂಗಾರಪೇಟೆ ತಹಸೀಲ್ದಾರ್ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ನ್ಯಾಯಾಲಯದ ತಡೆಯಾಜ್ಞೆ ಇದ್ದ ಕಾರಣ ವಾಪಸ್ ಆದ ಘಟನೆ ಬೆಮೆಲ್‌ನಗರದ ವಿದ್ಯಾನಗರದಲ್ಲಿ ನಡೆದಿದೆ. ವಿದ್ಯಾನಗರದ ಜೈನ್ ಶಾಲೆಯ ಆಡಳಿತ ಮಂಡಳಿ ಬಡಾವಣೆಯ ರಸ್ತೆಯನ್ನು ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿದ್ದರು. ಈ ಹಿಂದೆ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅತಿಕ್ರಮ ತಡೆಯಲು ಕಾಂಪೌಂಡ್ ಒಡೆದುಹಾಕಿದ್ದರು.ಮತ್ತೆ ಅದೇ ರೀತಿ ನಿರ್ಮಿಸಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿರುವ ಬಗ್ಗೆ ತಹಸೀಲ್ದಾರ್ ಅವರಿಗೆ ದೂರನ್ನು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿ ತಹಸೀಲ್ದಾರ್ ಉಷಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸ್. ಭಟ್ ಹಾಗೂ ಸಿಬ್ಬಂದಿ ರಸ್ತೆ ಅತಿಕ್ರಮಿಸಿರುವುದು ಖಚಿತವಾಗಿದ್ದರಿಂದ ಜೆಸಿಬಿ ತರಿಸಿ ತೆರವುಗೊಳಿಸುವಂತೆ ಆದೇಶಿಸಿದ್ದರು. ಆದರೆ ಗೋಡೆ ಮೇಲೆ ಬರೆದಿದ್ದ ನ್ಯಾಯಾಲಯದ ಮೊಕದ್ದಮೆ ಸಂಖ್ಯೆ ನೋಡಿ ಸುಮ್ಮನಾದರು.
ನಗರಾಭಿವೃದ್ಧಿ ಪ್ರಾಧಿಕಾರ ಮಾಡಿರುವ ಎಡವಟ್ಟಿನಿಂದ ಖಾಸಗಿ ಶಾಲೆ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಕ್ಕೆ ಮುಂದಾಗಿದ್ದು ನ್ಯಾಯಾಲಯದಲ್ಲಿ ದಾಖಲೆ ನೀಡಲು ಕೆಯುಡಿಎ ವಿಫಲವಾಗಿರುವುದು ಕಂಡು ಬಂದಿದೆ. ಕೂಡಲೇ ಪಿಡಿಒ ಅವರನ್ನು ನಿಯೋಜನೆ ಮಾಡಿ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸುವುದಾಗಿ ತಹಸೀಲ್ದಾರ್ ಉಷಾ ಅವರು ಭರವಸೆ ನೀಡಿದರು. ಈ ವೇಳೆ ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಷಗಿರಿರಾವ್, ವೆಂಕಟೇಶ್‌ಮೂರ್ತಿ, ಪಿಡಿಒ ಶಂಕರಪ್ಪ, ರೆವಿನ್ಯೂ ಇನ್ಸ್‌ಪೆಕ್ಟರ್ ಜೆ. ಸಿಂಗ್ ಇದ್ದರು.
ಆರ್‌ಟಿಇ ಕಾರ್ಯಾಗಾರ
ಟೇಕಲ್: 6 ರಿಂದ 14 ವಯೋವುತಿಯ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಲ್ಲ ಶಾಲೆಗಳಲ್ಲಿ ಒದಗಿಸಬೇಕೆಂದು ರೂಪಿಸಿದ ಆರ್‌ಟಿಇ ಕಾಯ್ದೆ ಎಪ್ರಿಲ್ 2010 ರಿಂದ ಭಾರತದ್ಯಂತ ಜಾರಿಗೆ ಬಂದಿದೆ ಎಂದು ತಾಪಂ ಸದಸ್ಯೆ ಮಂಜುಳಾ ವೆಂಕಟೇಶ್ ತಿಳಿಸಿದರು.ಆರ್‌ಟಿಇ ಕಾರ್ಯಾಗಾರವನ್ನು ಟೇಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದ ಬಿಆರ್‌ಸಿ ಜಮೀರ್ ಪಾಷ, ಎಲ್ಲ ಶಾಲೆಗಳಲ್ಲಿ ಯಾವುದೇ ರೀತಿಯ ಅನುದಾನ ಪಡೆಯದೆ ಮಕ್ಕಳನ್ನು ಸೇರಿಸಬಹುದು ಎಂದರು.ಆನಂದ್, ಎಸ್‌ಬಿಸಿ ಅಧ್ಯಕ್ಷ ಕೆ.ಆರ್. ನಾರಾಯಣಸ್ವಾಮಿ, ಶಿಕ್ಷಣ ಸಂಯೋಜಕ ಗಂಗಾಧರ್, ವಿಜಯಕುಮಾರ್, ಎ.ಕೆ.ವೆಂಕಟೇಶ್, ಪ್ರಾಂಶುಪಾಲ ಎ.ಕೆ. ಪಾಪಣ್ಣ, ಉಪಪ್ರಾಂಶುಪಾಲೆ ಪುಷ್ಪಾ, ಮಂಜಪ್ಪ, ಶಿವಾನಂದ್, ಶ್ರೀನಿವಾಸ್, ರಮೇಶ್ ಇದ್ದರು.
ಅವದಿ ಮುಗಿದರೂ ಕಟ್ಟಡ  ತೆರವು ಇಲ್ಲ
ಶ್ರೀನಿವಾಸಪುರ: ರಾಜ್ಯ ಹೆದ್ದಾರಿ ರಸ್ತೆ ಆಗಲೀಕರಣಕ್ಕೆ ನೀಡಿದ ಸಮಯ ಮುಗಿದುದ್ದರು ಪಟ್ಟಣದ ಎಂ.ಜಿ. ರಸ್ತೆಯನ್ನು ಅತಿಕ್ರಿಮಿಸಿರುವ ಕಟ್ಟಡಗಳನ್ನು ತೆರುವುಗೊಳಿಸುವ ಕಾರ್ಯ ಆಮೆ ನಡಿಗೆಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ನಾಗರಿಕರು ದೂರಿದ್ದಾರೆ. ಪಟ್ಟಣದ ಎಂಜಿ ರಸ್ತೆಯ ಅಕ್ಕ- ಪಕ್ಕದ ಮನೆಗಳು ಹಾಗೂ ಅಂಗಡಿಗಳ ಮಾಲೀಕರು ರಸ್ತೆಯನ್ನು ಅತಿಕ್ರಿಮಿಸಿ ರಸ್ತೆ ಆಗಲೀಕರಣ ನೆನೆಗುದಿಗೆ ಬಿದ್ದು ವಾಹನಗಳ  ಓಡಾಟಕ್ಕೆ ತೊಂದರೆಯಾಗಿದ್ದರಿಂದ ರಾಜ್ಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆಯವರು  ಸಾರ್ವಜನಿಕರೊಂದಿಗೆ ಸಭೆ ನಡೆಸಿ ಜ.31ರ ಒಳಗಾಗಿ ಅತಿಕ್ರಮಿಸಿರುವ ಕಟ್ಟಡ ಮಾಲೀಕರು ತಾವಾಗಿಯೇ ತೆರೆವುಗೊಳಿಸಿ ಅಭಿವೃದ್ಧಿಗೆ ಅನುವು ಮಾಡಿಕೊಡದಿದ್ದರೆ ಕಾನೂನು ಕ್ರಮ ಜರುಗಿದಲಾಗುವುದೆಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಇದು ನಡೆದು ಒಂದು ತಿಂಗಳಾದರು ಕೆಲವರು ಇನ್ನೂ ತೆರವುಗೊಳಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.